ಕನ್ನಡ ವಾರ್ತೆಗಳು

ಬಂಟ್ವಾಳ ತಾಲೂಕಿನಲ್ಲಿ ನೂರಕ್ಕೂ ಅಧಿಕ ಡೆಂಗ್ಯೂಜ್ವರ ಪ್ರಕರಣ ಪತ್ತೆ

Pinterest LinkedIn Tumblr

bntwl_dengu_fevar

ಪುಂಜಾಲಕಟ್ಟೆ, ಜೂನ್.15 : ಮಾರಕ ಡೆಂಗ್ಯೂ ಜ್ವರವು ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಜನರನ್ನು ವ್ಯಾಪಕವಾಗಿ ಆವರಿಸಿ ಕೊಂಡಿದ್ದು, ಈ ಬೆಳವಣಿಗೆ ಆತಂಕ ಮೂಡಿಸಿದೆ. ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕಿನ ಅರಳ, ಕುಟ್ಟಿಕ್ಕಳ, ಪಂಜಿಕಲ್ಲು, ಸೊರ್ನಾಡು, ಸಿದ್ದಕಟ್ಟೆ, ಕರ್ಪೆ, ಸಂಗಬೆಟ್ಟು, ರಾಯಿ, ಅಪ್ಪಯ್ಯ ಹಿತ್ಲು ಎಂಬಲ್ಲಿ ಡೆಂಗ್ಯೂ ಜ್ವರ ಬಾಧಿಸಿದೆ. ಈ ಪೈಕಿ ಅರಳ ಗ್ರಾಮದ ಅಪ್ಪಯ್ಯ ಹಿತ್ಲುವಿನಲ್ಲಿ ಸುಮಾರು 15 ಮನೆಗಳಲ್ಲಿ ಡೆಂಗ್ಯೂ ಜ್ವರ ಬಾಧಿಸಿದೆ.

ಆರೋಗ್ಯ ಇಲಾಖಾ ಮೂಲಗಳು ನೀಡುವ ಮಾಹಿತಿಯಂತೆ ಈವರೆಗೆ 12 ಪ್ರಕರಣಗಳು ಮಾತ್ರ ಧೃಡಪಟ್ಟಿದೆ. ಆದರೆ, ಖಾಸಗಿ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ನೂರಾರು ಮಂದಿ ಡೆಂಗ್ಯೂನಿಂದ ತತ್ತರಿಸಿದ್ದಾರೆ.

ಬಹಳಷ್ಟು ಮಂದಿಗೆ ಈ ಜ್ವರದ ಬಗ್ಗೆ ಅರಿವಿಲ್ಲ. ಹೀಗಾಗಿ ಸೂಕ್ತ ಮಾರ್ಗದರ್ಶನವಿಲ್ಲದೆ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಕೆಲವರು ಆರಂಭದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರೆ, ಕೆಲವರು ಮಂಗಳೂರು ಹಾಗೂ ಬಿ.ಸಿ. ರೋಡ್‍ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಅರಳ ಗ್ರಾಮ ಪಂಚಾಯತ್‍ನ ನೂತನ ಸದಸ್ಯೆಯೋರ್ವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಬಿ.ಸಿ. ರೋಡ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡೆಂಗ್ಯೂ ಅರಿವಿಲ್ಲದವರು ಕೇವಲ ಜ್ವರವೆಂದು ನಿರ್ಲಕ್ಷ್ಯ ಮಾಡಿ ಕೊನೆಗೆ ಅಪಾಯಕಾರಿ ಸ್ಥಿತಿಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದು ಕೂಡಾ ತಿಳಿದುಬಂದಿದೆ. ಆರೋಗ್ಯ ಇಲಾಖೆ ತಕ್ಷಣವೇ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಮಾತ್ರವಲ್ಲದೇ, ಸೊಳ್ಳೆ ನಿರ್ಮೂಲನಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಂಟ್ವಾಳ ತಾಲೂಕಿನ ಹಲವೆಡೆಗಳಲ್ಲಿ ಶನಿವಾರದವರೆಗೆ ಒಟ್ಟು 12 ಪ್ರಕರಣಗಳು ಪತ್ತೆಯಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಎಲ್ಲಾ ಕಡೆ ಡೆಂಗ್ಯೂ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ್, ಬಂಟ್ವಾಳ ಹೇಳಿದ್ದಾರೆ.

Write A Comment