ಕುಂದಾಪುರ: ಆ.14 ತಡರಾತ್ರಿ ಸೌಕೂರಿನ ದುರ್ಗಾಪರಮೇಶ್ವರೀ ದೇವಸ್ಥಾನದ ಹಿಂಬದಿ ಬಾಗಿಲಿನ ಮೂಲಕ ಒಳನುಸುಳಿದ ಕಳ್ಳರು ದೇವಳದ ಒಳಗಿದ್ದ ಕಾಣಿಕೆ ಹುಂಡಿ ಹಾಗೂ ಗರ್ಭಗುಡಿಯಲ್ಲಿದ್ದ ಚಿನ್ನದ ಉತ್ಸವಮೂರ್ತಿಯನ್ನು ಕದ್ದೊಯ್ದಿದ್ದರು, ಕಳವಾದ ಚಿನ್ನಾಭರಣ ಹಾಗೂ ನಗದಿನ ಒಟ್ಟು ಮೌಲ್ಯ 50 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿತ್ತು. ಕಳವು ನಡೆದ ಸೌಕೂರಿನ ದೇವಳಕ್ಕೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಅವರು ಆ.26 ಬುಧವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೇವಳಕ್ಕೆ ಸಂಬಂಧಪಟ್ಟವರು, ಅರ್ಚಕರು ಹಾಗೂ ಸಾರ್ವಜನಿಕರೊಂದಿಗೆ ಮಾತನಾಡಿ ಮಾಹಿತಿ ಕಲೆ ಹಾಕಿದ ಎಸ್ಪಿ ಅವರು ಶೀಘ್ರವೇ ಆರೋಪಿಯನ್ನು ಬಂಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಅಣ್ಣಾಮಲೈ, ಈಗಾಗಲೇ ಡಿವೈಎಸ್ಪಿ ನೇತೃತ್ವದ ಒಂದು ತಂಡ ಹಾಗೂ ಉಡುಪಿ ಡಿಸಿಐಬಿ ನೇತೃತ್ವದ ಒಂದು ತಂಡ ತನಿಖೆಯ ಜಾಡು ಹಿಡಿದು ಕಾರ್ಯೋನ್ಮುಖವಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಂದು ತಿಂಗಳ ಅಂತರದಲ್ಲಿ ನಾಲ್ಕು ದೇವಳಗಳ ಕಳುವಾಗಿದೆ. ಈಗಾಗಲೇ ಕಳ್ಳರ ತಂಡದ ಬಗ್ಗೆಯೂ ಕೆಲವೊಂದು ಮಹತ್ವದ ಸುಳಿವುಗಳು ಲಭ್ಯವಾಗಿದೆ. ಸಾವಿರಾರು ಭಕ್ತರ ಭಾವನೆಗಳನ್ನು ಮೀರಿಯೂ ಇಂತಹಾ ಕಳ್ಳತನ ನಡೆದ್ಸಿದ್ದು ಪೊಲೀಸ್ ಇಲಾಖೆಗೂ ಚಾಲೆಂಜಿಂಗ್ ಆಗಿದೆ. ಕರಾವಳಿ ಪ್ರದೇಶದಲ್ಲಿ ದೇವಸ್ಥಾನಗಳಿಗೆ ಆರ್ಥಿಕ ಉತ್ಪನ್ನ ಜಾಸ್ಥಿ ಬರುವ ಕಾರಣದಿಂದಾಗಿ ಈ ಬಗ್ಗೆ ದೇವಸ್ಥಾನಕ್ಕೆ ಸಂಬಂದಪಟ್ಟವರೂ ಕೂಡ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು, ಅಂತೆಯೇ ಮುಂದಿನ ಒಂದು ತಿಂಗಳುಗೊಳಗಾಗಿ ಗ್ರೇಡ್-ಎ ದೇವಸ್ಥಾನಗಳೆಲ್ಲದಕ್ಕೂ ಸಿ.ಸಿ. ಕ್ಯಾಮೆರಾ ಹಾಗೂ ಅಲರಾಂ ಅಳವಡಿಸುವ ಬಗ್ಗೆ ಸಂಬಂದಪಟ್ಟವರಿಗೆ ಸೂಚನೆ ನೀಡಲಾಗಿದೆ. ಅಂತರಾಜ್ಯ ಕಳ್ಳರೊಂದಿಗೆ ಸ್ಥಳೀಯರು ಸೇರಿಕೊಂಡು ಕೃತ್ಯವೆಸಗಿರುವ ನೆಲೆಯಲ್ಲಿಯೂ ತನಿಖೆ ಸಾಗುತ್ತಿದೆ, ಶೀಘ್ರವೇ ಬಂಧಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ., ಕುಂದಾಪುರ ಎಸ್ಸೈ ನಾಸೀರ್ ಹುಸೇನ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.