ಮಂಗಳೂರು, ಜೂ.15: ಮಂಗಳೂರಿನ ಪಿಲಿಕುಲದಲ್ಲಿ ಪ್ರಥಮ ಬಾರಿಗೆ ಜಿಲ್ಲಾಡಳಿತದ ವತಿಯಿಂದ ರವಿವಾರ ‘ಮಳೆಹಬ್ಬ” ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಈಗಾಗಲೇ ಮತ್ಯೋತ್ಸವ ಮತ್ತು ವಸಂತೋತ್ಸವ ಆಚರಿಸಿ ಸಂಭ್ರಮಿಸಿದ್ದ ಜಿಲ್ಲಾಡಳಿತ ವಿವಿಧ ಇಲಾಖೆಗಳ ಸಹಯೋಗದಲ್ಲಿ ರವಿವಾರ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಭಾರೀ ಅಥವಾ ತುಂತುರು ಮಳೆ ಸುರಿಯದಿದ್ದರೂ ಕೂಡ ಮಳೆಗಾಲದ ವಿಶೇಷತೆಗಳೊಂದಿಗೆ ಪ್ರಪ್ರಥಮ ಬಾರಿಗೆ ‘ಮಳೆಹಬ್ಬ’ ಆಚರಿಸಿತು.
ತೆಂಗಿನಗರಿಯ ತಟ್ಟಿ ಹೆಣೆಯುವ ಮೂಲಕ ಉದ್ಘಾಟನೆ: ರಂಗ ಕಲಾವಿದ ನವೀನ್ ಡಿ. ಪಡೀಲ್ ತೆಂಗಿನ ಗರಿ (ಮಡಲಿನ ತಟ್ಟಿ) ಹೆಣೆಯುವ ಮೂಲಕ ‘ಮಳೆಹಬ್ಬ’ ಉದ್ಘಾಟಿಸಿದರು. ಬಳಿಕ ಹಾಸ್ಯಶೈಲಿಯಲ್ಲೇ ಮಾತು ಆರಂಭಿಸಿದ ಅವರು, ಸರ್ವಧರ್ಮಗಳ ನೆಲೆಯ ಬೀಡಾದ ತುಳುನಾಡಿನ ಗದ್ದೆಗಳು ಬಿಲ್ಡರ್‌ಗಳ ಪಾಲಾಗುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಧರ್ಮೀಯರು ಒಗ್ಗೂಡಿ ಸಂಭ್ರಮಿಸುವ ವಾತಾವರಣಕ್ಕೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸಾಥ್ ನೀಡಿರುವುದು ಶ್ಲಾಘನಾರ್ಹ. ಮುಂದಿನ ದಿನಗಳಲ್ಲಿ ಸಿಡಿಲು ಹಬ್ಬ, ಮಿಂಚು ಹಬ್ಬವೂ ಇಲ್ಲಿ ಮೇಳೈಸಲಿ ಎಂದರು.
ಅತಿಥಿಗಳನ್ನು ‘ಓ ಬೇಲೆ’ ಹೇಳುವ ಮತ್ತು ಶುಂಠಿಯ ಕಷಾಯ ನೀಡುವ ಮೂಲಕ ಸ್ವಾಗತಿಸಲಾಯಿತು. ಜತೆಗೆ ಪುಲ್ಕೊಟೆ (ಹುಣಸೆಬೀಜ), ಸಾಂತನಿ (ಬೇಯಿಸಿ ಒಣಗಿಸಿದ ಹಲಸಿನಬೀಜ) ಹಂಚಲಾಯಿತು.
ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪಿಲಿಕುಳ ನಿಸರ್ಗಧಾಮದ ಯೋಜನಾ ನಿರ್ದೇಶಕ ಎಸ್.ಎ.ಪ್ರಭಾಕರ ಶರ್ಮ, ಪಿಲಿಕುಲ ನಿಸರ್ಗಧಾಮದ ವಿಜ್ಞಾನ ಕೇಂದ್ರದ ಡಾ.ಕೆ.ವಿ.ರಾವ್, ಪಣಂಬೂರು ಬೀಚ್ ಅಭಿವೃದ್ಧಿಯ ಯತೀಶ್ ಬೈಕಂಪಾಡಿ ಪಿಲಿಕುಳ ವನ್ಯಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಪಿಲಿಕುಳ ಸೊಸೈಟಿಯ ಸದಸ್ಯ ಎನ್. ಜಿ.ಮೋಹನ್, ಮುಡಾ ಆಯುಕ್ತ ಮುಹಮ್ಮದ್ ನಝೀರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಕೊಂಕಣಿ ಅಕಾಡಮಿಯ ಅಧ್ಯಕ್ಷ ರಿಚರ್ಡ್ ಕ್ಯಾಸ್ಟಲಿನೊ, ಸಾಹಿತಿ ಡುಂಡಿರಾಜ್, ಕಾರ್ಪೊರೇಶನ್ ಬ್ಯಾಂಕ್‌ನ ಗಣೇಶ್, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಮತ್ತಿತರರು ಉಪಸ್ಥಿತರಿದ್ದರು.
