ಕನ್ನಡ ವಾರ್ತೆಗಳು

ವೈದ್ಯರಿಗೆ ವೃತ್ತಿ, ಸಾಮಾಜಿಕ ಭದ್ರತಾ ಯೋಜನೆ: ಡಾ.ಹೊನ್ನೇಗೌಡ

Pinterest LinkedIn Tumblr

Mumbai_news_photo_1

ಮಂಗಳೂರು,ಜುಲೈ.06 : ವೈದ್ಯರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳನ್ನು ಭಾರತೀಯ ವೈದ್ಯಕೀಯ ಘಟಕ ಹಮ್ಮಿಕೊಂಡಿದ್ದು, ಇದ ಪಡೆದುಕೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಹೊನ್ನೇಗೌಡ ಕರೆ ನೀಡಿದರು.

ಐ‌ಎಂಎ ಮಂಗಳೂರು ಘಟಕ ವತಿಯಿಂದ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ವೈದ್ಯವೃತ್ತಿಯಲ್ಲಿ ಎದುರಾಗುವ ಸಂಭಾವ್ಯ ಅಪಾಯದಿಂದ ವೈದ್ಯರಿಗೆ ಸುರಕ್ಷೆ ನೀಡಲಾಗುತ್ತಿದೆ. ಮತ್ತು ವೃತ್ತಿನಿರತ ವೈದ್ಯರು ಮೃತಪಟ್ಟರೆ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಲು ಕೂಡಾ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

Mumbai_news_photo_2 Mumbai_news_photo_3 Mumbai_news_photo_4

ವೈದ್ಯಕೀಯ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ.ಮುಕುಂದ್, ಡಾ.ದೇವದಾಸ್ ರೈ, ಡಾ.ಅಶೋಕ ಭಟ್ ಮತ್ತು ಡಾ.ಕಸ್ತೂರಿ ಪೊಳ್ನಾಯ, ಐ‌ಎಂಎ ಟ್ರಸ್ಟ್ ಅಧ್ಯಕ್ಷ ಮತ್ತು ಯೂನಿಟಿ ಹೆಲ್ತ್ ಕಾಂಪ್ಲೆಕ್ಸ್ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹಮಾನ್, ಕಾರ್ಯದರ್ಶಿ ಡಾ.ಕೆ.ಆರ್. ಕಾಮತ್ ಅವರನ್ನು ಹೊನ್ನೇಗೌಡ ಸನ್ಮಾನಿಸಿದರು.

ಗೌರವ ಅತಿಥಿಯಾಗಿದ್ದ ಕಲ್ಲಡ್ಕ ಡಾ.ಪ್ರಭಾಕರ ಭಟ್, “ಸಶಕ್ತ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಮಹತ್ವದ್ದು. ತಮ್ಮಲ್ಲಿಗೆ ಸಲಹೆಗಾಗಿ ಬರುವ ರೋಗಿಗಳ ಸೇವೆಯನ್ನೇ ದೇವರ ಸೇವೆ ಎಂದು ಪರಿಗಣಿಸಿದಲ್ಲಿ ವೈದ್ಯರ ಬಗ್ಗೆ ಪೂಜ್ಯ ಮನೋಭಾವನೆ ಬೆಳೆಯಲು ಸಾಧ್ಯ. ಸಮಾಜದಲ್ಲಿ ಶಿಕ್ಷಕರು ಜನರ ಜ್ಞಾನದೀಪ ಹಚ್ಚಿದರೆ, ವೈದ್ಯರು ಪ್ರಾಣದೀಪ ಬೆಳಗುತ್ತಾರೆ. ರೋಗಿಗಳು ವೈದ್ಯರಲ್ಲಿ ದೇವರನ್ನು ಕಾಣುತ್ತಾರೆ. ಅದಕ್ಕೆ ತಕ್ಕಂತೆ ವೈದ್ಯರು ಕೂಡಾ ಸೇವಾ ಮನೋಭಾವದಿಂದ ಇಡೀ ಸಮಾಜದ ವಿಶ್ವಾಸ ಗೆಲ್ಲಬೇಕು” ಎಂದು ಕರೆ ನೀಡಿದರು.

