ಕನ್ನಡ ವಾರ್ತೆಗಳು

ಲಾರಿ – ಬೈಕ್ ಅಪಘಾತ ; ಸವಾರ ಸಾವು, ಸಹಸವಾರ ಗಂಭೀರ – ವಾಹನ ತಪಾಸಣಾ ಕೇಂದ್ರದ ಮುಂದೆ ಸಾರ್ವಜನಿಕರಿಂದ ಪ್ರತಿಭಟನೆ

Pinterest LinkedIn Tumblr

ull_acdent_photo

ಮಂಗಳೂರು, ಸೆ. 10 : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಗ್ರಾಮದ ಬೀರಿಯಲ್ಲಿರುವ ವಾಣಿಜ್ಯ ತೆರಿಗೆ ತಪಾಸಣಾ ಕೇಂದ್ರದ ಎದುರಿನಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ದುರಂತ ಘಟನೆ ಬುಧವಾರ ಬೆಳಗಿನ ಜಾವದಲ್ಲಿ ಸಂಭವಿಸಿದ್ದು, ಇದಕ್ಕೆ ತಪಾಸಣಾ ಕೇಂದ್ರವನ್ನು ಬೇಕಾಬಿಟ್ಟಿಯಾಗಿ ಸ್ಥಾಪಿಸಿರುವುದೇ ಕಾರಣವೆಂದು ಆರೋಪಿಸಿ ಸಂಘಟನೆಯೊಂದರ ಕಾರ್ಯಕರ್ತರು ಮತ್ತು ಬೈಕ್ ಸವಾರರ ಬಂಧುಗಳು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.

ತಲಪಾಡಿ ನಿವಾಸಿ ಇಸಾಕ್ ಎನ್ನುವವರ ಪುತ್ರ ಮಹಮ್ಮದ್ ಝಕಾರಿಯಾ (21) ಮೃತ ಸವಾರನಾಗಿದ್ದು, ಸಹಸವಾರ ಕೆ.ಸಿ. ನಗರದ ಮಹಮ್ಮದ್ ರ ಪುತ್ರ ಶಿಯಾಬ್ ಗಂಭೀರವಾಗಿ ಗಾಯಗೊಂಡಿದ್ದು, ನಗರದ ಇಂಡಿಯಾನಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮಹಮ್ಮದ್ ಝಕಾರಿಯಾ ನಿನ್ನೆ ಬೆಳಗಿನ ಜಾವ ಎರಡು ಗಂಟೆಯ ಸುಮಾರಿಗೆ ಮಂಗಳೂರಿನಲ್ಲಿ ಕೇಟರಿಂಗ್ ಕೆಲಸವನ್ನು ಪೂರೈಸಿಕೊಂಡು ಶಿಯಾಬ್ ಜೊತೆ ಬೈಕಿನಲ್ಲಿ ಮನೆಗೆ ಮರಳುತ್ತಿದ್ದರು. ಬೀರಿಯಲ್ಲಿರುವ ವಾಣಿಜ್ಯ ತೆರಿಗೆ ಕೇಂದ್ರದ ಬಳಿ ತಲುಪಿದಾಗ ಮುಂದಿನಿಂದ ಹೋಗುತ್ತಿದ್ದ ಲಾರಿ ಬಲಬದಿಗೆ ಚಲಿಸಿ ಬಳಿಕ ಯಾವುದೇ ಸೂಚನೆ ನೀಡದೆ ಏಕಾಏಕಿ ಎಡಕ್ಕೆ ತಿರುಗಿ ಮಹಮ್ಮದ್ ಝಕಾರಿಯರ ಬೈಕಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಸವಾರರಿಬ್ಬರೂ ತೀವ್ರವಾಗಿ ಗಾಯಗೊಂಡಿದ್ದು, ಈ ಪೈಕಿ ಮಹಮ್ಮದ್ ಝಕಾರಿಯಾ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

ಲಾರಿ ಚಾಲಕನ ಆಜಾಗ್ರತೆಯ ಚಾಲನೆ ಈ ಅವಘಡಕ್ಕೆ ಕಾರಣವೆನ್ನಲಾಗಿದೆ.

ಈ ಸ್ಥಳದಲ್ಲಿ ವಾಣಿಜ್ಯ ತೆರಿಗೆ ತನಿಖಾ ಕೇಂದ್ರವನ್ನು ಸ್ಥಾಪಿಸಿದ್ದು ಅವೈಜ್ಞಾನಿಕವಾಗಿದ್ದು, ಅದರ ಎದುರು ರಾ. ಹೆದ್ದಾರಿಯ ಎರಡೂ ಬದಿಗಳಲ್ಲಿ ಘನವಾಹನಗಳು ನಿಲ್ಲುವುದು ಇಲ್ಲಿ ಅಪಘಾತಗಳಿಗೆ ಮುಖ್ಯ ಕಾರಣವಾಗಿದೆಯೆಂದು ಆರೋಪಿಸಿ ತುಳುನಾಡು ರಕ್ಷಣಾ ವೇದಿಕೆಯ ಸ್ಥಳೀಯ ಕಾರ್ಯಕರ್ತರು ಮತ್ತು ಯುವಕರ ಬಂಧುಗಳು ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಜಿ. ಪಂ. ಉಪಾಧ್ಯಕ್ಷ ಸತೀಶ್ ಕುಂಪಲ, ಸೋಮೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಉಚ್ಚಿಲ ಮತ್ತು ತಾ.ಪಂ. ಸದಸ್ಯ ರಾಜೀವಿ ಕೆಂಪುಮಣ್ಣು ಅವರ ನೇತೃತ್ವದಲ್ಲಿ ವಾಣಿಜ್ಯ ತೆರಿಗೆ ಆಯುಕ್ತರ ಜೊತೆ ಮಾತುಕತೆ ನಡೆದು ವ್ಯವಸ್ಥಿತವಾಗಿ ಬ್ಯಾರಿಕೇಡ್ ಗಳನ್ನು ಅಳವಡಿಸಲು ನಿರ್ಧರಿಸಲಾಯಿತು.

ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Write A Comment