ಕಾರ್ಕಳ : ಕಳ್ಳತನಕ್ಕೆ ಬಂದ ತಂಡವೊಂದು ಪರಾರಿಗೆ ಯತ್ನಿಸಿದಾಗ ಅಪಘಾತಕೀಡಾಗಿ ಮಗುಚಿ ಬಿದ್ದು ಅದರಲ್ಲಿದ್ದ ಕಳ್ಳನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ಸಂಜೆ ಕಾರ್ಕಳ ತಾಲೂಕಿನ ಹಾಳೆಕಟ್ಟೆ ಮಾವಿನಕಟ್ಟೆ ಎಂಬಲ್ಲಿ ನಡೆದಿದೆ. ಕಳ್ಳತನಕ್ಕೆ ಬಂದ ತಂಡವೊಂದನ್ನು ಸಾರ್ವಜನಿಕರು ಬೆನ್ನಟ್ಟಿದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಹಾಳೆಕಟ್ಟೆ ಎಂಬಲ್ಲಿ ಹತೋಟಿ ತಪ್ಪಿ ಪಲ್ಟಿಯಾಗಿದೆ. ತಕ್ಷಣ ಸಾರ್ವಜನಿಕರು ಕಾರು ಚಾಲಕನನ್ನು ಹಿಡಿದು, ಥಳಿಸಿ ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ.
ಘಟನೆ ವಿವರ :
ಮಿಯ್ನಾರು ಗ್ರಾಮದ ಕಲತ್ರಪಾದೆಯಲ್ಲಿ ಸಂಜೆ ಕೆಂಪು ಬಣ್ಣದ ಸ್ವಿಫ್ಟ್ ಕಾರು ಸಂಶಯಾಸ್ಪದ ರೀತಿಯಲ್ಲಿ ನಿಂತಿರುವುದನ್ನು ಕಂಡ ಸ್ಥಳೀಯರು ಸಂದೇಹಗೊಂಡು ಹತ್ತಿರ ಹೋದಾಗ ಚಾಲಕನು ಕಾರಿನೊಂದಿಗೆ ಪರಾರಿಯಾದನು. ಈ ಸಂದರ್ಭದಲ್ಲಿ ಕೆಲವರು ಅದನ್ನು ಬೆನ್ನಟ್ಟಿದರೆ, ಕೆಲವರು ಮಿಯಾರು, ಸಾಣೂರು, ಸೇರಿದಂತೆ ಕೆಲವೆಡೆ ಮೊಬೈಲ್ ಮೂಲಕ ಮಾಹಿತಿ ನೀಡಿದರು. ವೇಗವಾಗಿ ತೆರಳಿದ ಕಾರು ಬೆಳ್ವಾಯಿ, ಸಾಣೂರು, ಬೈಪಾಸ್, ನಿಟ್ಟೆ ಮೂಲಕ ಸುಮಾರು 30 ಕಿ.ಮೀ. ಸಾಗಿ ಹಾಳೆಕಟ್ಟೆ ಮಾವಿನಕಟ್ಟೆ ಎಂಬಲ್ಲಿ ಪಲ್ಟಿಯಾಗಿದೆ. ಸುದ್ಧಿ ತಿಳಿದ ಸ್ಥಳೀಯರು ಬೈಕ್ ರಸ್ತೆಗೆ ಅಡ್ಡ ಇಟ್ಟಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಗದ್ದೆಗೆ ಉರುಳಿ ಬಿದ್ದಿದೆ. ಕಾರು ಪಂಕ್ಚರ್ ಆಗಿದ್ದು, ಆದೇ ಸ್ಥಿತಿಯಲ್ಲಿ ಬಹಳಷ್ಟು ದೂರ ಚಲಾಯಿಸಲಾಗಿದೆ. ಸ್ಥಳೀಯರು ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾರು ತೆರಳಿದ ಬಳಿಕ ಕಳತ್ರಪಾದೆಯಲ್ಲಿ ಓರ್ವ ಅಪರಿಚಿತ ವ್ಯಕ್ತಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದುದನ್ನು