ಮಂಗಳೂರು, ಆ.15: ರಾಜ್ಯದಲ್ಲಿ ರೇಡಿಯಾಲಜಿಸ್ಟ್‌ಗಳ ಕೊರತೆ ಸಾಕಷ್ಟಿರುವುದರಿಂದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಟೆಲಿ ರೇಡಿಯಾಲಜಿ ವ್ಯವಸ್ಥೆಯನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ವೆನ್ಲಾಕ್ ಆಸ್ಪತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್‌ಐ, ಎಕ್ಸ್ ರೇ ಯಂತ್ರಗಳಿದ್ದರೂ ರೇಡಿಯಾಲಜಿಸ್ಟ್ ಗಳ ಕೊರತೆಯಿಂದಾಗಿ ವರದಿಗಾಗಿ ತೊಂದರೆ ಅನುಭವಿಸುವಂತಾಗಿದೆ. ಅದಕ್ಕಾಗಿ ಆಸ್ಪತ್ರೆಗಳಲ್ಲಿ ಮಾಡಲಾದ ಎಕ್ಸ್‌ರೇ ಹಾಗೂ ಸ್ಕಾನಿಂಗ್ ಫೋಟೊಕಾಪಿಯನ್ನು ಬೆಂಗಳೂರಿನ ಮೆಡಿಕಲ್ ಕಾಲೇಜಿನ ಟೆಲಿರೇಡಿಯಾಲಜಿ ಕೇಂದ್ರಕ್ಕೆ ರವಾನಿಸಿ ಅಲ್ಲಿರುವ ರೇಡಿಯಾಲಜಿಸ್ಟ್ ಗಳಿಂದ ವರದಿಯನ್ನು ತಯಾರಿಸಿ, ರೋಗಿಗೆ ಶೀಘ್ರ ಚಿಕಿತ್ಸೆಗೆ ಮುಂದಾಗುವ ವ್ಯವಸ್ಥೆ ಇದಾಗಿದೆ. ಇದಕ್ಕಾಗಿ ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿರುವ ಟೆಕ್ನಿಶಿಯನ್‌ಗಳಿಗೆ ಸ್ಕಾನಿಂಗ್ ಬಗ್ಗೆ ತರಬೇತುಗೊಳಿಸಲಾಗುವುದು. ಜಿಲ್ಲಾ ಆಸ್ಪತ್ರೆಗಳಿಗೆ ಕೇಂದ್ರದ ಜತೆ ಸಂಪರ್ಕವನ್ನು ಕಲ್ಪಿ ಸುವ ಕಾರ್ಯ ಸದ್ಯ ನಡೆಯುತ್ತಿದೆ. ಪ್ರಥಮ ಹಂತದಲ್ಲಿ ರಾಜ್ಯದ ನಾಲ್ಕು ಜಿಲ್ಲಾ ಆಸ್ಪತ್ರೆ ಹಾಗೂ ಒಂದು ತಾಲೂಕು ಆಸ್ಪತ್ರೆಯನ್ನು ಆಯ್ದುಕೊಂಡು ಆ ಆಸ್ಪತ್ರೆಗಳ ಟೆಕ್ನಿಶಿಯನ್‌ಗಳಿಗೆ ಸ್ಕಾನಿಂಗ್ ಬಗ್ಗೆ ತರಬೇತಿ ನೀಡಲಾಗುವುದು ಎಂದು ಅವರು ವಿವರಿಸಿದರು.
2016ರ ಜುಲೈಗೆ ವೈದ್ಯರ ಕೊರತೆ ಸಮಸ್ಯೆ ಪರಿಹಾರ:
ಸರಕಾರವು ವೈದ್ಯರ ವೇತನವನ್ನು ಏರಿಕೆ ಮಾಡಿದ ಬಳಿಕ ಇತ್ತೀಚೆಗೆ ಎಂಬಿಬಿಎಸ್ ಮತ್ತು ಪಿಜಿ ವೈದ್ಯರ ಹುದ್ದೆಗಳ ನೇಮಕಾತಿಗೆ ಭಾರೀ ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕೃತವಾಗಿವೆ. 381 ಎಂಬಿಬಿಎಸ್ ವೈದ್ಯರ ಹುದ್ದೆಗಳಿಗೆ 2,000ಕ್ಕೂ ಅಧಿಕ ಅರ್ಜಿಗಳು ಬಂದಿದ್ದರೆ, 87 ದಂತ ವೈದ್ಯರ ಹುದ್ದೆಗಳಿಗೆ 3,000ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕೆಲವೊಂದು ವಿಶೇಷ ತಜ್ಞರ ಹುದ್ದೆಗಳಿಗೆ ಅರ್ಜಿಗಳ ಸಂಖ್ಯೆ ಸಾಕಷ್ಟು ಬಂದಿಲ್ಲದ ಕಾರಣ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಆ.24ರವರೆಗೆ ವಿಸ್ತರಿಸಲಾಗಿದೆ. ಎಂಬಿಬಿಎಸ್ ವೈದ್ಯರ ಆಯ್ಕೆಯು ಅಂಕಗಳ ಆಧಾರದಲ್ಲಿ ನಡೆಯಲಿದ್ದು, ಕನ್ನಡ ಮಾಧ್ಯಮ ಪರೀಕ್ಷೆಯ ನಿಯಮವನ್ನು ಈಗಾಗಲೇ ಸಡಿಲಿಸಲಾಗಿದೆ. ಕೆಲಸಕ್ಕೆ ಸೇರಿಕೊಂಡ ಎರಡು ವರ್ಷಗಳಲ್ಲಿ ಕನ್ನಡ ಕಲಿಯಬಹುದೆಂಬ ನಿಯಮವನ್ನು ಅಳವಡಿಸಲಾಗಿದೆ. ಈ ಮೂಲಕ 2016ರ ಜುಲೈಗೆ ರಾಜ್ಯದಲ್ಲಿ ವೈದ್ಯರ ಕೊರತೆ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವ ಖಾದರ್ ತಿಳಿಸಿದರು.