ಮಂಗಳೂರು, ಆ.20: ಮೂವರ ಗುಂಪೊಂದು ಓರ್ವ ಕಾಲೇಜು ವಿದ್ಯಾರ್ಥಿ ಸೇರಿದಂತೆ ಇಬ್ಬರನ್ನು ತಲವಾರುಗಳಿಂದ ಕಡಿದು ಕೊಲೆಗೈಯ್ಯಲು ಯತ್ನಿಸಿದ ಸಿನಿಮೀಯ ಘಟನೆ ನಿನ್ನೆ ಹಾಡುಹಗಲೇ ನಗರದ ಕೆ.ಎಸ್. ರಾವ್ ರಸ್ತೆಯಲ್ಲಿ ಸಂಭವಿಸಿದೆ.
ಸೋಮೇಶ್ವರದ ಚೋನಿ, ಉಳ್ಳಾಲದ ರಾಹುಲ್ ಮತ್ತು ಬಜಿಲಕೇರಿಯ ಶೈಲು ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ನಗರದ ಖಾಸಗಿ ಟ್ಯುಟೋರಿಯಲ್ ವೊಂದರಲ್ಲಿ ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿಯಾಗಿರುವ ನಿಖಿಲ್ ಶೆಟ್ಟಿ ನಿನ್ನೆ ನಾಗರ ಪಂಚಮಿ ಪ್ರಯುಕ್ತ ಬೆಳಿಗ್ಗೆ 10.30ರ ಸುಮಾರಿಗೆ ಅತ್ತಾವರದ ಉಮಾಮಹೇಶ್ವರಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಸ್ನೇಹಿತ ಷಣ್ಮುಖ ಸಿಕ್ಕಿದ್ದು, ಇಬ್ಬರೂ ಕೋರ್ಟ್ ನಲ್ಲಿ ಕೌಶಿಕ್ ಎಂಬಾತನ ಪ್ರಕರಣದ ವಿಚಾರಣೆ ವೀಕ್ಷಿಸಲೆಂದು ಕೋರ್ಟ್ ಗೆ ತೆರಳಿದ್ದರು. ಕೌಶಿಕ್ ಇವರ ಸ್ನೇಹಿತವೆನ್ನಲಾಗಿದೆ.
ವಿಚಾರಣೆ ಮುಂದೂಡಲ್ಪಟ್ಟಿದ್ದರಿಂದ ನಿಖಿಲ್ ಶೆಟ್ಟಿ ಮತ್ತು ಷಣ್ಮುಖ ಮಧ್ಯಾಹ್ನ 12.15ರ ಸುಮಾರಿಗೆ ಬೈಕ್ ನಲ್ಲಿ ಕೋರ್ಟ್ ನಿಂದ ಹೊರಟು ಕೆಎಸ್ ರಾವ್ ರಸ್ತೆಯಲ್ಲಿರುವ ಎಸ್ ಸಿಡಿಸಿಸಿ ಬ್ಯಾಂಕಿನ ಗೇಟ್ ಬಳಿ ತಲುಪುತ್ತಿದ್ದಂತೆ ಹಿಂದಿನಿಂದ ಬಂದ ಆರೋಪಿಗಳ ಕಾರು ಬೈಕಿಗೆ ಡಿಕ್ಕಿ ಹೊಡೆದಿತ್ತು. ಇಬ್ಬರೂ ಬೈಕ್ ಸಹಿತ ರಸ್ತೆಗೆಸೆಯಲ್ಪಟ್ಟಿದ್ದು, ಆರೋಪಿಗಳು ತಲವಾರುಗಳೊಂದಿಗೆ ಕೆಳಗಿಳಿದಿದ್ದರು. ಈ ಪೈಕಿ ಚೋನಿ ನಿಖಿಲ ಶೆಟ್ಟಿಗೆ ಕಡಿಯಲೆಂದು ತಲವಾರು ಬೀಸಿದಾಗ ಅವರು ಎಸ್ ಸಿಡಿಸಿಸಿ ಬ್ಯಾಂಕಿನ ಕಂಪೌಂಡ್ ಹಾರಿ ತಪ್ಪಿಸಿಕೊಂಡಿದ್ದರು.
ಬಳಿಕ ಶೈಲು ಬಜಿಲಕೇರಿ ಮತ್ತು ಪಾಹುಲ್ ಉಳ್ಳಾಲ ಷಣ್ಮುಖನಿಗೆ ಕಡಿಯಲು ತಲವಾರುಗಳನ್ನು ಬೀಸಿದಾಗ ಶೈಲುವಿನ ತಲವಾರು ರಸ್ತೆಗೆ ಬಿದ್ದಿತ್ತು. ರಾಹುಲ್ ನ ತಲವಾರು ಕೂಡ ಕೈಯಿಂದ ಜಾರಿದ್ದು ಷಣ್ಮುಖ ಜೋರಾಗಿ ಬೊಬ್ಬೆ ಹೊಡೆಯುತ್ತ ಸಿಟಿ ಸೆಂಟರ್ ಕಡೆಗೆ ಓಡಿದ್ದ. ಸ್ಥಳದಲ್ಲಿ ಸಾರ್ವಜನಿಕರು ಸೇರಿದಾಗ ಆರೋಪಿಗಳು ತಲವಾರುಗಳ ಸಹಿತ ಕಾರಿನಲ್ಲಿ ಹಂಪನಕಟ್ಟೆಯ ಕಡೆಗೆ ಪರಾರಿಯಾಗಿದ್ದಾರೆ. ಗಾಯಗೊಂಡಿರುವ ನಿಖಿಲ್ ಶೆಟ್ಟಿ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಕೌಶಿಕ್ ಮತ್ತು ಆರೋಪಿಗಳ ನಡುವೆ ಪೂರ್ವ ದ್ವೇಷವಿದ್ದು, ಆತನ ಜೊತೆ ನಿಖಿಲ್ ಶೆಟ್ಟಿ ಮತ್ತು ಷಣ್ಮುಖ ಇದ್ದುದನ್ನು ಕಂಡು ಅವರ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ನಿಖಿಲ್ ಶೆಟ್ಟಿ ನೀಡಿರುವ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಬಂದರು ಠಾಣಾ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