ಕುಂದಾಪುರ : ಇಪ್ಪತ್ತು ವರ್ಷದ ತರುಣಿಯು ಆಕೆಯ ಪ್ರಿಯಕರನು ವಂಚಿಸಿದ ಹಿನ್ನೆಲೆಯಲ್ಲಿ ಹತಾಶಳಾಗಿ ವಿಷ ಸೇವಿಸಿ ಆಕೆಯ ಪ್ರಿಯಕರನ ಮನೆಯಲ್ಲಿ ಬಂದು ಬಿದ್ದಿದ್ದು , ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಮಧ್ಯೆ ಮೃತಳಾದ ಪ್ರಕರಣದಲ್ಲಿ ಆರೋಪಿ ಬೋಟ್ ಚಾಲಕ ಪ್ರಕಾಶ್ ತಿಂಗಳಾಯ ದೋಷಮುಕ್ತಿಗೊಂಡಿದ್ದಾನೆ.
ಪ್ರಕರಣದ ಬಳಿಕ ಮೃತಳ ತಂದೆ ಕೋಟ ಕೃಷ್ಣ ಪೂಜಾರಿ ಅವರು ಕೋಟ ಆರಕ್ಷಕ ಠಾಣೆಯಲ್ಲಿ ಆರೋಪಿಯ ವಿರುದ್ಧ ದೂರನ್ನು ದಾಖಲಿಸಿದ್ದರು. ಪೊಲೀಸರು ಆರೋಪಿಯ ವಿರುದ್ಧ ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದ ಬಗ್ಗೆ ಭಾರತೀಯ ದಂಡ ಸಂಹಿತೆಯ ಕಲಂ 306ರ ಕೆಳಗೆ ದೋಷಾರೋಪಣಾ ಪತ್ರ ಸಲ್ಲಿಸಿದರು. ಕೋಟದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ನ್ಯಾಯಾಲಯದಲ್ಲಿ 7 ಮಂದಿ ಸಾಕ್ಷಿದಾರರ ವಿಚಾರಣೆ ಮಾಡಲಾಗಿತ್ತು. ಪ್ರಕರಣದ ಕೂಲಂಕಶ ವಿಚಾರಣೆ ಮಾಡಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ರಾಜಶೇಖರ ವಿ. ಪಾಟೇಲ್ ಅವರು ಆರೋಪಿಯ ವಿರುದ್ಧ ಮಾಡಲಾದ ಆರೋಪಗಳು ರುಜುವಾತಾಗಿಲ್ಲ ಎಂದು ಅಭಿಪ್ರಾಯಪಟ್ಟು ಆತನನ್ನು ಬಿಡುಗಡೆ ಮಾಡಿರುತ್ತಾರೆ.
ಆರೋಪಿ ಪ್ರಕಾಶ್ ತಿಂಗಳಾಯ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.