ಕನ್ನಡ ವಾರ್ತೆಗಳು

ಜನತೆಯ ಸಮಸೈಗಳಿಗೆ ಸೂಕ್ತ ಸ್ಪಂದನೆ : ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ

Pinterest LinkedIn Tumblr

Sp_meet_press_1

ಮಂಗಳೂರು, ಜೂ. 24: ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗಳಲ್ಲಿ ‘ಪೊಲೀಸ್ ಐಟಿ’ ವ್ಯವಸ್ಥೆಗೊಳಪಡಿಸಲಾಗುತ್ತಿದೆ. ಎಫ್ಐ‌ಆರ್ ದಾಖಲು, ಕೋರ್ಟ್ ಗೆ ಚಾರ್ಜ್‌ಶೀಟ್ ಸಲ್ಲಿಕೆ, ಪ್ರತಿ ಯೊಂದು ಗ್ರಾಮದ ಸಮಗ್ರ ಮಾಹಿತಿ ಹೀಗೆ ಎಲ್ಲಾ ಅಂಶಗಳು ಪೊಲೀಸ್ ಐಟಿಯೊಳಗೆ ಬರಲಿದೆ. ಪ್ರತಿ ಠಾಣೆಗೆ ಕನಿಷ್ಠ 5-6 ಕಂಪ್ಯೂಟರ್ ಒದಗಿಸಲಾಗುತ್ತಿದೆ. ಪೇಪರ್‌ಲೆಸ್ ಪೊಲೀಸ್ ಠಾಣೆಗಳನ್ನಾಗಿಸುವುದರ ಜೊತೆಗೆ ಜನತೆಯ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ಬೀಟ್ ಎಂಬ ವ್ಯವ ಸ್ಥೆಯು ಐದಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದು, ನಗರ ಪ್ರದೇಶಗಳಲ್ಲಿ ಇದು ಯಶಸ್ವಿಯಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಹೇಳಿದರು.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಜನಸ್ನೇಹಿ ಯಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ಒತ್ತು ನೀಡುತ್ತಿದೆ. ಇ-ಬೀಟ್ ವ್ಯವಸ್ಥೆಯ ಮೂಲಕ ಗ್ರಾಮೀಣ ಭಾಗದ ಜನತೆಯೊಂದಿಗೆ ಸಂಪರ್ಕ ಸಾಧಿಸುವುದರೊಂದಿಗೆ ಅಹಿತಕರ ಘಟನೆಗಳು ನಡೆಯದಂತೆ ಮುಂಜಾ ಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಠಾಣೆಯಲ್ಲಿ 10 ಮಂದಿ ಸಿಬ್ಬಂದಿಯನ್ನೊಳಗೊಂಡ ಇ- ಬೀಟ್ ವ್ಯವಸ್ಥೆ ಮಾಡಲಾಗಿದೆ. ಈ ಸಿಬ್ಬಂದಿ ಪ್ರತಿ ಗ್ರಾಮಗಳಿಗೆ ತೆರಳಿ ಜನತೆಗೆ ಸ್ಥೈರ್ಯ ತುಂಬಲಿದ್ದಾರೆ. ತಂಡದ ಸಿಬ್ಬಂದಿ ಯಾವ ಸಮಯ ದಲ್ಲಿ ಎಲ್ಲೆಲ್ಲಿ ಹೋಗಿದ್ದಾರೆ ಎಂಬ ಮಾಹಿತಿಯೂ ಈ ವ್ಯವಸ್ಥೆಯ ಮೂಲಕ ಗೊತ್ತಾಗಲಿದೆ ಎಂದು ಹೇಳಿದರು.

Sp_meet_press_2

ಪ್ರತಿ ಸಿಬ್ಬಂದಿಗೆ ಕನಿಷ್ಠ ಮೂರು ಗ್ರಾಮದ ಜವಾಬ್ದಾರಿ ನೀಡಲಾಗಿದ್ದು, ಆ ಗ್ರಾಮಗಳ ಎಲ್ಲಾ ಮಾಹಿತಿ ಸಿಬ್ಬಂದಿಯ ಬಳಿ ಇರಲಿದೆ. ವಿವಿಧ ಸಂಘಟನೆ, ಶಾಲೆ, ಧಾರ್ಮಿಕ ಕೇಂದ್ರಗಳು ಸೇರಿದಂತೆ ಗ್ರಾಮದ ಸುಮಾರು 50 ಮಂದಿಯ ಸಂಪರ್ಕ ಸಂಖ್ಯೆ ಸಿಬ್ಬಂದಿಯ ಬಳಿ ಇರಲಿದೆ ಎಂದು ತಿಳಿಸಿದ ಅವರು, ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಸೂಚಿಸಲಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 30 ಲಕ್ಷ ವೆಚ್ಚದಲ್ಲಿ ಆಡಳಿತ ಮಂಡಳಿ ಸಿಸಿಟಿವಿ ಅಳವಡಿಸಲು ಮುಂದಾಗಿದೆ ಎಂದರು.

ಆಸಕ್ತ ಮಲೆಕುಡಿಯರನ್ನು ಹೋಂ ಗಾರ್ಡ್‌ಗಳಾಗಿ ನೇಮಕ :ಮಲೆಕುಡಿಯರನ್ನು ಹೋಂ ಗಾರ್ಡ್‌ಗಳಾಗಿ ನೇಮಕ ಮಾಡುವ ಪ್ರಕ್ರಿಯೆ ಬೇರೆ ಜಿಲ್ಲೆಗಳಲ್ಲಿ ಆಗಿದೆ. ಜಿಲ್ಲಾ ಪೊಲೀಸ್ ಇಲಾಖೆಯು ಮಲೆಕುಡಿಯರನ್ನು ಹೋಂ ಗಾರ್ಡ್‌ಗಳಾಗಿ ನೇಮಕ ಮಾಡಲು ಸಿದ್ಧವಿದೆ. ಇಚ್ಛಾಶಕ್ತಿ ವ್ಯಕ್ತಪಡಿಸಿದರೆ ನೇಮಕಾತಿ ನಡೆಯಲಿದೆ ಎಂದು ಅವರು ಹೇಳಿದರು.

ನೈತಿಕ ಪೊಲೀಸ್‌ಗಿರಿ ಅಲ್ಲ ಅನೈತಿಕ ಗೂಂಡಾಗಿರಿ :ಡಾ. ಶರಣಪ್ಪ

ದ.ಕ.ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ಗಿರಿ ಎಂದು ಕರೆಸಿಕೊಳ್ಳುವ ಪ್ರಕರಣಗಳಲ್ಲಿ ಯಾವುದೇ ನೈತಿಕತೆ ಇರುವುದಿಲ್ಲ. ಹಾಗಾಗಿ ಇಂತಹ ಪ್ರಕರಣಗಳನ್ನು ವರದಿ ಮಾಡುವಾಗ ಮಾಧ್ಯಮಗಳು ಕೂಡಾ ಎಚ್ಚರಿಕೆ ವಹಿಸಬೇಕು. ಇಂತಹ ಕೃತ್ಯಗಳನ್ನು ಅನೈತಿಕ ಗೂಂಡಾಗಿರಿ (ಇಮ್ಮೋರಲ್ ರೌಡಿಸಂ) ಎಂದು ಉಲ್ಲೇಖಿಸುವುದು ಸೂಕ್ತ ಎಂದು ಇದೇ ಸಂದರ್ಭದಲ್ಲಿ ಡಾ. ಶರಣಪ್ಪ ಅವರು ಸಲಹೆ ನೀಡಿದ್ದಾರೆ.

ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಾರ್ಯದರ್ಶಿ ಶ್ರೀನಿವಾಸ್ ಇಂದಾಜೆ ಉಪಸ್ಥಿತರಿದ್ದರು.

Write A Comment