ಕನ್ನಡ ವಾರ್ತೆಗಳು

ದೀನ ದಯಾಳ್ ಗ್ರಾಮ ಜ್ಯೋತಿ ಯೋಜನೆ ಅನುಷ್ಠಾನ : ಸಂಸದ ನಳಿನ್ ಕುಮಾರ್ ಕಟೀಲ್

Pinterest LinkedIn Tumblr

Dc_nalini_meet_1

ಮಂಗಳೂರು, ಆ.2: ದ.ಕ. ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (ಡಿಡಿಯುಜಿಜೆವೈ)ಯ ಅನುಷ್ಠಾನಕ್ಕಾಗಿ 405.66 ಕೋಟಿ ರೂ. ಮೊತ್ತದ ಯೋಜನಾ ವರದಿಯನ್ನು ಭಾರತ ಸರಕಾರದ ಇಂಧನ ಸಚಿವಾಲಯಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಈ ಕುರಿತು ಮೆಸ್ಕಾಂ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಇದಲ್ಲದೆ ಜಿಲ್ಲಾ ವ್ಯಾಪ್ತಿಯ ನಗರಗಳಲ್ಲಿ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (ಐಪಿಡಿಎಸ್) ಅನುಷ್ಠಾನಕ್ಕಾಗಿ 68.13 ಕೋಟಿ ರೂ. ಮೊತ್ತದ ಯೋಜನಾ ವರದಿಯ ಪ್ರಸ್ತಾವನೆಗೆ ಇಂಧನ ಸಚಿವಾಲಯದಿಂದ ಮಂಜೂರಾತಿ ದೊರಕಿದೆ ಎಂದು ಅವರು ಹೇಳಿದರು.

Dc_nalini_meet_2

ಡಿಡಿಯುಜಿಜೆವೈನಡಿ 12 ಸಬ್‌ಸ್ಟೇಷನ್‌ಗಳ ನಿರ್ಮಾಣದೊಂದಿಗೆ ಜಿಲ್ಲೆಯ ವಿವಿಧೆಡೆ ಹೊಸ ಪರಿವರ್ತಕಗಳ ಅಳವಡಿಕೆ, ಹೊಸ 11 ಕೆವಿ ಸ್ಟರ್ ಮಾರ್ಗ, ಹೊಸ ಎಲ್‌ಟಿ ಓವರ್‌ಹೆಡ್‌ಮಾರ್ಗ, ಪರಿವರ್ತಕ ಕೇಂದ್ರದ ಭೂಸಂಪರ್ಕ ಬದಲಾವಣೆ, ಎಲ್‌ಟಿ ಮಾಪಕೀಕರಣ, ವಿದ್ಯುತ್ ಜಾಲದ ಬಲವರ್ಧನೆ, ಸಂಸದ ಆದರ್ಶ ಗ್ರಾಮ ಯೋಜನೆ, ಪರಿವರ್ತಕ ಕೇಂದ್ರದ ಉನ್ನತೀಕರಣ ಮೊದಲಾದ ಹಲವಾರು ಯೋಜನೆಗಳು ಸೇರಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಗುರುತಿಸಲಾಗಿರುವ ಬಿಪಿಎಲ್ ಕುಟುಂಬದ 3,800 ಮನೆಗಳಿಗೆ ವಿದ್ಯುತ್ ಒದಗಿಸುವ ಕಾರ್ಯವೂ ಇದರಲ್ಲಿ ಅಡಕವಾಗಿದೆ ಎಂದು ಅವರು ವಿವರಿಸಿದರು.

