ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಅ.20: ಬೊಳ್ಳಿ ಮೂವೀಸ್ ಲಾಂಛನದಲ್ಲಿ ಶರ್ಮಿಳಾ ಡಿ.ಕಾಪಿಕಾಡ್ ಮತ್ತು ಸಚಿನ್ ಎ.ಎಸ್. ಉಪ್ಪಿನಂಗಡಿ ನಿರ್ಮಿಸಿರುವ ದೇವದಾಸ್ ಕಾಪಿಕಾಡ್ ನಿರ್ದೇಶನದ ಚಂಡಿಕೋರಿ ತುಳು ಚಲನ ಚಿತ್ರದ ಆಡಿಯೋ ಸಿಡಿ ( ಧ್ವನಿ ಸುರುಳಿ) ಬಿಡುಗಡೆ ಕಾರ್ಯಕ್ರಮ ಗುರುವಾರ ನಗರದ ಪ್ರತಿಷ್ಠಿತ ಓಷಿಯಾನ್ ಪರ್ಲ್ ಹೋಟೆಲ್‌ನಲ್ಲಿ ಜರಗಿತು.
ವಿದ್ವಾಂಸರಾದ ಪೆರ್ನಂಕಿಲ ಹರಿದಾಸ್ ಭಟ್ ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭಹಾರೈಸಿದರು. ಬೆಹ್ರೈನ್ ಕನ್ನಡ ಸಂಘದ ಅಧ್ಯಕ್ಷ ರಾಜ್‌ಕುಮಾರ್, ಆನಂದ್ ಆಡಿಯೋ ಸಂಸ್ಥೆಯ ಶ್ಯಾಂ, ಉದ್ಯಮಿ ಪ್ರಕಾಶ್ ಪಾಂಡೇಶ್ವರ, “ಚಂಡಿ ಕೋರಿ’ ಚಿತ್ರದ ನಿರ್ಮಾಪಕರಾದ ಶರ್ಮಿಳಾ ಡಿ. ಕಾಪಿಕಾಡ್, ಸಚಿನ್ ಎ.ಎಸ್. ಉಪ್ಪಿನಂಗಡಿ, ಹಿನ್ನೆಲೆ ಸಂಗೀತ ನೀಡಿದ ಮಣಿಕಾಂತ್ ಕದ್ರಿ, ನಟರಾದ ಅರ್ಜುನ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರ್ ಮೊದಲಾದವರು ಉಪಸ್ಥಿತರಿದ್ದರು. ಕದ್ರಿ ನವನೀತ್ ಶೆಟ್ಟಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಚಿತ್ರದ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರು ಮಾತನಾಡಿ, ಚಂಡಿಕೋರಿಯಲ್ಲಿ 4 ಉತ್ತಮ ಹಾಡುಗಳಿವೆ. ಅತ್ಯಂತ ವಿಶೇಷವೆಂದರೆ ಈ ಸಿನಿಮಾದಲ್ಲಿ ತಂದೆ – ಮಗ ಹಾಡಿದ್ದಾರೆ. ಅಂದರೆ, ಸಿನಿಮಾದ ನಾಯಕನೂ ಆಗಿರುವ ಅರ್ಜುನ್ ಕಾಪಿಕಾಡ್ ಮತ್ತು ದೇವದಾಸ್ ಕಾಪಿಕಾಡ್ ಅವರು ಹಾಡಿರುವ ಹಾಡುಗಳಿವೆ. ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತವಿರುವ ಈ ಸಿನಿಮಾದಲ್ಲಿ ಅವರೂ ಒಂದು ಹಾಡು ಹಾಡಿದ್ದಾರೆ. ಮತ್ತೊಂದು ಹಾಡನ್ನು ಮಧುಬಾಲಕೃಷ್ಣನ್ ಮತ್ತು ಅಪೂರ್ವ ಶ್ರೀಧರ್ ಹಾಡಿದ್ದಾರೆ ಎಂದು ತಿಳಿಸಿದರು.
ಚಂಡಿಕೋರಿ ಸಿನಿಮಾವು ಒಂದು ಭಿನ್ನ ಕಥೆ, ಉತ್ತಮ ಸಂದೇಶ ಮತ್ತು ಮೌಲ್ಯಗಳನ್ನು ಹೊತ್ತು ಬರಲಿದೆ. ಕಣ್ಣಿಗೆ ಕಾಣುವ ದೇವರೆಂದರೆ ಹೆತ್ತವರು. ಅವರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂಬ ಸಂದೇಶ ಹೊಂದಿರುವ ಚಂಡಿಕೋರಿಯಲ್ಲಿ ತಾಳ್ಮೆಯ ಮಹತ್ವವನ್ನೂ ತಿಳಿಸಲಾಗಿದೆ. ಉತ್ತಮ ಸಂದೇಶ ಮತ್ತು ಯಥೇಚ್ಛ ಮನೋರಂಜನೆ ಈ ಸಿನಿಮಾದಲ್ಲಿದೆ. ಸಪ್ಟೆಂಬರ್ ತಿಂಗಳಿನಲ್ಲಿ ಚಂಡಿಕೋರಿ ತೆರೆಗೆ ಬರಲಿದೆ.
