ಕುಂದಾಪುರ: ಗಂಗೊಳ್ಳಿ ಅಳಿವೆಯಲ್ಲಿ ಮೀನುಗಾರಿಕಾ ಬೋಟು ಮುಳುಗಡೆಯಾಗಿದ್ದು ಬೋಟಿನಲ್ಲಿದ್ದ ನಾಲ್ವರು ಮೀನುಗಾರರನ್ನು ಇತರೇ ಬೋಟಿನವರು ರಕ್ಷಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ಈ ಘಟನೆ ಸಂಭವಿಸಿದ್ದು ಲಕ್ಷಾಂತರ ಹಣ ನಷ್ಟವಾಗಿದೆ ಎನ್ನಲಾಗಿದೆ.
ಗಂಗೊಳ್ಳಿಯ ಸುಶೀಲಾ ರಾಘವೇಂದ್ರ ಖಾರ್ವಿ ಎನ್ನುವವರಿಗೆ ಸೇರಿದ ‘ಮಂಜುನಾಥ ಕೃಪಾ’ ಹೆಸರಿನ ಬೋಟು ಇದಾಗಿದೆ.
ಘಟನೆ ವಿವರ: ಭಾನುವಾರ ಬೆಳಿಗ್ಗೆ ಮೀನುಗಾರಿಕೆಗೆಂದು ಗಂಗೊಳ್ಳಿಯಿಂದ ಹೊರಟಿದ್ದು ಈ ಸಂದರ್ಭ ಗಂಗೊಳ್ಳಿಯ ಅಳಿವೆ ಸಮೀಪ ಬೋಟು ಮುಳುಗಿದೆ. ಇದೇ ವೇಳೆ ಬೋಟು ಚಾಲಕ ಪಾಂಡುರಂಗ ಸೇರಿದಂತೆ ಪ್ರಭಾಕರ, ಈಶ್ವರ್ ಮತ್ತು ಮಂಜುನಾಥ ಎನ್ನುವವರನ್ನು ಹಿಂಬದಿಯಿಂದ ಬಂದ ಶ್ರೀ ಶಾರದಾ, ದುರ್ಗಾಂಜನೇಯ, ಚಕ್ರೇಶ್ವರಿ, ಗಜಲಕ್ಷ್ಮೀ, ಲಕ್ಷ್ಮೀ ಮಾರುತಿ ಬೋಟಿನವರೌ ರಕ್ಷಿಸಿದ್ದಾರೆ. ಬೋಟಿನಲ್ಲಿದ್ದ ನಾಲ್ವರನ್ನು ಚಿಕಿತ್ಸೆಗಾಗಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಬೋಟು ಸಂಪೂಣ್ ಮುಳುಗಡೆಯಾಗಿದ್ದು ಅಂದಾಜು ಹತ್ತು ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಗಂಗೊಳ್ಳಿ ಅಳಿವೆಯಲ್ಲಿ ಹೂಳು ಸಮಸ್ಯೆ ಹಲವು ವರ್ಷಗಳಿಂದ ಮೀನುಗಾರರನ್ನು ಕಾಡುತ್ತಿದ್ದು ಈ ವರ್ಷದಲ್ಲಿ ನಾಲ್ಕೈದು ಬೋಟುಗಳು ಮುಳುಗಿದ್ದವು. ಹೂಳು ತೆಗೆಯಲು ಡ್ರೆಜ್ಜಿಂಗ್ ಕೆಲಸ ಕೆಲವು ದಿನಗಳ ಕಾಲ ನಡೆದಿತ್ತಾದರೂ ಇತ್ತೀಚೆಗೆ ಕಾರಣಾಂತರಗಳಿಂದ ನಿಂತಿದೆ.