ಐಪಿಡಿಎಸ್‌ನಡಿ ಮಂಗಳೂರು ನಗರದಲ್ಲಿ ಭೂಗತ ಕೇಬಲ್‌ಗಳ ಅಳವಡಿಕೆ ಕಾರ್ಯವನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಇದರೊಂದಿಗೆ ಮಂಗಳೂರು, ಬಂಟ್ವಾಳ, ಪುತ್ತೂರು, ಉಳ್ಳಾಲ, ಮೂಡುಬಿದಿರೆ, ಮುಲ್ಕಿ, ಬೆಳ್ತಂಗಡಿ ಮತ್ತು ಸುಳ್ಯ ನಗರಗಳಲ್ಲಿ ಹಾಲಿ ಇರುವ ಪ್ರಸರಣ ಮತ್ತು ವಿತರಣಾ ಜಾಲವನ್ನು ಬಲಪಡಿ ಸುವುದು, ಹೊಸ ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆ, ಎಚ್‌ಟಿ ಮತ್ತು ಎಲ್‌ಟಿ ಮಾರ್ಗಗಳ ಫೀಡರ್‌ಗಳ ರಚನೆ, ಗ್ರಾಹಕ ಸೇವಾ ಕೇಂದ್ರಗಳ ಸ್ಥಾಪನೆ ಮೊದಲಾದ ಪ್ರಮುಖ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದವರು ಹೇಳಿದರು.

Dc_nalini_meet_3

ಸಂಸದರ ಆದರ್ಶ ಗ್ರಾಮ ಯೋಜನೆಗಾಗಿ ಆಯ್ಕೆಯಾದ ಬಳ್ಪ ಹಾಗೂ ಕಿನ್ಯಾದಲ್ಲಿ ಗುರುತಿ ಸಲಾಗಿರುವ 21 ಬಿಪಿಎಲ್ ಫಲಾನುಭವಿ ಗಳಿಗೆ ವಿದ್ಯುತ್ ಸಂಪರ್ಕ, 11 ಕೆವಿ ಎಚ್‌ಟಿ ಲೈನ್ ಮಾರ್ಗಗಳ ನಿರ್ಮಾಣ, 25 ಕೆವಿಎ ಪರಿವರ್ತಕಗಳ ಸ್ಥಾಪನೆ, ಎಲ್‌ಟಿ ವಿದ್ಯುತ್ ಮಾರ್ಗದ ನಿರ್ಮಾಣ, ಪರಿವರ್ತಕ ಕೇಂದ್ರಗಳ ಭೂ ಸಂಪರ್ಕ ಪುನರ್ ನಿರ್ಮಾಣಗೊಳಿಸುವ ಕಾರ್ಯವೂ ಸೇರಿದೆ ಎಂದು ಮೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಸುಕುಮಾರ್ ಮಾಹಿತಿ ನೀಡಿದರು.

ಮಂಗಳೂರು ತಾಲೂಕಿನಿ ಅರ್ಕುಳ, ಮುಚ್ಚೂರು, ಕೋಟೆಕಾರು ಬೀರಿ, ಎಡಪದವು, ಬಂಟ್ವಾಳದ ಸರಪಾಡಿ, ಬೆಳ್ತಂಗಡಿಯ ಅಳದಂಗಡಿ, ಸುರ್ಯ, ಕಾಯರ್ತಡ್ಕ, ಪುತ್ತೂರಿನ ಉಪ್ಪಿನಂಗಡಿ, ಸುಳ್ಯದ ಗುತ್ತಿಗಾರು, ಜಾಲ್ಸೂರು, ಸಂಪಾಜೆಗಳಲ್ಲಿ ನೂತನ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳು ಸ್ಥಾಪನೆಗೊಳ್ಳಲಿವೆ ಎಂದು ಅವರು ತಿಳಿಸಿದರು. ಶಾಸಕ ಜೆ.ಆರ್.ಲೋಬೊ ಮಾತನಾಡಿ ನಗರದ ಉರ್ವಾ ಸ್ಟೋರ್  ಬಳಿ ಸಬ್‌ಸ್ಟೇಷನ್ ನಿರ್ಮಿಸು ವಂತೆ ಕೋರಿದರಲ್ಲದೆ, ಮನಪಾದಿಂದ ಅದಕ್ಕಾಗಿ ಜಮೀನು ಪಡೆಯಬಹುದು ಎಂದು ಸಲಹೆ ನೀಡಿದರು. ಇದರಿಂದ ಬೆಂಗರೆ ಮತ್ತು ಉರ್ವ ಪರಿಸರದ ಜನರ ವಿದ್ಯುತ್ ಸಮಸ್ಯೆಯನ್ನು ಬಗೆಹರಿ ಸಲು ಸಾಧ್ಯವಾಗಲಿದೆ ಎಂದವರು ಹೇಳಿದರು.

