ಕನ್ನಡ ವಾರ್ತೆಗಳು

ಆನ್‌ಲೈನ್ ವ್ಯವಹಾರಗಳ ಬಗ್ಗೆ ಜಾಗರೂಕರಾಗಿರಿ: ಸಾರ್ವಜನಿಕರಿಗೆ ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಮನವಿ

Pinterest LinkedIn Tumblr

Sc_St_meet_1

ಮಂಗಳೂರು, ಜುಲೈ.13 : ಗೋಲ್ಡ್ ಸ್ಕೀಮ್, ಉದ್ಯೋಗ ದೊರಕಿಸುವುದಾಗಿ ಹಣ ಪಡೆಯುವುದು, ಚಿಟ್ ಫಂಡ್, ಮೊಬೈಲ್ ಟವರ್, ಆನ್‌ಲೈನ್ ಲಾಟರಿ- ಬಹುಮಾನ ಮೊದಲಾದ ಆಮಿಷದ ಯೋಜನೆ, ಪ್ರಕರಣಗಳ ಬಗ್ಗೆ ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರಬೇಕು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಎಸ್.ಡಿ. ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ದ.ಕ. ಜಿಲ್ಲಾ ಎಸ್ಪಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ಮಾಸಿಕ ದಲಿತ ಕುಂದುಕೊರತೆಗಳ ಸಭೆಯಲ್ಲಿ ದಲಿತ ನಾಯಕರಿಂದ ವಂಚನೆ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಆಗ್ರಹದ ಕುರಿತಂತೆ ಅವರು ಈ ಪ್ರತಿಕ್ರಿಯೆ ನೀಡಿದರು. ಯಾವುದೇ ಹೊಸ ಹಣ ಹೂಡುವ ಸ್ಕೀಮ್‌ಗಳ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅದು ಅಧಿಕೃತವಾಗಿದೆಯೇ ಎಂದು ಸಾರ್ವಜನಿಕರು ತಿಳಿದುಕೊಳ್ಳುವುದು ಉತ್ತಮ ಎಂದವರು ಸಲಹೆ ನೀಡಿದರು.

Sc_St_meet_2 Sc_St_meet_3

ಖಾಸಗಿ ಬಡ್ಡಿ ವ್ಯವಹಾರದಿಂದ ಸಾಕಷ್ಟು ಮಂದಿ ಮೋಸ ಹೋಗುತ್ತಿದ್ದು, ಯಾವುದೇ ರೀತಿಯ ಪರವಾನಿಗೆ ಇಲ್ಲದ ಫೈನಾನ್ಸ್ ಸಂಸ್ಥೆಗಳು ಕೈ ಸಾಲ ನೀಡಿ ಬಳಿಕ ಹಣ ಪಡೆದುಕೊಂಡವರು ಆತ್ಮಹತ್ಯೆಗೆ ಮುಂದಾಗುವಂತಹ ಪ್ರಕರಣಗಳು ನಡೆಯುತ್ತಿವೆ. ವಿಟ್ಲ ಠಾಣೆಯಲ್ಲೂ ಇಂತಹ ಪ್ರಕರಣವೊಂದು ದಾಖಲಾಗಿದ್ದು, ನೊಂದ ಪತಿ-ಪತ್ನಿ ಆತ್ಮಹತ್ಯೆಗೆ ಮುಂದಾಗಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರನ್ನು ಬಂಧಿಸಲಾಗಿಲ್ಲ ಎಂದು ನಾರಾಯಣ ಪುಂಚಮೆ ಸಭೆಯಲ್ಲಿ ಪ್ರಸ್ತಾಪಿಸಿದರು.

