ಕನ್ನಡ ವಾರ್ತೆಗಳು

ಹುಸಿ ಬಾಂಬ್ ಕರೆ ಆರೋಪ : ಬೆಂಗಳೂರು ಪೊಲೀಸರಿಂದ ಮಂಗಳೂರಿನ ಯುವಕನ ಬಂಧನ..?

Pinterest LinkedIn Tumblr

ಮಂಗಳೂರು, ಸೆ. 10: ಬೆಂಗಳೂರಿನ ಕೇಂದ್ರ ಪ್ರದೇಶದಲ್ಲಿ ಬಾಂಬ್ ಇಡಲಾಗಿದೆ ಎಂದು ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ಪ್ರಕರಣಕ್ಕೆ ಸಬಂಧಿಸಿ ನಗರಕ್ಕೆ ಧಾವಿಸಿದ ಬೆಂಗಳೂರು ಪೊಲೀಸರು ಹುಸಿ ಬಾಂಬ್‌ಕರೆ ಮಾಡಿದ ಆರೋಪದಲ್ಲಿ ಹಿರಿಯ ನಾಗರಿಕನೋರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾದ ವ್ಯಕ್ತಿಯನ್ನು ಜಪ್ಪಿನಮೊಗರು ನಿವಾಸಿ ರೆಜಿನಾಲ್ಡ್ (64) ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಕೇಂದ್ರ ಪ್ರದೇಶವೊಂದರಲ್ಲಿ ಬಾಂಬ್ ಇಡಲಾಗಿದೆ ಎಂದು ಆತ ಸೋಮವಾರ ರಾತ್ರಿ ಬೆಂಗಳೂರಿನ ಕಂಟ್ರೋಲ್ ರೂಂಗೆ ಕರೆ ಮಾಡಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಈ ಬಗ್ಗೆ ಶೋಧನೆ ನಡೆಸಿದಾಗ ಅದು ಹುಸಿ ಕರೆ ಎಂದು ತಿಳಿದುಬಂದಿತ್ತು. ಕಂಟ್ರೋಲ್ ರೂಂಗೆ ಬಂದ ಮೊಬೈಲ್ ಫೋನ್ ಕರೆಯ ಜಾಡು ಹಿಡಿದ ಬೆಂಗಳೂರು ಪೊಲೀಸರಿಗೆ ಮಂಗಳೂರಿನ ವಿಳಾಸದ ವ್ಯಕ್ತಿಯೋರ್ವನಿಂದ ಕರೆ ಬಂದ ಬಗ್ಗೆ ಖಚಿತಪಡಿಸಿಕೊಂಡು ಮಂಗಳೂರಿಗೆ ಆಗಮಿಸಿ ರೇಜಿನಾಲ್ಡ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಯಾಕಾಗಿ ಹುಸಿ ಬಾಂಬ್ ಕರೆ ಮಾಡಿದ್ದಾನೆ ಎಂಬುದು ನಿಗೂಢವಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದೇ ರೀತಿಯ ಹುಸಿ ಬಾಂಬ್ ಸಂದೇಶವೊಂದು ಶನಿವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಟರ್ಮಿನಲ್ ವ್ಯವಸ್ಥಾಪಕರಿಗೆ ಬಂದಿತ್ತು.

ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಕೇರಳ ಮೂಲದ ಗೋಕುಲ್ ಎಂಬಾತ ಐಸಿಸ್ ಸಂಘಟನೆಯ ಹೆಸರಿನಲ್ಲಿ ಹಜ್ ಯಾತ್ರಿಕರನ್ನು ಹೊತ್ತೊಯ್ಯುವ ವಿಮಾನವನ್ನು ಸ್ಫೋಟಿಸುವ ಬೆದರಿಕೆಯ ಸಂದೇಶವನ್ನು ರವಾನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment