__ ಸತೀಶ್ ಕಾಪಿಕಾಡ್
ಮಂಗಳೂರು : ಆನಂದ್ ಫಿಲಂಸ್ ಲಾಂಛನದಲ್ಲಿ ಅಡ್ಯಾರ್ ಮಾಧವ ನಾಯ್ಕ್ ಅರ್ಪಿಸಿ, ನಿರ್ಮಿಸುತ್ತಿರುವ ರಾಮ್‌ಶೆಟ್ಟಿ ನಿರ್ಮಾಣ ನಿರ್ದೇಶನದಲ್ಲಿ ತಯಾರಾದ “ಸೂಪರ್ ಮರ್ಮಯೆ” ತುಳುಚಲನ ಚಿತ್ರ ಆಗೋಸ್ಟ್ 14ರಂದು ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ತೆರೆಕಾಣಲಿದೆ ಎಂದು ಬಾಲಿವುಡ್‌ನ ಖ್ಯಾತ ಸ್ಟಂಟ್ ಮಾಸ್ಟರ್ ಹಾಗೂ ನಿರ್ಮಾಪಕ, ನಿರ್ದೇಶಕ ರಾಮ್ ಶೆಟ್ಟಿ ತಿಳಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಂಗಳೂರಿನಲ್ಲಿ ಜ್ಯೋತಿ, ಬಿಗ್ ಸಿನೆಮಾಸ್, ಸಿನಿಪೊಲಿಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ, ಮೂಡಬಿದ್ರೆಯಲ್ಲಿ ಅಮರ ಶ್ರೀ, ಕಾರ್ಕಳದಲ್ಲಿ ರಾಧಿಕಾ, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್ ಹಾಗೂ ಬಿ.ಸಿ.ರೋಡ್‌ನಲ್ಲಿ ನಕ್ಷತ್ರ ಮೊದಲಾದ 10 ಥಿಯೇಟರ್‌ಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು.
ತುಳುವರು ಏನಿದ್ದರೂ ಹಾಸ್ಯದ ಆಟ್ರಾಕ್ಷನ್ ಎಂಬುದು ಮನದಟ್ಟಾಗಿರುವುದರಿಂದ ಸೂಪರ್ ಮರ್ಮಯೆ ಎಂಬ ಹೆಸರಿನಲ್ಲಿ ಪುಲ್ ಕಾಮಿಡಿ ಚಿತ್ರವನ್ನು ಸಿದ್ದಪಡಿಸಿದ್ದೇವೆ. ಕುಟುಂಬ ಕುಟುಂಬದೊಳಗೆ ನಡೆಯುವ ಆಂತರಿಕ ಕಲಹಕ್ಕೆ ಹಾಸ್ಯದ ಮನರಂಜನೆ ಒದಗಿಸಲಾಗಿದೆ. ಮಾವ-ಅಳಿಯನ ಸಂಘರ್ಷದ ಚಿತ್ರಕತೆಯಲ್ಲಿ ವಿದ್ಯಾವಂತ. ಅವಿದ್ಯಾವಂತರ ವ್ಯತ್ಯಾಸಗಳನ್ನು ಚಿತ್ರದಲ್ಲಿ ಹಾಸ್ಯರೂಪದಲ್ಲಿ ಬಿಂಬಿಸಲಾಗಿದೆ.
ಅಳಿಯನಾಗಿ ಪಂಚರಂಗಿ ಪೊಂ ಪೊಂ ಖ್ಯಾತಿಯ ಕಾಮಿಡಿ ಕಿಂಗ್ ಮೀನನಾಥ ರಾಘವೇಂದ್ರ ರೈ ನಟಿಸಿದ್ದಾರೆ. ಗಂಭೀರ ಪಾತ್ರಧಾರಿಯಾಗಿ ನಗಿಸುವ ವೈಶಿಷ್ಟ್ಯವನ್ನು ಮಾವನ ಪಾತ್ರಧಾರಿ ಗೋಪಿನಾಥ ಭಟ್ ಪ್ರದರ್ಶಿಸಿದ್ದಾರೆ. ಇವರಿಗೆ ಸಾಥ್ ನೀಡುತ್ತಿದ್ದಾರೆ ನವೀನ್ ಡಿ. ಪಡಿಲ್, ಭೋಜರಾಜ ವಾಮಂಜೂರು ಅರವಿಂದ ಬೋಳಾರ್ ಹೀಗಾಗಿ ಸಿನಿಮಾದಲ್ಲಿ ಕಾಮಿಡಿಗೆ ಕೊರತೆ ಎನ್ನುವುದೇ ಇರುವುದಿಲ್ಲ. ಶಿವಧ್ವಜ್‌ರದ್ದು ಅತಿಥಿ ಪಾತ್ರ. ನಾಯಕಿಯ ಪಾತ್ರದಲ್ಲಿ ದಿವ್ಯಶ್ರೀ ಅಭಿನಯಿಸಿದ್ದಾರೆ ಎಂದು ರಾಮ್ ಶೆಟ್ಟಿ ವಿವರಿಸಿದರು.
ರಾಮ್ ಶೆಟ್ಟರಿಗೆ ಬಾಲಿವುಡ್‌ನಲ್ಲಿ ಸಾಥ್ ನೀಡುತ್ತಿದ್ದ ಕ್ಯಾಮರಾಮನ್ ಈಜನ್ ಸೂಪರ್ ಮರ್ಮಯೇ ಸೂಪರ್ ಮಾಡಲು ಕೈ ಜೋಡಿಸಿದ್ದಾರೆ. ರಾಮ್ ಶೆಟ್ಟರು ಕಳೆದ ಎರಡು ವರ್ಷಗಳಿಂದ ಶೃದ್ಧೆಯಿಂದ ಸಿದ್ದಪಡಿಸಿದ ಸ್ಕ್ರಿಪ್ಟ್‌ಗೆ ಮಾತಿನ ರೂಪ ಕೊಟ್ಟವರು ಖ್ಯಾತ ನಾಟಕ ರಚನೆಕಾರ ನವೀನ್ ಶೆಟ್ಟಿ ಅಳಕೆ. ಕಡಲ ಮಗೆ ಖ್ಯಾತಿಯ ಚಂದ್ರಕಾಂತ್ ಶೆಟ್ಟಿ ಸಂಗೀತ ನಿರ್ದೇಶನ ನೀಡಿದ್ದಾರೆ. ಶಶಿರಾಜ್ ಕಾವೂರು ಸಾಹಿತ್ಯದ ಐದು ಹಾಡುಗಳು ಚಿತ್ರದಲ್ಲಿವೆ. ಸಚಿನ್ ಶೆಟ್ಟಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಕಲೇಶಪುರದ ಸಹಜ ಪರಿಸರದಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆದಿದೆ. ತಮ್ಮ ಲಕ್ಷ್ಮಣ್ ಕಲಾ ನಿರ್ದೇಶಕರಾಗಿ ಚಿತ್ರದ ಅಂದ ಹೆಚ್ಚಿಸಿದ್ದಾರೆ.
ಶೃದ್ಧಾ ಸಾಲಿಯಾನ್, ಶೋಭಾ ರೈ, ಕರ್ನೂರ್ ಮೋಹನ್ ರೈ, ಪ್ರದೀಪ್ ಆಳ್ವಾ, ಸತೀಶ್ ಬಂದಲೆ, ದೀಪಕ್ ರೈ ಪಾಣಾಜೆ, ಗಣೇಶ್ ಮಲ್ಲಿ ಮೊದಲಾದವರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈವರೆಗಿನ ಮೂರು ತುಳು ಚಿತ್ರಗಳನ್ನು ರಾಮ್ ಶೆಟ್ಟರೇ ನಿರ್ಮಿಸಿ ನಿರ್ದೇಶಿಸಿದ್ದರು. ಈ ಬಾರಿ ಅವರು ಅಡ್ಯಾರು ಮಾಧವ್ ನಾಕ್‌ರ ಜತೆಗೂಡಿ ಚಿತ್ರ ನಿರ್ಮಿಸಿದ್ದಾರೆ. ದೀಪಕ್ ಶೆಟ್ಟಿ ಕುದ್ರಾಡಿ, ಜಗದೀಶ್ ಶೆಟ್ಟಿ ಸರ್ವಾಣಿ, ಪುರುಷೋತ್ತಮ ಭಂಡಾರಿ ಅಡ್ಯಾರ್ ಈ ಸಿನಿಮಾಕ್ಕಾಗಿ ದುಡಿದಿದ್ದಾರೆ.
ರಾಮ್ ಶೆಟ್ಟಿ ತುಳು ಚಿತ್ರರಂಗಕ್ಕೆ ಹೊಸಬರೇನಲ್ಲ ಇವರು ಈಗಾಗಲೇ ಮೂರು ಉತ್ತಮ ತುಳು ಚಿತ್ರಗಳನ್ನು ನೀಡಿರುವವರು. 2012ರಲ್ಲಿ ಬಂಗಾರ್‍ದ ಕುರಲ್ ಭಕ್ತಿ ಪ್ರಧಾನ ಚಿತ್ರ ನಿರ್ಮಿಸಿದ್ದ ಶೆಟ್ಟರು 1082 ಮತ್ತು 83ರಲ್ಲಿ ಬದ್ಕೆರ್ ಬುಡ್ಲೆ ಮತ್ತು ದಾರೆದ ಸೀರೆ ನಿರ್ಮಿಸಿದ್ದರು. ಈ ಎರಡೂ ಚಿತ್ರಗಳು ಇಂದಿಗೂ ತುಳುವರ ಮನದಿಂದ ಅಳಿದಿಲ್ಲ.
700ಕ್ಕೂ ಹೆಚ್ಚು ಹಿಂದಿ, ಮರಾಠಿ, ಗುಜರಾತಿ, ಕನ್ನಡ, ತೆಲುಗು, ತಮಿಳು ಚಲನ ಚಿತ್ರಗಳಲ್ಲಿ ಸ್ಟಂಟ್ ಮಾಸ್ಟರ್ ಆಗಿ ದುಡಿದಿರುವ ಆರ್ಮಿ, ಗದ್ದಾರ್, ಜಾಗೃತಿ, ಕತರ್‌ನಾಕ್ ನಂತಹ ಹಿಂದಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ರಾಮ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ತುಳು ಚಿತ್ರ ಸೂಪರ್ ಮರ್ಮಾಯೆ. ಅಡ್ಯಾರು ಮಾಧವ ನಾಯ್ಕ್ ಅರ್ಪಿಸುವ ಈ ಚಿತ್ರದಲ್ಲಿ ಬಹುತೇಕ ತುಳುರಂಗಭೂಮಿಯ ಕಲಾವಿದರು ಅಭಿನಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಅಡ್ಯಾರು ಮಾಧವ ನಾಯ್ಕ್, ಕಲಾವಿದರಾದ ಗೋಪಿನಾಥ ಭಟ್, ಅರವಿಂದ ಬೋಳಾರ್ ಮೀನನಾಥ ರಾಘವೇಂದ್ರ ರೈ, ನಾಯಕಿ ನಟಿ ದಿವ್ಯಶ್ರೀ ಮುಂತಾದವರು ಉಪಸ್ಥಿತರಿದ್ದರು.