ಕನ್ನಡ ವಾರ್ತೆಗಳು

ರೈತ ಸಮುದಾಯದ ಏಳಿಗೆಗಾಗಿ ಜನ ಹಿತ ರಕ್ಷಣಾ ವೇದಿಕೆಯ ವತಿಯಿಂದ ಪ್ರತಿಭಟನಾ ಸಭೆ

Pinterest LinkedIn Tumblr

Puttur_protest_pic_1

ಪುತ್ತೂರು,ಆಗಸ್ಟ್.31 :  ಪುತ್ತೂರು ಮಿನಿ ವಿಧಾನಸೌಧದ ಎದುರು ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ವತಿಯಿಂದ ಪ್ರತಿಭಟನಾ ಸಭೆ ನಡೆಯಿತು. ರೈತರ ಸರಣಿ ಆತ್ಮಹತ್ಯೆಗಳ ಬಗ್ಗೆ ಹಾಗೂ ಅವರ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ರೈತ ಆಳುವ ವ್ಯವಸ್ಥೆಯ ವಿರುದ್ದ ಸಿಡಿದೆದ್ದು ಬಂದೂಕು ಕೈಯ್ಯಲ್ಲಿ ಹಿಡಿಯುವ ಪರಿಸ್ಥಿತಿ ಬಂದೀತು. ಇದಕ್ಕೆ ರಾಜಕಾರಣಿಗಳು ಅವಕಾಶ ಮಾಡಿಕೊಡಬೇಡಿ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.

ನಮ್ಮನ್ನು ಆಳುವ ಸರಕಾರಗಳು, ನಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಎ.ಸಿ. ಕೋಣೆಯಲ್ಲಿ ಕೂತ ಅಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು ರೈತರಿಗೆ ಮಾರಕವಾಗುವ ನೀತಿಗಳನ್ನು ರೂಪಿಸುತ್ತಿದ್ದಾರೆ. ಈ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ರೈತರು ಹಿಂಸೆಯ ಹಾದಿ ಹಿಡಿದಾರು. ಇದನ್ನು ತಪ್ಪಿಸಬೇಕಾದರೆ ಈಗಿಂದೀಗಲೇ ಸರಕಾರಗಳು ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದ ಅವರು, ರೈತರ ಆತ್ಮಹತ್ಯೆ ಮತ್ತು ರೈತರ ಸಮಸ್ಯೆಯ ಶಾಪ ರಾಜಕಾರಣಿಗಳಿಗೆ ತಟ್ಟೀತು ಎಂದು ಎಚ್ಚರಿಸಿದರು.

Puttur_protest_pic_3 Puttur_protest_pic_2

ಜಿಪಂ ಸದಸ್ಯ ಕೇಶವ ಗೌಡ ಬಜತ್ತೂರು ಮಾತನಾಡಿ, 94ಸಿ ಪ್ರಕರಣಗಳಲ್ಲಿ ಕೂಡಾ ಭ್ರಷ್ಟಾಚಾರ ವಾಸನೆ ಕಂಡು ಬರುತ್ತಿದೆ ಎಂದು ಆಪಾದಿಸಿದರು. ರೈತರಿಗೆ ಕುಮ್ಕಿ ಹಕ್ಕು ನೀಡಬೇಕೆಂದು ಅವರು ಈ ವೇಳೆ ಆಗ್ರಹಿಸಿದರು.

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಮುಖಂಡರಾದ ಸತೀಶ್ ಎರ್ಕ ಕೈಕಂಬ, ಚಂದ್ರಶೇಖರ್ ಬಾಳುಗೋಡು, ಸೂರ್ಯನಾರಾಯಣ ರಾವ್, ಜಯರಾಮ ಕಟ್ಟೆಮನೆ, ಮೋಹನ ಪಳ್ಳಿಗದ್ದೆ, ಜಯಪ್ರಕಾಶ್ ಕೂಜುಗೋಡು, ವಿಬಿನ್ ಅಡ್ಡಹೊಳೆ, ಶಿವರಾಮ ಭಟ್ ಪುತ್ತೂರು, ಸಂಕಪ್ಪ ಗೌಡ ಪುತ್ತೂರು ಮುಂತಾದವರು ಉಪಸ್ಥಿತರಿದ್ದರು.

Write A Comment