Mumbai_news_photo_5 Mumbai_news_photo_6 Mumbai_news_photo_7 Mumbai_news_photo_8

ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ.ಶಾಂತಾರಾಮ ಶೆಟ್ಟಿ ಮಾತನಾಡಿ, “ವಿಶ್ವಕಂಡ ಅಪರೂಪದ ವೃತ್ತಿನಿಷ್ಠ ವೈದ್ಯ ಭಾರತರತ್ನ ಡಾ.ಬಿ.ಸಿ.ರಾಯ್ ಬಹುಮುಖ ವ್ಯಕ್ತಿತ್ವದ ಮತ್ತು ಸೇವಾ ಮನೋಭಾವ ಹೊಂದಿದ್ದ ವ್ಯಕ್ತಿ. ವೈದ್ಯಕೀಯ, ಶಿಕ್ಷಣ, ರಾಜಕೀಯ, ಸಮಾಜಸೇವಾ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ. ಅವರು ಇಡೀ ವೈದ್ಯ ಸಮುದಾಯಕ್ಕೆ ಮಾದರಿ” ಎಂದು ಬಣ್ಣಿಸಿದರು. ಅವರ ಜನ್ಮದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ವೈದ್ಯರು ವೃತ್ತಿಸಂಹಿತೆ ರೂಢಿಸಿಕೊಂಡು ತತ್ವನಿಷ್ಠರಾಗಿ ಸಮಾಜಸೇವೆ ಸಲ್ಲಿಸಬೇಕು” ಎಂದು ಸಲಹೆ ಮಾಡಿದರು.

ಭಾರತೀಯ ವೈದ್ಯಕೀಯ ಮಂಡಳಿ ಕಾರ್ಯಕಾರಿ ಮಂಡಳಿ ಸದಸ್ಯ ಡಾ.ರವೀಂದ್ರ ಮಾತನಾಡಿ, “ವೈದ್ಯರು ಹಾರೂ ರೋಗಿಗಳ ಸಂಬಂಧ ಪವಿತ್ರ. ಇದನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡುವ ಮೂಲಕ ಗ್ರಾಹಕ ಕಾಯ್ದೆಯ ವ್ಯಾಪ್ತಿಗೆ ತಂದಿರುವುದು ವಿಷಾದನೀಯ. ವೈದ್ಯಸಂಘಟನೆಗಳು ಹೆಚ್ಚು ಬಲಯುತವಾಗಿ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಸೂಚಿಸಿದರು.

ವೈದ್ಯರ ದಿನಾಚರಣೆಯನ್ನು ಸರ್ಕಾರವೇ ಆಚರಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಸಚಿವರು ಗಮನ ಹರಿಸಬೇಕು ಎಂದು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ವೀರಭದ್ರಯ್ಯ ಆಗ್ರಹಿಸಿದರು. ವೈದ್ಯರ ವೃತ್ತಿಕೌಶಲ ಬೆಳೆಸುವ ಸಲುವಾಗಿ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಎಡೆಬಿಡದೆ ಹಮ್ಮಿಕೊಳ್ಳುವುದು ಅಗತ್ಯ ಎಂದರು.

ಐ‌ಎಂಎ ಮಂಗಳೂರು ಘಟಕದ ಅಧ್ಯಕ್ಷ ಡಾ.ಜಿ.ಕೆ.ಭಟ್ ಸಂಕಬಿತ್ತಿಲು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶೇಖರ ಪೂಜಾರಿ ವಂದಿಸಿದರು. ಡಾ.ವೀಣಾ ಭಗವಾನ್ ಕಾರ್ಯಕ್ರಮ ನಿರೂಪಿಸಿದರು.

Write A Comment