ಮಂಗಳೂರು, ಆ.21 – ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯವೈಖರಿ ಬಗ್ಗೆ ಸ್ವಪಕ್ಷೀಯರೇ ಟೀಕೆ ಮಾಡಿರುವುದು ಒಳ್ಳೆಯ ರಾಜಕೀಯ ಬೆಳವಣಿಗೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ವಿಶ್ಲೇಷಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಎರಡು ವರ್ಷದ ಸಿಎಂ ದುರಹಂಕಾರದ ಆಡಳಿತದ ಬಗ್ಗೆ ಕಾಂಗ್ರೆಸ್ಸಿಗರೇ ಎಚ್ಚೆತ್ತಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರದೇ ತಂಡ, ಅವರದೇ ಸಲಹೆಗಾರರನ್ನು ಕಟ್ಟಿಕೊಂಡು ಕೆಟ್ಟ ಆಡಳಿತ ನೀಡಿದ್ದಾರೆ. ಕಾಂಗ್ರೆಸ್ ಸಂಪೂರ್ಣ ನಾಶವಾಗುವ ಮುನ್ನ ಈಗ ಕಾಂಗ್ರೆಸ್ ನಾಯಕರು ಎಚ್ಚೆತ್ತಿದ್ದಾರೆ ಎಂದು ಡಿವಿಎಸ್ ಟೀಕಿಸಿದರು.
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸುವ ವಿಶ್ವಾಸವಿದೆ. ಮೋದಿ ಸರ್ಕಾರದ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಶಕೆ ಒಂದೆಡೆಯಾದರೆ, ಸಿದ್ದರಾಮಯ್ಯ ಅವರ ಅಸಹಕಾರದ ಆಡಳಿತ ಇನ್ನೊಂದೆಡೆ. ಈ ಬಗ್ಗೆ ಬೆಂಗಳೂರು ಜನತೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರೈತರ ಆತ್ಮಹತ್ಯೆ ಕುರಿತು ರಾಜ್ಯ ಸರ್ಕಾರ ಕೇಂದ್ರದಿಂದ ಹೆಚ್ಚಿನ ನೆರವು ಕೋರಿಲ್ಲ. ಆದರೂ ಕೇಂದ್ರ ಸಕ್ಕರೆ ಕಂಪೆನಿಗಳಿಗೆ 6 ಸಾವಿರ ಕೋಟಿ ರೂ. ಬಡ್ಡಿ ರಹಿತ ಸಾಲ ಬಿಡುಗಡೆ ಮಾಡಿದೆ ಎಂದು ಹೇಳಿದ ಸದಾನಂದ ಗೌಡ, ಮೆಮೋನ್ ಗಲ್ಲು ಕುರಿತಂತೆ ರಾಷ್ಟ್ರೀಯ ಹಿತದೃಷ್ಟಿಯಿಂದ ಮೂರು ರಾಷ್ಟ್ರೀಯ ಟಿವಿ ವಾಹಿನಿಗಳಿಗೆ ನೋಟೀಸ್ ಜಾರಿಗೊಳಿಸಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.