ಕನ್ನಡ ವಾರ್ತೆಗಳು

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದಿಂದ ವಿಧ್ಯಾರ್ಥಿಗಳಿಗೆ ಕಲಿಕೋಪಕರಣಗಳ ಕೊಡುಗೆ

Pinterest LinkedIn Tumblr

okkana_schlr_ship

ಕನ್ಯಾನ,ಜೂನ್.15  : “ಕಲಿಕೆ ಎನ್ನುವುದು ಏಕಕಾಲದಲ್ಲಿ ಸಾಧ್ಯವಾಗುವ ಪ್ರಕ್ರಿಯೆಯಲ್ಲ. ಅದು ನಿರಂತರವಾಗಿ ನಡೆಯಬೇಕಾದ ತಪಸ್ಸು. ಹಂತಹಂತವಾಗಿ ವಿವಿಧ ಮೆಟ್ಟಿಲುಗಳನ್ನು ಏರಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು. ಇದಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಮತ್ತು ಸಾಮಗ್ರಿಗಳನ್ನು ಹಿರಿಯರು ಏರ್ಪಡಿಸಿಕೊಟ್ಟು ವಿದ್ಯಾರ್ಥಿಗಳಿಗೆ ಕಲಿಕೆ ಸುಗಮವಾಗುವಂತೆ ನೋಡಿಕೊಳ್ಳಬೇಕು. ಈ ಮೂಲಕ ಸಮಾಜದ ಬೆಳಕಿನಲ್ಲಿ ಬೆಳೆಯುವ ವಿದ್ಯಾರ್ಥಿಗಳು ಹೆಚ್ಚು ಪ್ರಗತಿ ಹೊಂದಬೇಕು ಮತ್ತು ಸಹಕರಿಸಿದ ಸಂಸ್ಥೆಗಳಿಗೆ ಕೀರ್ತಿ ತರಬೇಕು” ಎಂದು ವೇದಮೂರ್ತಿ ಅನಂತನಾರಾಯಣ ಭಟ್ಟ ಪರಕ್ಕಜೆ ಅಭಿಪ್ರಾಯಪಟ್ಟರು. ಕನ್ಯಾನದ ಭಾರತ ಸೇವಾಶ್ರಮದಲ್ಲಿ ಹವ್ಯಕ ಭಾಷೆಯ ಬೆಳವಣಿಗೆಗಾಗಿ ಅಂತರ್ಜಾಲದಲ್ಲಿ ರೂಪುಗೊಂಡಿರುವ ಒಪ್ಪಣ್ಣ ಡಾಟ್ ಕಾಮ್, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ವಿದ್ಯಾರ್ಥಿಗಳಿಗಾಗಿ ಕೊಡಮಾಡಿದ ಕಲಿಕೋಪಕರಣಗಳ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಅಪೇಕ್ಷಿತರಿಗೆ ಸೂರು ನೀಡುವ, ಅವರ ಜೀವನಕ್ಕೆ ಆಸರೆ ನೀಡುವ ಕನ್ಯಾನದ ಈ ಭಾರತ ಸೇವಾಶ್ರಮವು ಸಮಾಜದ ಎಲ್ಲ ವರ್ಗದ ಜನತೆಗೆ ಬದುಕಿನ ಪಾಠವನ್ನು ಹೇಳಿಕೊಡುತ್ತದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸೇವಾಶ್ರಮದ ಕಾರ್ಯಚಟುವಟಿಕೆಗಳು ಸಹಕಾರಿಯಾಗುತ್ತಿವೆ. ಇಲ್ಲಿ ಭವಿಷ್ಯವನ್ನು ರೂಪಿಸಿಕೊಂಡ ಅನೇಕ ಮಂದಿ ಉತ್ತಮವಾಗಿ ನಾಡಿನೆಲ್ಲೆಡೆ ಬೆಳಗುತ್ತಿದ್ದಾರೆ. ಇಂತಹ ಕೇಂದ್ರದ ಮೂಲಕ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ತನ್ನ ಸಮಾಜ ಮುಖಿ ಕಾರ್ಯಗಳನ್ನು ವಿಸ್ತರಿಸಿರುವುದು ಸಂತಸದ ವಿಚಾರ” ಎಂದು ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಜತ್ತಿ ಸುಬ್ರಾಯ ಭಟ್ಟರು ಅಭಿಪ್ರಾಯಪಟ್ಟರು.

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಅಧ್ಯಕ್ಷ ಶ್ರೀಕೃಷ್ಣ ಶರ್ಮ ಹಳೆಮನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ಯಾನದ ಬೆನಕ ಸ್ಟುಡಿಯೋದ ಮಾಲಕ ಕುಮಾರಸ್ವಾಮಿ, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ಟ ಗಬ್ಲಡ್ಕ, ಕೃಷ್ಣಕಿಶೋರ್ ಏನಂಕೂಡ್ಳು ಉಪಸ್ಥಿತರಿದ್ದರು. ಸೇವಾಶ್ರಮದ ಈಶ್ವರ ಭಟ್ಟರು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿನಿ ವರಲಕ್ಷ್ಮಿ ವಂದಿಸಿದರು.

Write A Comment