ಕನ್ನಡ ವಾರ್ತೆಗಳು

ಮಹಿಳೆಯಿಂದ 50,000 ರೂ. ಮೌಲ್ಯದ ಕರಿಮಣಿ ಸರ ಎಗರಿಸಿ ಪರಾರಿಯಾದ ಭೂಪ

Pinterest LinkedIn Tumblr

theft_gold_photot

ಮೂಲ್ಕಿ, ಜುಲೈ.01 : ಪಾತ್ರೆಗಳನ್ನು ಸ್ವಚ್ಛಗೊಳಿಸುವ ಪುಡಿಯನ್ನು ಮಾರಾಟ ಮಾಡುವ ಸೋಗಿನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಗಳಿಬ್ಬರು ಮಹಿಳೆಯೋರ್ವರ ಮುಖಕ್ಕೆ ಯಾವುದೋ ಪುಡಿಯನ್ನು ಎರಚಿ 50,000 ರೂ. ಮೌಲ್ಯದ ಕರಿಮಣಿ ಸರವನ್ನು ಲಪಟಾಯಿಸಿದ ಘಟನೆ ಇಲ್ಲಿಗೆ ಸಮೀಪದ ಪುನರೂರಿನಲ್ಲಿ ನಿನ್ನೆ ನಡೆದಿದೆ.

ಪುನರೂರು ನಿವಾಸಿ ಪ್ರಫುಲ್ಲಾ ನಿನ್ನೆ ಬೆಳಿಗ್ಗೆ ಮನೆಯಲ್ಲಿ ಬೀಡಿ ಕಟ್ಟುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳು ಹಾಗೂ ದೇವರ ದೀಪಗಳನ್ನು ಸ್ವಚ್ಛಗೊಳಿಸುವ ಪುಡಿಯ ಮಾರಾಟಕ್ಕೆ ಬಂದಿರುವುದಾಗಿ ತಿಳಿಸಿ, ಬಳಿಕ ತುಳಸಿ ಕಟ್ಟೆಯಲ್ಲಿಟ್ಟಿರುವ ದೀಪವನ್ನು ಸ್ವಚ್ಛಗೊಳಿಸಿ ತೋರಿಸಿದ್ದರು, ಇದಾದ ಬಳಿಕ ಉಚಿತವಾಗಿ ಪುಡಿಯನ್ನು ನೀಡುತ್ತೇವೆ, ಒಂದು ಲೋಟ ನೀರು ತನ್ನಿ ಎಂದು ಹೇಳಿದ್ದರು. ಪ್ರಫುಲ್ಲಾ ಮನೆಯೊಳಗಿನಿಂದ ನೀರು ತಂದು ಕೊಟ್ಟು ಮನೆಯ ಮುಂಬಾಗಿಲ ಮೆಟ್ಟಿಲಿನಲ್ಲಿ ನಿಂತುಕೊಂಡಿದ್ದಾಗ ಅವರ ಪೈಕಿ ಓರ್ವ ಯಾವುದೋ ಪುಡಿಯನ್ನು ಆಕೆಯ ಮುಖಕ್ಕೆರಚಿದ್ದ. ತಕ್ಷಣ ಮಂಪರು ಸ್ಥಿತಿಗೆ ಜಾರಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಪ್ರಫುಲ್ಲಾ ತನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ತೆಗೆದು ಅವರಿಗೆ ನೀಡಿದ್ದರು.

ಆಕೆಗೆ ಪ್ರಜ್ಞೆ ಮರುಕಳಿಸಿದಾಗ ಆಕೆ ಮೆಟ್ಟಿಲಿನಲ್ಲಿ ಕುಳಿತಿದ್ದರು ಮತ್ತು ಆಕೆಯಿಂದ ಸರವನ್ನು ಪಡೆದುಕೊಂಡ ಅಪರಿಚಿತ ವ್ಯಕ್ತಿಗಳು ಅಲ್ಲಿಂದ ಪರಾರಿಯಾಗಿದ್ದರು. ವಂಚಕರು ಲಪಟಾಯಿಸಿದ ಸರದ ಮೌಲ್ಯ 50,000 ರೂ.ಗಳೆನ್ನಲಾಗಿದೆ.

ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Write A Comment