ದಲಿತ ದೌರ್ಜನ್ಯ ಕಾನೂನಿನ ದುರ್ಬಳಕೆ ಬಗ್ಗೆ ಸೂಕ್ತ ಕ್ರಮ:
ಸ್ವ ಪ್ರತಿಷ್ಠೆಗಾಗಿ ಕೆಲವೊಂದು ಸಂಘಟನೆಗಳಿಂದಲೂ ಇತ್ತೀಚೆಗೆ ದಲಿತ ದೌರ್ಜನ್ಯ ಕಾನೂನಿನ ದುರ್ಬಳಕೆ ನಡೆಯುತ್ತಿದೆ ಎಂದು ಶೇಖರ್ ಬೆಳ್ತಂಗಡಿ ಆರೋಪಿಸಿದರು. ಇತ್ತೀಚೆಗೆ ಬೆಳ್ತಂಗಡಿಯಲ್ಲಿ ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿದ್ದು, ಅದಕ್ಕೆ ಕೆಲವೊಂದು ಮಕ್ಕಳು ಬರಲು ಒಪ್ಪದಿದ್ದಾಗ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿತ್ತು. ಆದರೆ ಬಳಿಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ವಿನೋದ್‌ರಾಜ್ ಎಂಬಾತ ಸಂಘಟನೆಯ ಒತ್ತಡದ ಮೇರೆಗೆ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಆದರೆ ಆತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ. ಹಾಗಿದ್ದರೂ ಸುಳ್ಳು ಪ್ರಕರಣ ದಾಖಲಿಸಿ ಇದೀಗ ಅಮಾಯಕ ಮಕ್ಕಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಬಗ್ಗೆ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ನಿಜವಾಗಿಯೂ ದಲಿತ ದೌರ್ಜನ್ಯ ಪ್ರಕರಣಗಳಾದಾಗ ಅದನ್ನು ನಂಬದಂತಹ ಸ್ಥಿತಿ ಬರಬಹುದು ಎಂದು ಶೇಖರ್ ಬೆಳ್ತಂಗಡಿ ಆಕ್ಷೇಪಿಸಿದರು.

Sc_St_meet_4 Sc_St_meet_5 Sc_St_meet_6

ದಲಿತ ದೌರ್ಜನ್ಯ ಕಾನೂನಿನ ದುರುಪಯೋಗ ಆಗುತ್ತಿರುವುದು ನಿಜ. ಆದರೆ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸುವ ಮೂಲಕ ಅದಕ್ಕೆ ಅವಕಾಶ ನೀಡುತ್ತಿಲ್ಲ. ಈ ಪ್ರಕರಣದಲ್ಲೂ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಡಾ.ಶರಣಪ್ಪ ತಿಳಿಸಿದರು. ಬೆಳ್ತಂಗಡಿ ನಗರ ಠಾಣೆಯ ಪೊಲೀಸ್ ಪೇದೆಯೊಬ್ಬರು ಅಲ್ಲಿನ ಬ್ಯಾಂಕ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ದಲಿತ ಸಮುದಾಯದ ರವಿ ಎಂಬವರ ಮೇಲೆ ಸುಮಾರು 15 ದಿನಗಳ ಹಿಂದೆ ದೈಹಿಕ ಹಲ್ಲೆ ನಡೆಸಿರುವು ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪ್ರಕರಣದ ಬಗ್ಗೆ ಎಫ್‌ಐಆರ್ ಆಗಿಲ್ಲ. ಯುವಕ ತಪ್ಪು ಮಾಡಿದ್ದಲ್ಲಿ ವಿಚಾರಣೆ ನಡೆಸುವ ಬದಲು ಆತನ ಮೇಲೆ ದೈಹಿಕ ಹಲ್ಲೆ ನಡೆಸುವ ಮೂಲಕ ದಲಿತ ಸಮುದಾಯವನ್ನು ಅವಮಾನಿಸಲಾಗಿದೆ. ಈ ಬಗ್ಗೆ ಒಂದು ವಾರದೊಳಗೆ ಸೂಕ್ತ ಕ್ರಮ ಆಗದಿದ್ದರೆ, ನ್ಯಾಯ ದೊರೆಯದಿದ್ದರೆ ಪೊಲೀಸ್ ಠಾಣೆಯ ಎದುರು ನೊಂದ ಯುವಕ ಅವನ ಕುಟುಂಬ ಹಾಗೂ ದಲಿತ ಸಮುದಾಯದವರು ಸತ್ಯಾಗ್ರಹ ನಡೆಸಲಿದ್ದಾರೆ ಎಂದು ದಲಿತ ನಾಯಕ ಎಸ್.ಪಿ.ಆನಂದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಕಾಲನಿಗಳಿಗೆ ಎಸ್ಪಿ ಭೇಟಿಗೆ ಬೇಡಿಕೆ: 
ವಿಟ್ಲದ ಪುಣಚ ಎಂಬಲ್ಲಿ ಮಗುವಿನ ಮೇಲೆ ಅತ್ಯಾಚಾರ ಪ್ರಕರಣವೊಂದು ನಡೆದಿದ್ದು, ಈ ಪ್ರಕರಣದ ಬಗ್ಗೆ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಸಮಾಜ ಕಲ್ಯಾಣ ಇಲಾಖೆ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ನೊಂದ ಮಗುವಿನ ಮನೆಗೆ ಭೇಟಿ ನೀಡಿ ಸಾಂತ್ವ್ವನ ಹೇಳುವ ಕೆಲಸವನ್ನೂ ಮಾಡಿಲ್ಲ ಎಂದು ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನಿಕಟಪೂರ್ವ ಸದಸ್ಯ, ದಲಿತ ನಾಯಕ ಗೋಪಾಲ ಕಾಡುಮಠ ಬೇಸರ ವ್ಯಕ್ತಪಡಿಸಿದರು. ಪ್ರಕರಣದಿಂದಾಗಿ ಸ್ಥಳೀಯ ದಲಿತ ಕುಟುಂಬಗಳವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಗ್ರಾಮೀಣ ಪ್ರದೇಶದ ದಲಿತ ಕಾಲನಿಗಳಲ್ಲಿವೆ. ಆದ್ದರಿಂದ ಮಕ್ಕಳು ಮತ್ತು ಮಹಿಳೆಯರಲ್ಲಿ ಜಾಗೃತಿ ಹಾಗೂ ಧೈರ್ಯ ತುಂಬುವ ನಿಟ್ಟಿನಲ್ಲಿ ಎಸ್ಪಿಯವರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಂಗಳಿಗೆ ಒಂದೆರಡು ದಲಿತ ಕಾಲನಿಗಳಿಗೆ ಭೇಟಿ ನೀಡುವ ಕಾರ್ಯ ಮಾಡಬೇಕು ಎಂದು ಅವರು ಆಗ್ರಹಿಸಿದರು. ಹೆಚ್ಚುವರಿ ಎಸ್ಪಿ ಶಾಂತಕುಮಾರ್ ಉಪಸ್ಥಿತರಿದ್ದರು.