ಮಂಗಳೂರು ನಗರದಲ್ಲಿ ಭೂಗತ ಕೇಬಲ್ ಅಳವಡಿಕೆ ನಿಟ್ಟಿನಲ್ಲಿ 6.5 ಕೋಟಿ ರೂ. ವೆಚ್ಚದಲ್ಲಿ ಕರಾವಳಿ ಸರ್ಕಲ್‌ನಿಂದ ಹ್ಯಾಮಿಲ್ಟನ್ ಸರ್ಕಲ್‌ವರೆಗೆ ಟೆಂಡರ್ ಕರೆದು ಕ್ರಮ ಕೈಗೊಳ್ಳಲಾಗುವುದು. ಭೂಗತ ಕೇಬಲ್ ಅಳವಡಿಕೆಗಾಗಿ ಸುಮಾರು 200 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ಮನಪಾ ವ್ಯಾಪ್ತಿಗೆ 33 ಕೋ.ರೂ.ಗಳನ್ನು ವ್ಯಯಿಸಲಾಗುವುದು ಎಂದು ಮೆಸ್ಕಾಂನ ಕಾರ್ಯ ನಿರ್ವಾಹಕ ಎಂಜಿನಿಯರ್ ಮಂಜಪ್ಪ ತಿಳಿಸಿದರು.

1 ವರ್ಷದೊಳಗೆ ಸರಕಾರಿ ಕಚೇರಿಗಳಲ್ಲಿ ಸೋಲಾರ್ ಅಳವಡಿಕೆ: 
ದ.ಕ. ಜಿಲ್ಲೆಯನ್ನು ಸೋಲಾರ್‌ಯುತವನ್ನಾಗಿಸುವ ನಿಟ್ಟಿನಲ್ಲಿ ಪ್ರಥಮ ಹಂತವಾಗಿ ಒಂದು ವರ್ಷದೊ ಳಗೆ ಸರಕಾರಿ ಕಚೇರಿಗಳಲ್ಲಿ ಸೋಲಾರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಇದೇ ವೇಳೆ ಫ್ಲಾಟ್‌ಗಳು, ಮೆಡಿಕಲ್, ಎಂಜಿನಿಯರಿಂಗ್ ಸೇರಿದಂತೆ ವಸತಿಯುತ ಕಟ್ಟಡಗಳನ್ನು ಸೋಲಾರ್‌ಗೊಳಪಡಿಸಲು ತೀರ್ಮಾನಿಸಲಾಗಿದೆ. ಸಂಸದರ ನಿಧಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಪಂ ಕಟ್ಟಡಗಳಲ್ಲಿ ಸೋಲಾರ್ ಅಳವಡಿಕೆಯ ಬಗ್ಗೆಯೂ ಚಿಂತನೆ ಇದೆ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದರು.

ಕುಗ್ರಾಮಗಳ ವಿದ್ಯುತ್ ಸಂಪರ್ಕಕ್ಕೆ ಆದ್ಯತೆ. ಬಂಜಾರು ಮಲೆ, ಎಳನೀರು, ಮಾಳಿಗೆಮನೆ ಮೊದಲಾದ ಈವರೆಗೂ ವಿದ್ಯುತ್ ಸಂಪರ್ಕವನ್ನೇ ಹೊಂದಿರದ ಗ್ರಾಮೀಣ ಪ್ರದೇಶದ ಕುಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಪ್ರಮುಖ ಆದ್ಯತೆ ನೀಡಲಾಗುವುದು ಎಂದು ಸಂಸದ ನಳಿನ್ ತಿಳಿಸಿದರು.

ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಮಂಗಳೂರಿನ ಶಾಸಕರು ಹಾಗೂ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಅಂದಾಜುಪಟ್ಟಿ ತಯಾರಿಸಿ ತಮಗೆ ನೀಡಿದ್ದಲ್ಲಿ ಅನುಮೋದನೆ ಪಡೆಯುವುದಾಗಿ ಸಂಸದ ನಳಿನ್ ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಜಿಪಂ ಸಿಇಒ ಶ್ರೀವಿದ್ಯಾ ಉಪಸ್ಥಿತರಿದ್ದರು.

Write A Comment