ತುಂತುರು ಮಳೆ ಸುರಿಯಬೇಕು. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರೆನ್ನದೇ ಸರ್ವರೂ ಆ ಮಳೆಯಲ್ಲಿ ಮಿಂದು ಖುಷಿಪಡಬೇಕು, ಒಂದೆಡೆ ಕುಳಿತು ಪರಸ್ಪರ ಹರಟೆ ಹೊಡೆಯಬೇಕು, ಮಳೆಗಾಲದ ತಿಂಡಿ ತಿನಿಸುಗಳನ್ನು ತಿಂದು ಬಾಯಿ ಚಪ್ಪರಿಸಬೇಕು, ಕಾಗದದ ದೋಣಿ ಬಿಡಬೇಕು, ಅಪ್ಪಟ ಗ್ರಾಮೀಣ ಸೊಡಗಿನ ಆಟದಲ್ಲಿ ಮೈ ಮರೆಯುವ ಮೂಲಕ ತುಳುನಾಡಿನ ಮಳೆಗಾಲವನ್ನು ಮತ್ತೆ ನೆನಪಿಸುವ ವಾತಾವರಣ ಸೃಷ್ಟಿಯಾಗಬೇಕು. ಇದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂರ ಕನಸು. ಆದರೆ ಆ ಕನಸಿಗೆ ಪ್ರಕೃತಿ ಸ್ಪಂದಿಸಲಿಲ್ಲ. ಪಿಲಿಕುಳದಲ್ಲಿ ರವಿವಾರ ಮುಂಜಾನೆಯಿಂದಲೇ ಮೋಡ ಮುಸುಕಿದ ವಾತಾವರಣವಿದ್ದರೂ ಮಳೆ ಸುರಿಯಲೇ ಇಲ್ಲ. ಅಪರಾಹ್ನದ ವೇಳೆಗೆ ಸ್ವಲ್ಪ ಪ್ರಮಾಣದಲ್ಲಷ್ಟೆ ಮಳೆಯಾಯಿತು.
ಅಂಬ್ರೆಲ್ಲಾ ಇಲ್ಯೂಶನ್ ಮ್ಯಾಜಿಕ್ :
ಮಳೆಹಬ್ಬದ ವಿಶೇಷ ಆಕರ್ಷಣೆಯಾಗಿ ಅದ್ಭುತ ಜಾದೂ ‘ಛತ್ರಿ ಮಾಯ ಮ್ಯಾಜಿಕ್’ (ಅಂಬ್ರೆಲ್ಲಾ ಇಲ್ಯೂಶನ್ ಮ್ಯಾಜಿಕ್) ಪ್ರದರ್ಶನಗೊಂಡಿತು. ಅಲ್ಲದೆ ಛತ್ರಿಗಳ ಆಲಂಕಾರಿಕಾ ಸ್ಪರ್ಧೆ ನಡೆಸಲಾಯಿತು. ಹಳೆಯ ಹಾಗೂ ವಿನೂತನ ಮಾದರಿಯ ಛತ್ರಿಗಳ ಪ್ರದರ್ಶನ ಕೂಡ ಕಂಡು ಬಂತು. ಸ್ವತಃ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ವಿಶೇಷ ಆಕರ್ಷಣೆಯ ಛತ್ರಿಯನ್ನು ತಂದು ಗಮನ ಸೆಳೆದರು.
ಕೊಡೆಗಳ ಮೇಲೆ ಜಾನಪದ ಕಲೆ ಬಿಡಿಸುವುದು ಮತ್ತು ಸ್ಥಳದಲ್ಲೇ ಕೊಡೆಗಳ ಮೇಲೆ ಬಣ್ಣ ಹಚ್ಚುವುದು ಹಾಗೂ ಅದರ ಪ್ರದರ್ಶನ-ಮಾರಾಟವಲ್ಲದೆ ಆಕರ್ಷಣೀಯ ಕೊಡೆಗಳಿಗೆ ಬಹುಮಾನವನ್ನೂ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಳೆಗಾಲಕ್ಕೆ ಸಂಬಂಧಿಸಿದ ವಿಶೇಷ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿತ್ತು. ಖ್ಯಾತ ಛಾಯಾಚಿತ್ರಗ್ರಾಹಕ ಕೇಶವ ವಿಟ್ಲ ಪ್ರದರ್ಶನ ಉದ್ಘಾಟಿಸಿದರು. ಡಾ.ಡಿ.ವಿರೇಂದ್ರ ಹೆಗ್ಗಡೆ, ಕೇಶವ ವಿಟ್ಲ, ಸುಧಾಕರ ಎರ್ಮಾಳ್, ಅಪುಲ್ ಇರಾ, ಜಿ.ಕೆ.ಹೆಗಡೆ, ಗೋವಿಂದರಾಜ ಜವಳಿ, ಭಾಸ್ಕರ ಅಮ್ಟೂರ್‌ರ ಛಾಯಾ ಚಿತ್ರಗಳು ಪ್ರದರ್ಶಿಸಲ್ಪಟ್ಟಿತು.
