ಮಂಗಳೂರು: ನಗರದ ಅತ್ತಾವರ ಕೆಎಂಸಿ ಆಸ್ಪತ್ರೆ ಬಳಿ ದುಷ್ಕರ್ಮಿಗಳು ಆಟೊ ಚಾಲಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬುಧವಾರ ತಡರಾತ್ರಿ ನಡೆದಿದ್ದು, ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಆಟೊ ಚಾಲಕ ಘಟನೆ ನಡೆದ ತಕ್ಷಣ ತಾನೇ ನಡೆದುಕೊಂಡು ಹೋಗಿ ಪಕ್ಕದಲ್ಲೇ ಇದ್ದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ ಗುರುದತ್ (35) ಎಂದು ಗುರುತಿಸಲಾಗಿದೆ.
ಗುರುದತ್ ರ ಸಂಬಂಧಿ ಮಹಿಳೆಯೋರ್ವರು ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಮಗುವಿಗೆ ಜನನ ನೀಡಿದ್ದು, ಅವರನ್ನು ನೋಡಿ ಹೋಗಲೆಂದು ನಿನ್ನೆ ರಾತ್ರಿ ಅಲ್ಲಿಗೆ ತೆರಳಿದ್ದರು. ತಾಯಿ-ಮಗುವನ್ನು ಕಂಡು ಮಾತನಾಡಿಸಿ ರಾತಿ 10.45ರ ಸುಮಾರಿಗೆ ಆಸ್ಪತ್ರೆಯಿಂದ ಹೊರ ಬಂದು ಸಮೀಪದ ರಿಕ್ಷಾ ಪಾರ್ಕ್ ನಲ್ಲಿ ನಿಲ್ಲಿಸಿದ್ದ ತನ್ನ ರಿಕ್ಷಾದಲ್ಲಿ ಕುಳಿತುಕೊಂಡು ಯಾರೊಂದಿಗೋ ಮೊಬೈಲ್ ಪೋನ್ ನಲ್ಲಿ ಮಾತನಾಡುತ್ತಿದ್ದರು.
ಈ ವೇಳೆ ಬೈಕ್ ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳ ತಂಡ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಗುರುದತ್ ರಿಕ್ಷಾದಿಂದ ಹೊರಕ್ಕೆ ಹಾರಿ ನೆರವಿಗಾಗಿ ಬೊಬ್ಬೆ ಹೊಡೆದಿದ್ದು, ಹಲ್ಲೆಕೋರರು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ. ಎಡಗೈ, ಭುಜ ಮತ್ತು ಬೆನ್ನಿಗೆ ತೀವ್ರವಾಗಿ ಗಾಯಗೊಂಡಿರುವ ಗುರುದತ್ ತಕ್ಷಣ ಆಸ್ಪತ್ರೆಯೊಳಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಬಳಿಕ ಅದೇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಆ.24ರಂದು ಸಂಜೆ ಅತ್ತಾವರದಲ್ಲಿ ಹಿಂದು ಸಂಘಟನೆಗಳಿಗೆ ಸೇರಿದ ಕೆಲವರು ಹಿಂದು ಹುಡುಗಿಗೆ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಮುಸ್ಲಿಂ ಯುವಕನನ್ನು ಅರೆನಗ್ನಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದ ಘಟನೆಗೆ ಪ್ರತೀಕಾರದವಾಗಿ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿರಬಹುದು ಎಂಬ ವ್ಯಾಪಕ ಶಂಕೆ ವ್ಯಕ್ತವಾಗಿದೆ.
ಹಲ್ಲೆಕೋರರ ಪರಿಚಯ ತನಗಿಲ್ಲವೆಂದು ಗುರುದತ್ ಸ್ಪಷ್ಟಪಡಿಸಿದ್ದಾರೆ. ಹಲ್ಲೆಗೆ ಕಾರಣವೇನೆಂದು ತಕ್ಷಣಕ್ಕೆ ತಿಳಿದು ಬಂದಿಲ್ಲವಾದರೂ ಅತ್ತಾವರದಲ್ಲಿಯೇ ನಡೆದಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆಗೆ ಪ್ರತೀಕಾರವಾಗಿ ಈ ಘಟನೆ ನಡೆದಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.