ಶ್ರೀವರ ಗೋಲ್ಡ್ ಸ್ಕೀಮ್‌ನಿಂದ 1.7 ಕೋಟಿ ರೂ. ವಂಚನೆ: 
ಪುತ್ತೂರಿನ ಗೋಲ್ಡ್ ಸ್ಕೀಮ್ ವ್ಯವಹಾರದಲ್ಲಿ ಸುಮಾರು 10,500 ಮಂದಿಯನ್ನು ತಿಂಗಳಿಗೆ ನಿಗದಿತ ಪ್ರಮಾಣದ ಹಣ ಕಟ್ಟಿ ಚಿನ್ನ ನೀಡುವ ಆಮಿಷದ ಮೂಲಕ ಸುಮಾರು 1.7 ಕೋಟಿ ರೂ. ವಂಚಿಸಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಎಸ್ಪಿ ಡಾ.ಶರಣಪ್ಪ ಎಸ್.ಡಿ. ತಿಳಿಸಿದರು. ತಿಂಗಳಿಗೆ ತಲಾ 250, 500, 1,000 ರೂ.ನಿಂದ ಗರಿಷ್ಠ 10,000 ರೂ.ನಂತೆ 20 ತಿಂಗಳು ಹೂಡಿಕೆ ಮಾಡಿ ಗೋಲ್ಡ್ ನೀಡುವ ಸ್ಕೀಮ್ ಇದಾಗಿತ್ತು. 100 ಮಂದಿಯನ್ನು ಒಳಗೊಂಡ ಒಂದೊಂದು ಗುಂಪಿನ ಮೂಲಕ ಕಳೆದೊಂದು ವರ್ಷದಿಂದ ಈ ಶ್ರೀವರ ಗೋಲ್ಡ್ ಅಂಗಡಿಯ ಮಾಲಕ ಬಾಲಕೃಷ್ಣ ಭಟ್ ಎಂಬಾತ ಸ್ಕೀಮ್ ನಡೆಸುತ್ತಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ. ದೂರೊಂದರ ಮೇಲೆ ತನಿಖೆ ನಡೆಯುತ್ತಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ. ಈತ ಪುರಸಭೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯಿಂದ ಜ್ಯುವೆಲ್ಲರಿಗಾಗಿ ಪರವಾನಿಗೆ ಪಡೆದುಕೊಂಡಿದ್ದ ಎಂದು ಎಸ್ಪಿ ವಿವರ ನೀಡಿದರು.

Write A Comment