ಕನ್ನಡ ವಾರ್ತೆಗಳು

ಆ.10ರೊಳಗೆ ಆಸ್ಪತ್ರೆಗಳ ಬಾಕಿ ಪಾವತಿ ಮಾಡಲು ವಿಮಾ ಕಂಪೆನಿಗೆ ಜಿಲ್ಲಾಧಿಕಾರಿ ಸೂಚನೆ.

Pinterest LinkedIn Tumblr

Dc_meet_photo_2

ಮಂಗಳೂರು,ಜುಲೈ.28 : ರಾಷ್ಟ್ರೀಯ ಸ್ವಾಸ್ಥ ಬಿಮಾ ಯೋಜನೆ (ಆರ್‌ಎಸ್‌ಬಿವೈ)ಯಡಿ ಅರ್ಹ ಫಲಾನುಭವಿಗಳು ವಿವಿಧ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಪಾವತಿಸಬೇಕಾಗಿರುವ ಬಾಕಿ ವಿಮಾ ಮೊತ್ತವನ್ನು ಆಗಸ್ಟ್ 10ರೊಳಗೆ ಪಾವತಿಸುವಂತೆ ಖಾಸಗಿ ವಿಮಾ ಸಂಸ್ಥೆಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್‌ಎಸ್‌ಬಿವೈ ಯೋಜನೆಯ ಅನುಷ್ಠಾನದ ಕುರಿತು ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದರು. ಮಾತ್ರವಲ್ಲದೆ, ನಗರದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮೊಟಕುಗೊಂಡಿರುವ ಈ ಸೇವೆಯನ್ನು ಪುನರಾರಂಭಿಸುವಂತೆ ಮತ್ತು ನಗರದ ಇತರ ಪ್ರಮುಖ ಆಸ್ಪತ್ರೆಗಳಲ್ಲೂ ಈ ಯೋಜನೆಯಡಿ ಚಿಕಿತ್ಸೆ ಒದಗಿಸಲು ಆಸ್ಪತ್ರೆಗಳಿಗೆ ತಾಕೀತು ಮಾಡುವಂತೆ ವಿಮಾ ಕಂಪೆನಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಯೋಜನೆಯಡಿ ವಿಮಾ ಕಂಪೆನಿಯಿಂದ ಚಿಕಿತ್ಸಾ ಮೊತ್ತವನ್ನು ಭರಿಸುವಲ್ಲಿ ತೀವ್ರ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಆಸ್ಪತ್ರೆಗಳು ಈ ಯೋಜನೆಯಿಂದ ಹಿಂದೆಸರಿದಿವೆ. 2015ರ ಜುಲೈವರೆಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ವಿಮಾ ಕಂಪೆನಿಯು 26,88,413 ರೂಪಾಯಿಯನ್ನು ಪಾವತಿಸಲು ಬಾಕಿ ಉಳಿಸಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 2,365 ಮಂದಿ ಫಲಾನುಭವಿಗಳು ಪ್ರಯೋಜನ ಪಡೆದಿದ್ದು, ಒಟ್ಟು 80,16,400 ರೂ. ಅನ್ನು ವಿವಿಧ ಆಸ್ಪತ್ರೆಗಳಿಗೆ ಪಾವತಿಸಲಾಗಿದೆ. ಯೋಜನೆಯ ನಿಯಮದ ಪ್ರಕಾರ 15ರಿಂದ 30 ದಿನಗಳೊಳಗೆ ಸಂಬಂಧಪಟ್ಟ ವಿಮಾ ಕಂಪೆನಿಯು ಆಸ್ಪತ್ರೆಯ ವಿಮಾ ಮೊತ್ತವನ್ನು ಪಾವತಿಸಬೇಕಾಗಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗಳ ಕುಂದುಕೊರತೆಗಳನ್ನು ವಿಮಾ ಕಂಪೆನಿ ನಿವಾರಿಸುವ ಮೂಲಕ ನಗರದ ಪ್ರಮುಖ ಆಸ್ಪತ್ರೆಗಳಲ್ಲೂ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಯೋಜನೆಗೊಳಪಡುವ ಆಸ್ಪತ್ರೆಗಳು ಮತ್ತು ವಿಮಾ ಕಂಪೆನಿಯ ಜತೆ ಪ್ರತಿ ತಿಂಗಳು ಸಭೆ ನಡೆಸುವಂತೆ ಜಿಲ್ಲೆಯ ಸಹಾಯಕ ಕಾರ್ಮಿಕ ಆಯುಕ್ತರಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು. ದ.ಕ. ಜಿಲ್ಲೆಯಲ್ಲಿ ಬಿಪಿಎಲ್ ಮತ್ತು ನರೇಗಾದಡಿ 2,17,473 ಕಾರ್ಡ್‌ದಾರರು, 78,787 ಬೀಡಿ ಕಾರ್ಮಿಕರು, 269 ನೇಕಾರರನ್ನು ರಾಷ್ಟ್ರೀಯ ಸ್ವಾಸ್ಥ ಬಿಮಾ ಯೋಜನೆಗೊಳಪಡಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ಬಿಪಿಎಲ್ ಮತ್ತು ನರೇಗಾ ಯೋಜನೆಯಡಿ 1,25,085, ಬೀಡಿ ಕಾರ್ಮಿಕರು 13,298 ಹಾಗೂ 67 ನೇಕಾರರು ಸೇರಿ ಒಟ್ಟು 1,38,450 ಮಂದಿ ನೋಂದಾಯಿತರಾಗಿದ್ದಾರೆ. ಫಲಾನುಭವಿಗಳು 1,516 ಕಾಯಿಲೆಗಳಿಗೆ ಸಂಬಂಧಿಸಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 30,000 ರೂ.ವರೆಗಿನ ಉಚಿತ ಚಿಕಿತ್ಸೆ ಪಡೆಯ ಬಹುದಾಗಿದೆ. ನೋಂದಾಯಿತ ಫಲಾನುಭವಿಗಳಲ್ಲಿ ಪ್ರಸಕ್ತ ಸಾಲಿನಲ್ಲಿ 2,714 ಫಲಾನುಭವಿಗಳು ವಿಮಾ ಸೌಲಭ್ಯದಡಿ ಚಿಕಿತ್ಸೆಯನ್ನು ಪಡೆದು ಕೊಂಡಿದ್ದಾರೆ ಎಂದು ಸಹಾಯಕ ಕಾರ್ಮಿಕ ಆಯುಕ್ತ ನಾಗೇಶ್ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸುಳ್ಯದ ಕೆವಿಜಿ ಆಸ್ಪತ್ರೆಯ ಪ್ರತಿನಿಧಿ ಮಾತನಾಡಿ ವಿಮಾ ಕಂಪೆನಿಗೆ ಆಸ್ಪತ್ರೆಗೆ ಸುಮಾರು 14 ಲಕ್ಷ ರೂ. ಬಾಕಿ ಪಾವತಿ ಸಬೇಕಾಗಿದೆ. ಮಾತ್ರವಲ್ಲದೆ ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ ವಿಮಾ ಅಧಿಕಾರಿಯೊಬ್ಬರು ಆಸ್ಪತ್ರೆಯ ಅಧ್ಯಕ್ಷರ ಜತೆ ಅನುಚಿತವಾಗಿ ವರ್ತಿಸಿದ್ದರು ಎಂದು ದೂರಿದರು. ವಿಮಾ ಕಂಪೆನಿಯ ಪ್ರತಿನಿಧಿ ಈ ಬಗ್ಗೆ ಪ್ರತಿಕ್ರಿಯಿಸಿ, ವಿಮಾ ಪರಿಹಾರಕ್ಕೆ ಸಂಬಂಧಿಸಿ ರೋಗಿಯೊಬ್ಬರನ್ನು ನೋಡಲು ದಿಢೀರ್ ಭೇಟಿಯ ಸಂದರ್ಭ ಆಸ್ಪತ್ರೆಯ ಸಿಬ್ಬಂದಿ ವಿಮಾ ಸಂಸ್ಥೆಯ ಪ್ರತಿನಿಧಿಯ ಜತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರತ್ಯಾರೋಪಿಸಿದರು. ಈ ರೀತಿಯ ಘಟನೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ವಿಮಾ ಕಂಪೆನಿಯು ಸಂಬಂಧಪಟ್ಟ ಆಸ್ಪತ್ರೆಗಳಿಗೆ ಭೇಟಿ ನೀಡಲು ನಿರ್ದಿಷ್ಟ ಪ್ರತಿನಿಧಿಗಳನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