ಸಾಂಪ್ರದಾಯಿಕ ಹಾಡುಗಳು, ಓ ಬೇಲೆ, ವರ್ಷ ಋತುಗಾನ ಸಂಭ್ರಮ, ಜಾನಪದ ನೃತ್ಯ, ಮದರಂಗಿ, ಪಾರಂಪರಿಕ ಆಟಗಳು, ತೆಂಗಿನ ಗರಿ ಹೆಣೆಯುವುದು, ಲಗೋರಿ, ಕುಟ್ಟಿ ದೊಣ್ಣೆ, ಜುಬಿಲಿ ಆಟ, ಮಳೆಗಾಲದ ಹಲಸಿನ ಹಪ್ಪಳ, ಸ್ಥಳದಲ್ಲೇ ತಯಾರಿಸುವ ರುಚಿಕರ ಖಾದ್ಯಗಳು, ಪತ್ರೊಡೆ, ತಜಂಕ್ ವಡೆ, ಹಲಸಿನ ದೋಸೆ, ಕೊಟ್ಟಿಗೆ, ರಸಾಯನ, ಹಲಸಿನ ಪಾಯಸ ಹಾಗೂ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ತಾಜಾ ಮೀನುಗಳ ಮಾರಾಟ ಹಾಗೂ ಸ್ಥಳೀಯ ಮಾಂಸಾಹಾರ ಖಾದ್ಯಗಳು, ಐಸ್‌ಕ್ರೀಂ, ತಿಂಡಿ ತಿನಿಸುಗಳು, ಮಕ್ಕಳ ಆಟಿಕೆಗಳಲ್ಲದೆ ಮಳೆಯ ಕುತೂಹಲಕಾರಿ ಅಂಕಿ ಅಂಶಗಳು, ಮಳೆ ಕೊಯ್ಲು, ಜಲ ಸಂಗ್ರಹಣಾ ಮಾದರಿಗಳು, ಆ್ಯಸಿಡ್ ರೈನ್, ಕ್ಲೌಡ್‌ಬರ್ಸ್ಟ್ ಮಿಂಚು ಪ್ರತಿಬಂಧಕ ಇತ್ಯಾದಿಗಳ ಬಗ್ಗೆ ಸಚಿತ್ರ ಮಾಹಿತಿ ನೀಡಲಾಯಿತು. ಅದಲ್ಲದೆ ತಾರಸಿ ತೋಟದ ಬಗ್ಗೆ ಮಾಹಿತಿ, ಹಾಪ್‌ಕಾಮ್ಸ್ ನಿಂದ ವಿವಿಧ ಹಣ್ಣುಗಳ ಪ್ರದರ್ಶನ- ಮಾರಾಟ, ಸಾವಯವ ಸಂತೆ, ಸ್ವಾವಲಂಬಿ ಮತ್ತು ಸಿರಿ ಉತ್ಪಾದ ನೆಗಳ ಪ್ರದರ್ಶನ- ಮಾರಾಟ ವ್ಯವಸ್ಥೆ ಇತ್ತು.
ಕಾಗದದ ದೋಣಿಯಾಟ:
ಮಳೆಗಾಲದ ಸಂದರ್ಭ ಹಿಂದೆಲ್ಲಾ ಮಕ್ಕಳು ಕಾಗದದ ದೋಣಿ ರಚಿಸಿ ಅದನ್ನು ಮಳೆ ನೀರಿನಲ್ಲಿ ತೇಲಿ ಬಿಡುವ ಮೂಲಕ ಸಂಭ್ರಮಿಸುತ್ತಿದ್ದರು. ಆ ನೆನಪುಗಳನ್ನು ತಾಜಾಗೊಳಿಸುವ ಸಲುವಾಗಿ ರವಿವಾರ ಮಕ್ಕಳಿ ಗಾಗಿ ಮಳೆ ನೀರಿನ ಕೊಳದಲ್ಲಿ ಕಾಗದದ ದೋಣಿ ರಚಿಸಿ ಅದನ್ನು ತೇಲಿಸುವ ಅವಕಾಶ ಕಲ್ಪಿಸಲಾಗಿತ್ತು.
