ಮಂಗಳೂರು,ಆಗಸ್ಟ್.15 : ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲೂ ರೋಗಿಗಳನ್ನು ನೋಡಿಕೊಳ್ಳುವ ಸಹಾಯಕರ ಅನುಕೂಲಕ್ಕಾಗಿ ಆಶ್ರಯ ಕೊಠಡಿ ಹಾಗೂ ಗ್ರಂಥಾಲಯದ ವ್ಯವಸ್ಥೆಯನ್ನು ಮಾಡುವ ಬಗ್ಗೆ ಅಗತ್ಯ ನೀತಿಯನ್ನು ಜಾರಿಗೊಳಿಸಿ ಕಾರ್ಯರೂಪಕ್ಕೆ ತರ ಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ಪಾಲನಾ ಸಮಿತಿ ವತಿಯಿಂದ ವೆನ್ಲಾಕ್ ಆಸ್ಪತ್ರೆಯ ಹೊರ ಆವರಣದಲ್ಲಿ ಶುಕ್ರವಾರ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳ ಸಹಾಯಕರಿಗೆ ಮಧ್ಯಾಹ್ನದ ಉಚಿತ ಊಟದ ‘ಸ್ನೇಹಾಲಯ ಮಾನ್ನಾ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಸ್ತುತ ಆಸ್ಪತ್ರೆಗಳಲ್ಲಿ ದೂರ ಊರುಗಳಿಂದ ಬರುವ ರೋಗಿಗಳ ಸಹಾಯಕರು ಆಸ್ಪತ್ರೆ ಕೊಠಡಿಯೊಳಗೆ ವೈದ್ಯರ ಭೇಟಿಯ ಸಂದರ್ಭ ಹಾಗೂ ಇತರ ಸಮಯದಲ್ಲಿ ಹೊರಗಡೆ ಅಲೆ ದಾಡುವ ಪರಿಸ್ಥಿತಿ ಇರುವುದರಿಂದ ಅವರಿಗೆ ಆಶ್ರಯ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸ್ನೇಹಾಲಯ ಮಾನ್ನಾ ಕಾರ್ಯಕ್ರಮದ ರೂವಾರಿ, ಸ್ನೇಹಾಲಯ ಟ್ರಸ್ಟ್‌ನ ನಿರ್ದೇಶಕ ಜೋಸೆಫ್ ಕ್ರಾಸ್ತಾ ಮಾಡಿದ ಮನವಿಗೆ ಸ್ಪಂದಿಸಿದ ಸಚಿವ ಖಾದರ್ ಈ ಪ್ರತಿಕ್ರಿಯೆ ನೀಡಿದರು.
ನಡೆದಾಡಲು ಆಗದ ಕಷ್ಟಕರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ನೆರವಾಗಲು ಪರಿಚಾರಕರ ವ್ಯವಸ್ಥೆ ಯನ್ನು ಮಾಡುವುದಾಗಿಯೂ ಖಾದರ್ ಹೇಳಿದರು. ರೋಗಿಗಳ ಸಹಾಯಕರಿಗೆ ಮಧ್ಯಾ ಹ್ನದ ಊಟ ನೀಡುವ ಈ ಕಾರ್ಯ ಕ್ರಮವನ್ನು ರಾಜ್ಯದ ಇತರ ಜಿಲ್ಲೆಗಳಲ್ಲೂ ದಾನಿಗಳ ನೆರವಿನೊಂದಿಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಕೆಲವು ಸಂಘಸಂಸ್ಥೆಗಳು ಕೆಲ ಜಿಲ್ಲೆಗಳಲ್ಲಿ ಮುಂದೆ ಬಂದಿವೆೆ ಎಂದರು. ಮೈಕ್ ಎದುರು ದೇಶಭಕ್ತಿಯ ಬಗ್ಗೆ ಮಾತನಾಡುವುದು ಸುಲಭ. ಆದರೆ ಹೃದಯ ಶ್ರೀಮಂತಿಕೆ ಇದ್ದಲ್ಲಿ ಮಾತ್ರವೇ ಅಗತ್ಯವಿದ್ದವರಿಗೆ ನೆರವು ನೀಡುವ ಮೂಲಕ ದೇಶಸೇವೆ ಮಾಡಲು ಸಾಧ್ಯ ವಾಗುತ್ತದೆ. ಅದಕ್ಕೆ ಸ್ನೇಹಾಲಯದ ಜೋಸೆಫ್ ಪ್ರೇರಣೆಯಾಗಿದ್ದಾರೆ ಎಂದು ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ಮಾತನಾಡಿ, ಕಾರ್ಯಕ್ರಮದಲ್ಲಿ ಸೇರಿ ರುವ ಎಲ್ಲರೂ ಮನಸ್ಸು ಮಾಡಿದರೆ ವರ್ಷದ 365 ದಿನ ಊಟದ ವ್ಯವಸ್ಥೆ ಮಾಡಬಹುದು ಎಂದು ಆಶಯ ವ್ಯಕ್ತ ಪಡಿಸಿದರು. ಸ್ನೇಹಾಲಯ ಸಂಸ್ಥೆಯಿಂದ ನೀಡಲಾ ಗುವ 100 ದಿನಗಳ ಊಟದ ವ್ಯವಸ್ಥೆಗೆ ದಾನಿಗಳ ವ್ಯವಸ್ಥೆಯನ್ನು ತಾವು ಮಾಡು ವುದಾಗಿ ಅವರು ಈ ಸಂದರ್ಭ ಭರವಸೆ ನೀಡಿದರು.
ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ತುಳುನಾಡು ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ, ವೆನ್ಲಾಕ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರಾದ ಡಾ.ರಾಜೇಶ್ವರಿದೇವಿ ಮಾತನಾಡಿದರು.
ಕಂಕನಾಡಿಯ ಸಂತ ಅಲ್ಪೋನ್ಸ್ ಚರ್ಚ್‌ನ ಧರ್ಮಗುರು ವಂ. ಫಾ. ಸೆಬೆಸ್ಟಿಯನ್ ಚೆಲಕಪಳ್ಳಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಕುಲಶೇಖರ ಚರ್ಚ್‌ನ ಪ್ರಧಾನ ಗುರು ವಂ.ಫಾ.ವಿಕ್ಟರ್ ಮಚಾದೊ ವಹಿಸಿದ್ದರು. ಮಂಜೇಶ್ವರ ಬಚ್ಚಳಿಕೆಯಿಂದ ವೆನ್ಲಾಕ್ ಆಸ್ಪತ್ರೆಗೆ ಊಟವನ್ನು ಸಾಗಿಸಲು ತಲಾ 6 ಲಕ್ಷ ರೂ. ವೆಚ್ಚದ 2 ವಾಹನಗಳನ್ನು ಒದಗಿಸಿರುವ ಶಾಸಕ ಜೆ.ಆರ್.ಲೋಬೊ ಹಾಗೂ ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಆಡಳಿತ ನಿರ್ದೇಶಕ ಡಾ.ಅಬ್ದುರ್ರವೂಫ್‌ರನ್ನು ಈ ಸಂದರ್ಭ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಫೋರ್‌ವಿಂಡ್ಸ್ ಮಾಸ್ ಕಮ್ಯುನಿಕೇಶನ್‌ನ ಎಲಿಯಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಕುಲಶೇಖರದ ಐಸಿವೈಎಂ ಕಾರ್ಯಕರ್ತರು ಪ್ರಾರ್ಥಿಸಿದರು. ವಿಲಿಯಂ ರೆಬೆಲ್ಲೊ ವಂದಿಸಿದರು.