ಪ್ರಥಮ ಬಾರಿಗೆ ದೇವದಾಸ್ ಕಾಪಿಕಾಡ್ ನಿರ್ದೇಶನದ ಜತೆಗೆ ಸಿನಿಮಾಕ್ಕೆ ಸಂಗೀತವನ್ನು ಸಂಯೋಜಿಸಿದ್ದಾರೆ. ಕದ್ರಿ ಮಣಿಕಾಂತ್ ಹಿನ್ನೆಲೆ ಸಂಗೀತದಲ್ಲಿ ಸಹಕರಿಸಿದ್ದಾರೆ. ಸಿನಿಮಾದಲ್ಲಿ ನವಿರಾದ ಪ್ರೇಮ ಕಥೆ, ಹೊಟ್ಟೆ ಹುಣ್ಣಾಗುವಂತೆ ನಗಿಸುವ ಹಾಸ್ಯವೂ ಇರಲಿದೆ. ಸುಮಾರು ೨ ತಾಸು ೨೦ ನಿಮಿಷಗಳ ಈ ಸಿನಿಮಾವು ಪ್ರೇಕ್ಷಕರು ತಲೆದೂಗುವಷ್ಟು ಮನೋರಂಜನೆಯೊಂದಿಗೆ ತುಳುವಿನ ಮತ್ತೊಂದು ಸೂಪರ್ ಹಿಟ್ ಮತ್ತು ಶ್ರೇಷ್ಠ ಸಿನಿಮಾದ ಸಾಲಿಗೆ ಸೇರಲಿದೆ. ಮಂಗಳೂರು ಸುತ್ತಮುತ್ತ ೩೧ ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆದಿದೆ ಎಂದು ಮಾಹಿತಿ ನೀಡಿದರು.
ಆಡಿಯೋ ರೈಟ್ಸ್ ಪಡೆದ ಆನಂದ್ ಆಡಿಯೋ ಸಂಸ್ಥೆ :
ಈ ಸಿನಿಮಾದ ಆಡಿಯೋ ರೈಟ್ಸ್‌ನ್ನು ಬೆಂಗಳೂರಿನ ಆನಂದ್ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ಹಾಡುಗಳ ಬಗ್ಗೆ ಪರಿಶೀಲನೆ ನಡೆಸಿ ಸಂತೋಷ ವ್ಯಕ್ತ ಪಡಿಸಿರುವ ಆನಂದ್ ಆಡಿಯೋ ಸಂಸ್ಥೆ ಚಿತ್ರದ ಆಡಿಯೋ ಹಕ್ಕನ್ನು ಪಡೆಯುವ ಮೂಲಕ ತುಳು ಚಿತ್ರರಂಗಕ್ಕೆ ಒಂದು ಒಳ್ಳೆ ಕೊಡುಗೆ ನೀಡಿದೆ. ಮಾತ್ರವಲ್ಲದೇ ಬೆಂಗಳೂರಿನ ಆಡಿಯೋ ಸಂಸ್ಥೆಯೊಂದು ಇದೇ ಮೊದಲ ಬಾರಿಗೆ ತುಳು ಸಿನಿಮಾದ ಆಡಿಯೋ ಹಕ್ಕನ್ನು ಪಡೆಯುತ್ತಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ ಎಂದು ದೇವದಾಸ್ ಕಾಪಿಕಾಡ್ ತಿಳಿಸಿದರು.
ಅರ್ಜುನ್ ಕಾಪಿಕಾಡ್ ಚಿತ್ರದ ನಾಯಕರಾಗಿದ್ದು, ಕರಿಷ್ಮಾ ಅಮೀನ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸತೀಶ್ ಬಂದಲೆ, ಗೋಪಿನಾಥ ಭಟ್, ಚೇತನ್ ರೈ ಮಾಣಿ, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಉಮೇಶ್ ಮಿಜಾರ್, ಪಾಂಡುರಂಗ, ರಿಚರ್ಡ್ ಪಿಂಟೋ, ರಾಘವೇಂದ್ರ ಕಾರಂತ, ಮಾಸ್ಟರ್ ಕೃತಿನ್, ಶರ್ಮಿಳಾ ಕಾಪಿಕಾಡ್, ಮನೀಷಾ, ಸರೋಜಿನಿ ಶೆಟ್ಟಿ, ಸುಜಾತ ಶಕ್ತಿನಗರ, ಸುಮಿತ್ರಾ ರೈ, ಲಾವಣ್ಯ ಬಂಗೇರ, ನರೇಶ್, ಶಶಿ ಮೊದಲಾದವರಿದ್ದಾರೆ.
ಛಾಯಾಗ್ರಹಣ ಪಿ.ಎಲ್.ರವಿ, ಸಂಕಲನ: ಸುಜೀತ್ ನಾಯಕ್. ನೃತ್ಯ:ಅಕುಲ್, ಸಾಹಸ:ಮಾಸ್‌ಮಾಧ. ನಿರ್ಮಾಣ ನಿರ್ವಹಣೆ: ರಾಜೇಶ್ ಕುಡ್ಲ, ಹಿನ್ನಲೆ ಸಂಗೀತ ಕದ್ರಿ ಮಣಿಕಾಂತ್. ಕಥೆ, ಚಿತ್ರಕಥೆ: ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ ದೇವದಾಸ್ ಕಾಪಿಕಾಡ್, ನಿರ್ಮಾಪಕರು ಶರ್ಮಿಳಾ ಡಿ. ಕಾಪಿಕಾಡ್ ಮತ್ತು ಸಚಿನ್ ಎ.ಎಸ್.ಉಪ್ಪಿನಂಗಡಿ.