ಮಂಗಳೂರು, ಆ.5: ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್‌ರವರ 135ನೆ ಜನ್ಮ ದಿನಾಚರಣೆ ಕಾರ್ಯಕ್ರಮ ಮಂಗಳವಾರ ನಗರದ ಕೊಡಿಯಾಲ್‌ಬೈಲ್‌ನ ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್‌ನ ಮೊಳಹಳ್ಳಿ ಶಿವರಾವ್ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು, ರೈತರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ಕೊಡುವ ವ್ಯವಸ್ಥೆ ಇಲ್ಲದಾಗ ಖಾಸಗಿ ಬಡ್ಡಿ ವ್ಯವಹಾರದವರ ಮೊರೆ ಹೋಗುತ್ತಿರುವುದು ರೈತರ ಆತ್ಯಹತ್ಯೆಗೆ ಪ್ರಮುಖ ಕಾರಣವಾಗುತ್ತಿದ್ದು, ಈ ಬಗ್ಗೆ ಅವಲೋಕನದ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಪ್ರಬಲವಾಗಿರುವ ಕಾರಣ ಇಲ್ಲಿನ ಕೃಷಿಕರು ಖಾಸಗಿ ಬಡ್ಡಿ ವ್ಯವಹಾರಸ್ಥರಿಂದ ದೂರವಾಗಿದ್ದಾರೆ. ಮಾತ್ರವಲ್ಲದೆ, ಜಿಲ್ಲೆಯಲ್ಲಿ ಭತ್ತದ ಬೇಸಾಯ ಲಾಭದಾಯಕವಲ್ಲ ಎಂದು ಕೃಷಿಕರು ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಯನ್ನು ಅವಲಂಬಿಸಿದ್ದಾರೆ. ಆದರೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಉಪ ಕಸುಬನ್ನು ಅವಲಂಬಿಸಿದ್ದು, ಕೃಷಿ ಭೂಮಿಯಲ್ಲಿ ಕೆಲವೊಂದು ಸೀಮಿತ ಬೆಳೆಗಳನ್ನು ಮಾತ್ರ ಬೆಳೆಯುತ್ತಿರುವುದು ಕೂಡಾ ನಷ್ಟ ಅನುಭವಿಸಲು ಕಾರಣವಾಗುತ್ತಿದೆ ಎಂದವರು ಹೇಳಿದರು.
ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಸಹಕಾರಿ ಸಂಘಗಳ ಮೂಲಕ ಕೃಷಿಕರನ್ನು ಬಲಪಡಿಸಿರುವ ಮೊಳಹಳ್ಳಿ ಶಿವರಾವ್ ಅವರ ಸಾಧನೆ ಸ್ಮರಣೀಯ ಎಂದವರು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಯಾಂಪ್ಕೋ ಲಿಮಿಟೆಡ್ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮಾತನಾಡಿ, ಸರಕಾರವು ಮನಬಂದಂತೆ ಸಹಕಾರಿ ಕಾಯ್ದೆ ತಿದ್ದುಪಡಿಯ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಸೌಹಾರ್ದ ಕಾಯ್ದೆಯಲ್ಲಿ ನೋಂದಣಿಯಾಗದ ಸಹಕಾರಿ ಕ್ಷೇತ್ರಗಳ ಮೇಲೂ ಸರಕಾರ ಹಸ್ತಕ್ಷೇಪ ನಡೆಸುತ್ತಿದೆ. ಕೃಷಿ ಪ್ರಧಾನವಾಗಿದ್ದ ಅವಿಭಜಿತ ಜಿಲ್ಲೆಯಲ್ಲಿ ಕೃಷಿಕರು ಗುಳೇ ಹೋಗುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಅತಂತ್ರ ಸ್ಥಿತಿ ಇಂದು ನಿರ್ಮಾಣವಾಗಿದ್ದು, ಸಹಕಾರಿ ಕ್ಷೇತ್ರದಲ್ಲಿಯೂ ಪ್ರಾಮಾಣಿಕತೆ, ಪಾರದರ್ಶಕತೆ, ಸರಳತೆ ಕಳೆದುಹೋಗುತ್ತಿದೆ. ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೃತ್ತಿಪರ ಆಡಳಿತ ನಿರ್ವಹಣೆ ಬಗ್ಗೆ ಬೆಸೆಂಟ್ ಕಾಲೇಜು ಪ್ರಾಂಶುಪಾಲೆ ಡಾ. ಸುಧಾ ಕೆ. ಉಪನ್ಯಾಸ ನೀಡಿದರು. ಮೊಳಹಳ್ಳಿ ಶಿವರಾವ್‌ರವರ ಜನ್ಮ ದಿನಾಚರಣೆ ಪ್ರಯುಕ್ತ ಉತ್ಕೃಷ್ಟ ಸಹಕಾರಿ ಸೌಧದಲ್ಲಿ ಅಂತರ್ ಕಾಲೇಜು ಪದವಿ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸಹಕಾರಿ ಸಿಬ್ಬಂದಿಗೆ ಉಚಿತ ವೈದ್ಯಕೀಯ ಶಿಬಿರವೂ ಈ ಸಂದರ್ಭ ನಡೆಯಿತು. ಚರ್ಚಾ ಸ್ಪರ್ಧೆಯ ಸಂಯೋಜಕರಾಗಿ ವಿಶ್ವವಿದ್ಯಾನಿಲಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಜಯವಂತ ನಾಯಕ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಸ್ಕಾಡ್ಸ್ ಲಿಮಿಟೆಡ್‌ನ ಅಧ್ಯಕ್ಷ ರವೀಂದ್ರ ಕಂಬಳಿ, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾವಿತ್ರಿ ರೈ ಕೆ., ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಬು ಬಿಲ್ಲವ, ಎಸ್.ಆರ್. ಸತೀಶ್ಚಂದ್ರ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಹರೀಶ್ ಆಚಾರ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಲಕ್ಷ್ಮಣ ಕುಮಾರ್ ಮಲ್ಲೂರು ಕಾರ್ಯಕ್ರಮ ನಿರೂಪಿಸಿದರು.