ಕನ್ನಡ ವಾರ್ತೆಗಳು

ನಗರದ ಪ್ರಮುಖ 7 ಪಾರಂಪರಿಕ ಕಟ್ಟಡಗಳ ಮಾಹಿತಿ ಫಲಕ ಅನಾವರಣ

Pinterest LinkedIn Tumblr

rai_univrty_photo_1

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿರುವ 100 ವರ್ಷಕ್ಕೂ ಹಿಂದಿನ ಹಳೆಯ ಹಾಗೂ ಸಾಂಸ್ಕೃತಿಕ, ಸಾಮಾಜಿಕ, ಐತಿಹಾಸಿಕ ಪ್ರಾಮುಖ್ಯ ಹೊಂದಿರುವ ಕಟ್ಟಡಗಳನ್ನು ಗುರುತಿಸುವ ಅಭಿಯಾನಕ್ಕೆ ಮಂಗಳೂರಿನಲ್ಲಿ ಚಾಲನೆ ದೊರೆತಿದ್ದು, ಇಂತಹ ಸ್ಥಳದಲ್ಲಿ ಮಾಹಿತಿ ಫಲಕಗಳನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಶನಿವಾರ ಅನಾವರಣಗೊಳಿಸಿದರು.

ಮೊದಲ ಹಂತದಲ್ಲಿ ಸುಮಾರು 40 ಪಾರಂಪರಿಕ ಕಟ್ಟಡ/ಸ್ಥಳ/ಸ್ಮಾರಕಗಳನ್ನು ಗುರುತಿಸಿದ್ದು, ಅವುಗಳ ಮುಂದೆ ಪ್ರವಾಸಿಗರಿಗೆ ಮಾಹಿತಿ ನೀಡುವ ಫಲಕ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರಲ್ಲಿ ಶನಿವಾರ ನಗರದ 7 ಪ್ರಮುಖ ಪಾರಂಪರಿಕ ಕಟ್ಟಡಗಳಿಗೆ ಮಾಹಿತಿ ಫಲಕ ಅಳವಡಿಕೆ ಉದ್ಘಾಟನೆ ನಡೆಯಿತು.

ಸಚಿವ ಬಿ. ರಮಾನಾಥ ರೈ ಮಾತನಾಡಿ, ಮಂಗಳೂರು ನಗರದಲ್ಲಿ ಹಲವು ಪಾರಂಪರಿಕ, ಐತಿಹಾಸಿಕ ಕಟ್ಟಡ/ಸ್ಥಳಗಳು ಇವೆ. ಸುಲ್ತಾನ್‌ಬತ್ತೇರಿ, ಮಂಗಳಾದೇವಿ ದೇವಸ್ಥಾನ, ವೆನಾÉಕ್‌ ಆಸ್ಪತ್ರೆ, ಕದ್ರಿ ದೇವಸ್ಥಾನ, ಈದ್ಗಾ ಮಸೀದಿ, ಸೈಂಟ್‌ ಅಲೋಶಿಯಸ್‌ ಚಾಪೆಲ್‌, ರೊಸಾರಿಯೊ ಚರ್ಚ್‌ ಮುಂತಾದ ಇತಿಹಾಸ ಪ್ರಸಿದ್ಧ ಹಲವು ಕಟ್ಟಡಗಳಿದ್ದು, ಇವುಗಳನ್ನು ಮುಂದಿನ ಪೀಳಿಗೆಗೆ ಗುರುತಿಸಿ ಸಂರಕ್ಷಿಸುವ ಅಗತ್ಯತೆ ಇದೆ. ಜತೆಗೆ 100 ವರ್ಷಗಳಿಗಿಂತಲೂ ಹಳೆಯದಾಗಿರುವ ಮಂಗಳೂರಿನ ಇತಿಹಾಸ, ಪರಂಪರೆ ಬಿಂಬಿಸುವ ಕಟ್ಟಡ, ಪ್ರದೇಶ ಗುರುತಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಅಭಿಯಾನ ಕೈಗೊಳ್ಳಲಾಗಿದೆ ಎಂದರು.

rai_univrty_photo_2

ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮಾತನಾಡಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ 2014ರ ಫೆ. 22ರಂದು ಸಾಮಾನ್ಯ ಸಭೆಯಲ್ಲಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಗುರುತಿಸಿ, ಸಂರಕ್ಷಿಸಿ ಹಾಗೂ ಇಂತಹ ಕಟ್ಟಡಗಳ/ಸ್ಮಾರಕಗಳ ಮುಂದೆ ಮಾಹಿತಿ ಫಲಕ ಅಳವಡಿಸುವ ಬಗ್ಗೆ ನಿರ್ಣಯ ಮಾಡಲಾಗಿತ್ತು. ಸಾರ್ವಜನಿಕರಿಂದ ಈ ಸಂಬಂಧ ಮಾಹಿತಿ ಒದಗಿಸುವಂತೆ ದಿನಪತ್ರಿಕೆಗಳ ಮೂಲಕ ಕೋರಲಾಗಿತ್ತು. ಇದರ ಆಧಾರದಲ್ಲಿ ಮಾಹಿತಿ ಫಲಕ ಅಳವಡಿಸಲಾಗಿದೆ ಎಂದರು.

ಹಳೆ ಕಾಲದ ಗುತ್ತಿನ ಮನೆ, ಧಾರ್ಮಿಕ ಕೇಂದ್ರ, ಸಾಂಸ್ಕೃತಿಕ ಕೇಂದ್ರ, ಪಾರ್ಕ್‌ಸಹಿತ ಶತಮಾನ ಕಂಡ ಕಟ್ಟಡ ಹಾಗೂ ಸ್ಥಳಗಳನ್ನು ಅಭಿಯಾನದಲ್ಲಿ ಗುರುತಿಸಿ ಅವುಗಳನ್ನು ಪ್ರವಾಸಿ ತಾಣವಾಗಿ ರೂಪುಗೊಳಿಸುವ ಉದ್ದೇಶವಾಗಿದ್ದು, ಇದು ನಿರಂತರ ದ. ಕ. ಜಿಲ್ಲೆಯಲ್ಲಿ ಮುಂದುವರಿಯಲಿದೆ. ಶನಿವಾರ ನಗರದ ಪ್ರಮುಖ 7 ಪಾರಂಪರಿಕ ಕಟ್ಟಡಗಳಿಗೆ ಮಾಹಿತಿ ಫಲಕ ಅಳವಡಿಸಿ ಉದ್ಘಾಟಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಯ ಕಾಲೇಜು, ಹಳೇ ಜಿಲ್ಲಾಧಿಕಾರಿ ಕಚೇರಿ, ವೆನ್ಲಾಕ್ ಆಸ್ಪತ್ರೆ, ಲೇಡಿಗೋಷನ್‌ ಆಸ್ಪತ್ರೆ, ಸುಲ್ತಾನ್‌ ಬತ್ತೇರಿ, ಜಿಲ್ಲಾ ಕಲೆಕ್ಟರ್‌ ನಿವಾಸ, ಸೀಮಂತಿ ಬಾಯಿ ಸ್ಮಾರಕ ವಸ್ತು ಸಂಗ್ರಹಾಲಯಗಳ ಮಾಹಿತಿ ಫಲಕಗಳಿಗೆ ಸಚಿವ ರಮಾನಾಥ ರೈ ಚಾಲನೆ ನೀಡಿದರು.

ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಮನಪಾ ಉಪಮೇಯರ್‌ ಪುರುಷೋತ್ತಮ ಚಿತ್ರಾಪುರ, ಮೂಡ ಆಯುಕ್ತ ನಝೀರ್‌ ಮೊದಲಾದವರು ಉಪಸ್ಥಿತರಿದ್ದರು.

Write A Comment