ಮಂಗಳೂರು, ಆ.21- ಕರಾವಳಿ ಭಾಗದಲ್ಲಿಯೂ ಈಗ ಈರುಳ್ಳಿ ಕಣ್ಣೀರುಳ್ಳಿಯಾಗಿ ಬಳಕೆದಾರರ ಕಣ್ಣಲ್ಲಿ ನೀರು ತರಿಸುತ್ತಿದೆ. ದೇಶದ ಅತೀ ದೊಡ್ಡ ಈರುಳ್ಳಿ ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ಲಸಲ್‍ಗಾಂವ್‍ನಲ್ಲಿ ಈಗಾಗಲೇ ಈರುಳ್ಳಿ ರಖಂ ದರ ಕ್ವಿಂಟಾಲ್‍ಗೆ ಐದು ಸಾವಿರ ಆಸುಪಾಸಿಗೆ ತಲುಪಿದ್ದು, ಕರಾವಳಿ ಭಾಗಕ್ಕೂ ಇದರ ಬಿಸಿ ತಟ್ಟಿದೆ.
ಮಂಗಳೂರು ಮಾರುಕಟ್ಟೆಯಲ್ಲಿ ಇಂದು ರಖಂ ಹೊಸದಕ್ಕೆ ಕ್ವಿಂಟಾಲ್‍ಗೆ 4,800 ರೂ., ಹಳೆಯದಕ್ಕೆ 5,500 ರೂ. ಧಾರಣೆಯಿದ್ದು, ಚಿಲ್ಲರೆ ಮಾರಾಟ ಕಿಲೋ ಒಂದಕ್ಕೆ ಕ್ರಮವಾಗಿ 60 ರೂ. ಹಾಗೂ 50 ರೂ. ಬೆಲೆ ದಾಖಲಾಗಿದೆ.
ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರುತ್ತಲೇ ಇದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಇದಲ್ಲದೆ, ರಾಜ್ಯದಲ್ಲಿ ಈರುಳ್ಳಿ ಪೂರೈಕೆಯಲ್ಲಿಯೂ ಕೊರತೆ ಬಾಧಿಸುತ್ತಿದ್ದು, ಬೆಲೆ ತೆತ್ತರೂ ಈರುಳ್ಳಿ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈಗಾಗಲೇ ಹೋಟೇಲುಗಳಲ್ಲಿ ಈರುಳ್ಳಿ ಬಳಸಿ ತಯಾರಿಸುವ ಖಾದ್ಯಗಳಿಗೆ `ಗುಡ್ ಬೈ’ ಹೇಳಲಾಗಿದೆ. 15 ರೂಪಾಯಿಗೆ ಈರುಳ್ಳಿ ಬಜೆ, 30 ರೂ.ಗೆ ಈರುಳ್ಳಿ ದೋಸೆ ಮಾರಾಟ ಮಾಡಿದರೂ ಅಸಲು ಕೈಸೇರುತ್ತಿಲ್ಲ ಎನ್ನುತ್ತಾರೆ ಕರಾವಳಿಯ ಹೊಟೇಲು ಮಾಲಕರೋರ್ವರು. ಹೀಗಾಗಿ ಕೆಲವೆಡೆ ಖಾದ್ಯ ತಯಾರಿಸಲಾಗುತ್ತಿದೆಯಾದರೂ ಬೆಲೆ ಮಾತ್ರ ದುಪ್ಪಟ್ಟಾಗಿದೆ.
ಗುರುವಾರ ಕ್ವಿಂಟಾಲ್ ಈರುಳ್ಳಿ ಬೆಲೆಯಲ್ಲಿ ದಿಢೀರನೆ ಸುಮಾರು 400 ರೂ. ಗಳಷ್ಟು ಏರಿಕೆ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ರಖಂ ಬೆಲೆ ಸದ್ಯ ಕೆಜಿಗೆ 50 ರೂ. ಆಗಿದ್ದು, ಚಿಲ್ಲರೆ ಮಾರಾಟ ಬೆಲೆ 65ರಿಂದ 70 ರೂ.ಗೆ ಏರಿದೆ.
ನಿತ್ಯ ಬಳಕೆಯ ವಸ್ತುಗಳ ಪೈಕಿ ಒಂದಾಗಿರುವ ಈರುಳ್ಳಿ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಜೀವನೋಪಾಯಕ್ಕಾಗಿ ಹೊಟೇಲು ನಡೆಸುವವರು, ಬಡ ಮಧ್ಯಮವರ್ಗದವರು ಮಾತ್ರ ಈರುಳ್ಳಿ ಕಂಡೊಡನೆ ಕಣ್ಣಿರು ಸುರಿಸುವಂತಾಗಿದೆ.