ಮಂಗಳೂರು,ಆಗಸ್ಟ್.20: ಮಂಗಳೂರು ಆಕಾಶವಾಣಿಯ ಜನಪ್ರಿಯ ಸರಣಿ ಕಾರ್ಯಕ್ರಮಗಳಲ್ಲೊಂದಾದ ಹರ್ಷವಾರದ ಅತಿಥಿ ಆಗಸ್ಟ್ 23 ರಂದು ಬೆಳಿಗ್ಗೆ 8.30 ಕ್ಕೆ 200 ನೇ ಕಂತನ್ನು ಪೂರೈಸಲಿದೆ. ಆ ದಿನ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ.ಮೋಹನ್ ಆಳ್ವ ಅತಿಥಿಗಳಾಗಿ ಭಾಗವಹಿಸಲಿರುವರು.
ಡಾ. ಮೋಹನ್ ಆಳ್ವರು ಉಡುಪಿಯ ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಿಂದ ವೈದ್ಯ ಪದವಿ ಪಡೆದು 1981 ರಲ್ಲಿ ಮೂಡಬಿದ್ರೆಯಲ್ಲಿ ಕ್ಲಿನಿಕ್ ಪ್ರಾರಂಭಿಸಿ ನಂತರ ‘ಆಳ್ವಾಸ್ ಹೆಲ್ತ್ ಸೆಂಟರ್’ ಮೂಲಕ ಆರೋಗ್ಯ ಕ್ಷೇತ್ರ ಪ್ರವೇಶಿಸಿದರು. ಸದ್ಯ ಹೋಮಿಯೋಪಥಿ ,ನರ್ಸಿಂಗ್ ಆಸ್ಪತ್ರೆ, ಮ್ಯಾನೇಜ್‌ಮೆಂಟ್, ಅಯುರ್ವೇದ ಮೆಡಿಕಲ್ ಕಾಲೇಜು, ಪ್ರಕೃತಿ ಚಿಕಿತ್ಸಾ ಕೇಂದ್ರ, ಎಂಜಿನಿಯರಿಂಗ್ ಕಾಲೇಜ್ ಸೇರಿದಂತೆ 18 ಕ್ಕೂ ಮಿಕ್ಕ ಶಿಕ್ಷಣ ಸಂಸ್ಥೆಗಳಿವೆ. 22 ಸಾವಿರಕ್ಕೂ ಮಿಕ್ಕು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ರಂಗಮನೆ, ಏಕಲವ್ಯ ಸಂಸ್ಥೆಗಳ ಮೂಲಕ ಸಾಂಸ್ಕೃತಿಕ- ಕ್ರೀಡಾ ಕ್ಷೇತ್ರದಲ್ಲಿ ತರಬೇತಿ ನೀಡುತ್ತಿದ್ದು, ‘ಶೋಭಾವನ’ ವೈದ್ಯಶಾಸ್ತ್ರದ ನೆಲೆಯಲ್ಲಿ ರೂಪುಗೊಂಡ ಮೂಲಿಕಾವನ ಸಾಹಿತ್ಯ ಸಂಸ್ಕೃತಿ ಅನಾವರಣಗೊಳಿಸಿದ ಸತತ 12 ವರ್ಷಗಳಿಂದ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ, ಭಾರತೀಯ ಸಂಗೀತ ಪರಂಪರೆಗೆ ಪ್ರೋತ್ಸಾಹ ನೀಡಲು ಆಳ್ವಾಸ್ ವಿರಾಸತ್, ಕಲಾಪ್ರಪಂಚಕ್ಕೆ ಉತ್ತೇಜನ ನೀಡಲು ವರ್ಣ ವಿರಾಸತ್ ಆಯೋಜನೆಯ ರೂವಾರಿಯಾಗಿ ವಿಶ್ವದೆಲ್ಲೆಡೆ ಗಮನ ಸೆಳೆದವರು.
ಸುಮಾರು 100 ರಷ್ಟು ನುಡಿಸಿರಿ ಘಟಕಗಳ ಮೂಲಕ ಸಾಂಸ್ಕೃತಿಕ ನುಡಿ ವೈಭವ ಪ್ರಸಾರದ ಹೊಣೆ ಹೊತ್ತವರು. ಸ್ವತಃ ಯಕ್ಷಗಾನ, ಭರತನಾಟ್ಯ ಕಲಾವಿದರಾಗಿ, ರಂಗೋಲಿ ಪ್ರವೀಣರಾಗಿ, ಮ್ಯಾಜಿಶಿಯನ್ ಆಗಿ ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದ ನಾಡಜನರ ಗಮನ ಸೆಳೆದ ಡಾ. ಮೋಹನ್ ಆಳ್ವರು ತಮ್ಮ ಜೀವನದ ಸಾಧನೆಯನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ.