ಕನ್ನಡ ವಾರ್ತೆಗಳು

ಸಾವಯವ ನೈಸರ್ಗಿಕ ಸಿರಿಧಾನ್ಯ ಆಹಾರೋತ್ಸವಕ್ಕೆ ಚಾಲನೆ.

Pinterest LinkedIn Tumblr

Savayava_food_photo_1

ಮಂಗಳೂರು, ಜುಲೈ.13  : ದೇಸಿ ಉತ್ಥಾನ ಅಸೋಸಿಯೇಟ್ಸ್ ಮಂಗಳೂರು ಹಾಗೂ ಪ್ರಣವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ವತಿಯಿಂದ ರವಿವಾರ ಉಜ್ಜೋಡಿಯ ಪ್ರಣವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಆಯೋಜಿಸಿದ್ದ ಸಾವಯವ ನೈಸರ್ಗಿಕ ಸಿರಿಧಾನ್ಯ ಆಹಾರೋತ್ಸವಕ್ಕೆ ಚಾಲನೆ ನೀಡಿದ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಪೂರಕವಾದ ಸಾವಯವ ಕೃಷಿ ಉತ್ಪನ್ನಗಳತ್ತ ಜನತೆ ಮನ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಅವರು ಸಾವಯವ ಕೃಷಿ ಮತ್ತು ಸಾವಯವ ಉತ್ಪನ್ನಗಳ ಉಪಯುಕ್ತತೆ ಕುರಿತು ಮಾಹಿತಿ ನೀಡಿದರು.

Savayava_food_photo_2 Savayava_food_photo_3

ರಾಸಾಯನಿಕ ವಸ್ತುಗಳ ಸಿಂಪಡಣೆಯಿಂದ ಕೃಷಿಯಲ್ಲಿ ಪ್ರಗತಿ ಕಾಣಲು ಸಾಧ್ಯ ಎಂಬ ತಪ್ಪು ಕಲ್ಪನೆ ರೈತರಿಂದ ದೂರವಾಗಬೇಕು. ಕಹಿ ಬೇವು, ಗೇರು ಸೊಪ್ಪು ಇಂತಹ ಸೊಪ್ಪುಗಳನ್ನು ಸಾಕಷ್ಟು ನೀರು ಹಾಕಿ ಕುದಿಸಿ ತಣ್ಣಗಾದ ಬಳಿಕ ಅದನ್ನು ಕೃಷಿಗೆ ಸಿಂಪಡಣೆ ಮಾಡುವುದರಿಂದ ಕೀಟ ಬಾಧೆಯಿಂದ ಮುಕ್ತಿ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸಂಶೋಧನೆಯಾಗಬೇಕು ಎಂದು ಶರ್ಮ ಹೇಳಿದರು.

ದೇಸಿ ಉತ್ಥಾನ ಸಂಸ್ಥೆ ವರ್ಷವಿಡೀ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಸಾವಯವ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಈ ಕಾರ್ಯ ನಿರಂತರವಾಗಿ ಮುಂದುವರಿಯಲಿ ಎಂದವರು ಆಶಿಸಿದರು. ದೇಸಿ ಉತ್ಥಾನ ಅಸೋಸಿಯೇಟ್ಸ್‌ನ ಮುಖ್ಯಸ್ಥ ರಾಮಕೃಷ್ಣ ಭಟ್ ಮೈರುಗ ಪ್ರಾಸ್ತಾವಿಕವಾಗಿ ಮಾತನಾಡಿದರು.

Savayava_food_photo_4

ಆಹಾರೋತ್ಸವದಲ್ಲಿ ಬಗೆ ಬಗೆಯ ತಿನಿಸುಗಳು ಗ್ರಾಹಕರ ಬಾಯಲ್ಲಿ ನೀರೂರಿಸಿದ್ದವು. ಸಾಮೆ, ಇಡ್ಲಿ, ಬಾಳೆ ಹೂವಿನ ಪತ್ರೊಡೆ, ಹೆಸರು ಕಾಳು ಫಲಾವು, ಸಜ್ಜೆ ರೊಟ್ಟಿ, ಬರಗ ಮೊಸರನ್ನ, ನವಣೆ ಹೋಳಿಗೆ, ರಾಜಮುಡಿ ಚಿತ್ರಾನ್ನ, ನವಣೆ ಉಪ್ಪಿಟ್ಟು, ಅಮೃತ ಪಾನಕ, ಅರಸಿನ ಹಾಲು, ಹೀಗೆ ಹಲವು ಬಗೆಯ ತಿನಿಸುಗಳಿದ್ದವು. ಬೆಳಗ್ಗಿನಿಂದ ರಾತ್ರಿಯವರೆಗೆ ನಡೆದ ಈ ಆಹಾರೋತ್ಸವದಲ್ಲಿ ನೂರಾರು ಮಂದಿ ಪಾಲ್ಗೊಂಡರು.

ದೇಸಿ ಉತ್ಥಾನ ಸಂಸ್ಥೆಯ ಗೋವಿಂದ ಭಟ್ ಮೈರುಗ ಉಪಸ್ಥಿತರಿದ್ದರು. ಪ್ರಣವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ನಿರ್ದೇಶಕ ಡಾ.ರಾಜೇಶ್ ಪಾದೆಕಲ್ಲು ಸ್ವಾಗತಿಸಿದರು.

Write A Comment