ಕನ್ನಡ ವಾರ್ತೆಗಳು

ರಾಷ್ಟ್ರೀಯ ಶಿಕ್ಷಣ ನೀತಿ: ಜಿಲ್ಲಾ ಮಟ್ಟದ ಸಮಲೋಚನಾ ಸಭೆ

Pinterest LinkedIn Tumblr

Dc_zp_photo

ಮಂಗಳೂರು. ಅಗಸ್ಟ್. 27: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲು ಜಿಲ್ಲಾ ಮಟ್ಟದ ಸಮಾಲೋಚನಾ ಸಭೆ ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣ ದಲ್ಲಿ ನಡೆಯಿತು.  ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ, ಶಾಲಾ ಹಂತದಲ್ಲಿ ಸಮಾನತೆ ಸೃಷ್ಟಿಯಾಗಬೇಕಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಸರಕಾರಿ ನೌಕರರ ಮಕ್ಕಳೂ ಸರಕಾರಿ ಶಾಲೆಯಲ್ಲಿ ದಾಖಲಾಗುವಂತಾದರೆ, ಸರಕಾರಿ ಶಾಲೆಗಳು ಬೆಳವಣಿಗೆ ಹೊಂದಲಿವೆ ಎಂದರು.

ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ,  30 ವರ್ಷಗಳ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿತವಾಗುತ್ತಿದೆ. ಮಕ್ಕಳ ಉತ್ತಮ ಭವಿಷ್ಯವನ್ನು ಗಮನ ದಲ್ಲಿರಿಸಿ, ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂತೆ ಶಿಕ್ಷಣ ನೀತಿ ರೂಪಿತವಾಗಬೇಕು. ಮಕ್ಕಳಲ್ಲಿ ಕೌಶಲ್ಯ ಚಟುವಟಿಕೆ ಮತ್ತು ಧನಾತ್ಮಕ ಬೆಳವಣಿಗೆಯ ಅಂಶವು ನೀತಿಯಲ್ಲಿರಬೇಕು. ಎಂದು ಅವರು ಹೇಳಿದರು. ಪರೀಕ್ಷಾ ಪದ್ಧತಿಯಲ್ಲಿ ಮಾರ್ಪಾಡು ಮಾಡಿರುವುದರಿಂದ ಮಕ್ಕಳ ಕಲಿಕಾ ಗುಣಮಟ್ಟ ಕಡಿಮೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಾರ್ವಜನಿಕರೊಂದಿಗೆ ವಿಸ್ತೃತ ಚರ್ಚೆಯಾಗಬೇಕಿದೆ. ಜೀವನಮೌಲ್ಯ, ನೈತಿಕತೆ ಗಳನ್ನು ಬೋಧಿಸುವ ಶಿಕ್ಷಣವು ಅಗತ್ಯ. ಕಲೆ ಮತ್ತು ಸಂಸ್ಕೃತಿ, ಕ್ರೀಡೆಗೆ ಅಂಕಗಳನ್ನು ನಿಗದಿಪಡಿಸಬೇಕು. ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅನುಗುಣವಾಗಿ ಶಿಕ್ಷಣ ಇರಬೇಕು. ಮುಖ್ಯವಾಗಿ ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವನೆ ಬೆಳಸಬೇಕಿದೆ. ಶಿಕ್ಷಕರೂ ಇದಕ್ಕೆ ಸಹಕರಿಸಬೇಕು ಎಂದು ಹೇಳಿದರು.

ಹಲವು ಖಾಸಗಿ ಶಾಲೆಗಳಲ್ಲೂ ಅಗತ್ಯ ಮೂಲಸೌಕರ್ಯಗಳಿಲ್ಲದೆ, ಅನೇಕ ನ್ಯೂನತೆಗಳಿರುತ್ತವೆ. ಇದಕ್ಕೆ ಹೋಲಿಸಿದ್ದಲ್ಲಿ ಸರಕಾರಿ ಶಾಲೆಗಳು ಉತ್ತಮ ಸ್ಥಿತಿಯಲ್ಲಿವೆ. ಶಿಕ್ಷಣದೊಂದಿಗೆ ಮಕ್ಕಳು ತಮ್ಮ ಪರಂಪರಾಗತ ಕುಲಕಸುಬುಗಳನ್ನು ಕಲಿಯುವಂತಾಗಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಸಿ.ಕೆ. ಚಂದ್ರಕಲಾ, ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಸಹ ನಿರ್ದೇಶಕ ನಾಗೇಂದ್ರ ಮದ್ಯಸ್ಥ, ಡಿಡಿಪಿ‌ಐ ವಾಲ್ಟರ್ ಡಿಮೆಲ್ಲೋ ಮತ್ತಿತರರು ಉಪಸ್ಥಿತರಿದ್ದರು. ಸರ್ವಶಿಕ್ಷಣ ಅಭಿಯಾನದ ಉಪಯೋಜನಾ ಸಮನ್ವ ಯಾ ಧಿಕಾರಿ ಗೀತಾ ಸಭೆಯನ್ನು ನಿರ್ವಹಿಸಿದರು.

Write A Comment