ಕಂಡ ಸ್ಥಳೀಯರು ಆತನನ್ನು ಹಿಡಿದು ಮರವೊಂದಕ್ಕೆ ಕಟ್ಟಿ ಹಾಕಿದ್ದರು. ಸಾರ್ವಜನಿಕರಿಂದ ಥಳಿತಕ್ಕೊಳಗಾದ ಆತ, “ನಾವು ಸುರತ್ಕಲ್ ಕೃಷ್ಣಾಪುರದಿಂದ 5 ಜನರ ತಂಡ ಕಳವು ನಡೆಸುವುದಕ್ಕಾಗಿ ಕಳತ್ರಪಾದೆಗೆ ಆಗಮಿಸಿರುವುದಾಗಿ ಬಾಯಿ ಬಿಟ್ಟಿದ್ದು, ನಾಲ್ವರನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ’ ಎಂದು ತಿಳಿಸಿದ್ದಾನೆ ಎನ್ನಲಾಗಿದೆ. ಆತನನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು ಇತರರನ್ನು ಹುಡುಕುತ್ತಿದ್ದಾರೆ.
ಸೆರೆಯಾದ ಚಾಲಕನನ್ನು ಫಾರೂಕ್ ಅಲಿಯಾಸ್ ಉಮ್ಮರ್ ಫಾರೂಕ್ ಹಾಗೂ ಇನ್ನೋರ್ವ ಆರೋಪಿಯನ್ನು ಹಜೀಂ ಎಂದು ಹೆಸರಿಸಲಾಗಿದೆ.
ಕಳವುಗೊಂಡ ವಾಹನದಲ್ಲಿ ಮೂರ್ತಿಗಳು, ಪಿಕ್ಕಾಸು ಹಾಗೂ ವಿದ್ಯಾರ್ಥಿಗಳಿಬ್ಬರ ಗುರುತಿನ ಚೀಟಿ ಪತ್ತೆಯಾಗಿದೆ ಎನ್ನಲಾಗಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಗದ್ದೆಗೆ ಉರುಳಿದ ಸಂದರ್ಭ ಸ್ಥಳೀಯ ವ್ಯಕ್ತಿಯೊಬ್ಬನಿಗೆ ಢಿಕ್ಕಿಯಾಗಿ ಸಣ್ಣಪುಟ್ಟ ಗಾಯವಾಗಿದೆ. ಈ ಮಧ್ಯೆ ತಂಡ ಯಾರನ್ನೋ ಅಪಹರಿಸಲು ಬಂದಿತ್ತು ಎಂದು ಕಲತ್ರಪಾದೆಯಲ್ಲಿ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಕಲತ್ರಪಾದೆಯಲ್ಲಿ ಹಾಗೂ ಕಾರು ಪಲ್ಟಿಯಾದ ಹಾಳೆಕಟ್ಟೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸ್ಥಲೀಯರು ಸೇರಿದ್ದರು.
ಅಪಘಾತವಾದ ಕಾರಿನಲ್ಲಿ ಇನ್ನೂ ಹಲವಾರು ಮೂರ್ತಿ ಪತ್ತೆ :
ಮಗುಚಿ ಬಿದ್ದ ಕಾರಿನಲ್ಲಿ ಮತ್ತಷ್ಟು ಮೂರ್ತಿಗಳು ಪತ್ತೆಯಾಗಿದ್ದು, ಬೆಳ್ಳಿಯ ಶಿವನ ಮುಖವಾಡ, ಪಂಚಲೋಹದ ದೈವದ ಮೂರ್ತಿ, 2 ಬೆಳ್ಳಿಯ ದೀಪ, ಬೆಳ್ಳಿಯ ಪನ್ನಾಲು, ಹಿತ್ತಾಳೆಯ ಭರಣಿ,ಬೆಳ್ಳಿಯ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.