ಮಂಗಳೂರು.ಅ.12: ಸುಂದರ ಮಲೆಕುಡಿಯ ಕೇವಲ ದಲಿತ ಎನ್ನುವ ಕಾರಣಕ್ಕೆ ಪೇಜಾವರ ಶ್ರೀಗಳು ಮೌನವಹಿಸಿದರು. ಅವರಿಗೆ ಹಿಂದುಗಳು ಬೇಕಾಗಿಲ್ಲ, ಮಾಧ್ವರು ಬೇಕು ಎಂದು ಚಿಂತಕ ಹಾಗೂ ಲೇಖಕ ಮೈಸೂರಿನ ಪ್ರೊ.ಕೆ.ಎಸ್.ಭಗವಾನ್ ಟೀಕಿಸಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಜಾಗೃತಿ ವೇದಿಕೆ ವತಿಯಿಂದ ಬೆಳ್ತಂಗಡಿಯ ಸುಂದರ ಮಲೆಕುಡಿಯ ಅವರ ಕೈ ಬೆರಳು ಕತ್ತರಿಸಿರುವ ಘಟನೆ ಕುರಿತು ಬುಧವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪೇಜಾವರ ಶ್ರೀಗಳಿಗೆ ಹಿಂದುಗಳು ಮುಖ್ಯವಲ್ಲ ಮಾಧ್ವರು ಮಾತ್ರ ಬೇಕು. ಮಲೆಕುಡಿಯರನ್ನು ಧರ್ಮದ ಹೆಸರಲ್ಲಿ ಶೋಷಣೆ ಮಾಡುವ ಮಠಾಧಿಪತಿಗಳು, ಪುರೋಹಿತಶಾಹಿಗಳು ಮತ್ತು ಹಿಂದೂಪರ ಸಂಘಟನೆಗಳು ದಲಿತರ ಮೇಲೆ ಹಲ್ಲೆಯಾದಾಗ ಯಾಕೆ ಧ್ವನಿ ಎತ್ತಲಿಲ್ಲ ಎಂದು .ಭಗವಾನ್ ಪ್ರಶ್ನಿಸಿದರು.
ಹಿಂದೂ ದೇವರು, ಧರ್ಮದ ಹೆಸರಲ್ಲಿ ಶೋಷಣೆ ಮತ್ತು ಕ್ರೌರ್ಯ ಹೆಚ್ಚಾಗಿದೆ ಎಂದು ವಿವಾದತ್ಮಕ ಹೇಳಿಕೆಗಳನ್ನು ನೀಡಿದ ಅವರು ಹಿಂದೂದೇವತೆಗಳ ವಿರುದ್ಧ ಕಿಡಿ ಕಾರುವ ಮೂಲಕ ಮತ್ತೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದರು.
ಸುಂದರ ಮಲೆಕುಡಿಯ ಅವರ ಕೈ ಬೆರಳು ಕತ್ತರಿಸಿರುವ ಭೂಮಾಲಕರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮನೆಗೆ ಆಧಾರ ಸ್ತಂಭವಾಗಿದ್ದ ಸುಂದರ ಮಲೆಕುಡಿಯರ ಕುಟುಂಬ ಜೀವನಾಧರ ಕಳೆದುಕೊಂಡಿದ್ದು, ಇವರ ಕುಟುಂಬ ನಿರ್ವಾಹಣೆಗೆ ಸರ್ಕಾರ ಕೂಡಲೇ 20 ಲಕ್ಷ ರೂ. ಪರಿಹಾರ ನೀಡಬೇಕು ಎಂದು .ಭಗವಾನ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಜಾರಿದ್ದ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎಸ್.ಶಿವರಾಮು ಅವರು ಮಾತನಾಡಿ, ಈ ಬಗ್ಗೆ ಆಗಸ್ಟ್ 13ರಂದು ಹಿಂದುಳಿದ ವರ್ಗದವರ ಜಾಗೃತಿ ವೇದಿಕೆ ಮೂಲಕ ಮೈಸೂರಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.