ಯೋಜನೆಯ ಫಲಾನುಭವಿಗಳು ವಿಮಾ ಮೊತ್ತ ಪಾವತಿಗೆ ವಿಳಂಬವನ್ನು ತಪ್ಪಿಸುವ ನಿಟ್ಟಿನಲ್ಲಿ ಆಸ್ಪತ್ರೆಗೆ ದಾಖಲಾದ 24 ಗಂಟೆ ಗಳೊಳಗೆ ತಮಗೆ ನೀಡಲಾದ ಕಾರ್ಡನ್ನು ಆಸ್ಪತ್ರೆಗೆ ಒದಗಿಸಿ ಸಹಕರಿ ಸಬೇಕು. ಆಸ್ಪತ್ರೆಗಳವರು ಚಿಕಿತ್ಸೆಯ ಸಂಪೂರ್ಣ ಮಾಹಿತಿಯನ್ನು ನಿರ್ದಿಷ್ಟ ಸಮಯದಲ್ಲಿ ವಿಮಾ ಕಂಪೆನಿಗೆ ನೀಡಬೇಕು ಎಂದು ವಿಮಾ ಕಂಪೆನಿ ಪ್ರತಿನಿಧಿ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಆರ್‌ಸಿಎಚ್ ಅಧಿಕಾರಿ ಡಾ.ರುಕ್ಮಿಣಿ ಮೊದಲಾದವರು ಉಪಸ್ಥಿತರಿದ್ದರು.

Write A Comment