ಮಳೆಹಬ್ಬದಲ್ಲಿ ಚೆಂಡು-ವಾದ್ಯದೊಂದಿಗೆ ಆಕರ್ಷಕ ಕೊಡೆಗಳ ಮೆರವಣಿಗೆ, ಮಂಗಳೂರಿನ ಝೇಂಕಾರ ಗಾನ ಕಲಾಕೇಂದ್ರದಿಂದ ಜಾನಪದ ಹಾಡುಗಳು, ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಮಿಮಿಕ್ರಿ, ಕೋಲಾಟ ಗಮನ ಸೆಳೆದವು.
ತುಳುನಾಡಿನಲ್ಲಿ ಮಳೆಗಾಲದಲ್ಲಿ ಹಸಿವು ಜಾಸ್ತಿ. ಹಾಗಾಗಿ ಪತ್ರೊಡೆ, ಜೋಳದ ರೊಟ್ಟಿ, ಗಂಜಿಊಟ, ಹಲಸಿನ ಹಣ್ಣಿನಿಂದ ಕರಿದ ತಿಂಡಿ, ಅಜ್ಜಿ ಮನೆಯ ರುಚಿಯನ್ನು ಸವಿಯಬಹುದಾದ ಮರುವಾಯಿ ಸುಕ್ಕ, ಮರುವಾಯಿ ಪುಂಡಿ, ಕೋಳಿ ಸುಕ್ಕ, ಚಿಕನ್ ಲಿವರ್, ಕೋಳಿ ಪುಳಿ ಮುಂಚಿ, ಕೋಳಿರೊಟ್ಟಿ, ಬಗೆಬಗೆಯ ಚಟ್ನಿ, ತಿಮರೆ, ಒಂದೆಲಗ, ಹುರುಳಿ, ಒಣಸಿಗಡಿ, ಉಪ್ಪಿನಕಾಯಿ, ದೊಸೆ, ಆಪ, ಇಡ್ಲಿ ಹೀಗೆ ನಾಲಗೆ ರುಚಿಸುವಷ್ಟು ತಿಂಡಿ-ತಿನಿಸುಗಳು ಜನರ ಬಾಯಲ್ಲಿ ನೀರೂರಿಸಿತು.
ಅರಣ್ಯ ಇಲಾಖೆಯ ನೆಲ್ಲಿ, ಅಂಟುವಾಳ, ಹಳದಿ ಸಂಪಿಗೆ, ಸಾಗುವಾನಿ, ಕಹಿಬೇವು, ರೆಂಜೆ, ಬಕುಳ, ನೇರಳ, ಹೊಳೆದಾಸವಾಳ, ಮರುಗಲು, ಪುನರ್ಪುಲಿ(ಕೋಕಂ), ಬಿಲ್ವ, ನಾಡು ಬಾದಾಮಿಯ ಗಿಡಗಳ ಮಾರಾಟ-ಪ್ರದರ್ಶನ ಕೂಡ ಆಕರ್ಷಿಸಿತು.
ಮಳೆಯ ಜತೆ ಕೃಷಿಯು ನಿಕಟ ಸಂಬಂಧ ಹೊಂದಿರುವುದರಿಂದ ಮಳೆ ಹಬ್ಬದಲ್ಲಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ-ಮಾರಾಟ, ಮಳೆ ರಕ್ಷಣೆಗಾಗಿ ಬಳಸುತ್ತಿದ್ದ ಹಳೆಯ ಬೇಸಾಯ ಪದ್ಧತಿಯ ಉಪಕರಣಗಳ ಪ್ರದರ್ಶನ (ಕೊರಂಬು, ಪನೋಳಿ, ಮುಟ್ಟಾಳೆ, ಕೊಂಬಾರ್, ಕಳಸೆ, ನೊಗ, ನೇಗಿಲು, ಹಲಗೆ, ಕೋಣ, ಎತ್ತಿನ ಮೂಗುದಾರ, ಎತ್ತಿನಗಾಡಿ), ಮಡಲಿನ ತಟ್ಟಿ ಹೆಣೆಯುವ ಸ್ಪರ್ಧೆ, ಸಾವಯವ ಸ್ವಾವಲಂಬಿ ಸಂತೆಯ ಮೂಲಕ ಹಲಸಿನ ಹಪ್ಪಳ, ಗೆಣಸಿನ ಹಪ್ಪಳ, ಹಲಸಿನ ಬೀಜದ ಸಾಂತನಿ ಮೊದಲಾದ ಮಳೆಗಾಲದ ಪಾರಂಪರಿಕ ತಿಂಡಿಗಳ ಮಾರಾಟ, ಗಿಡ, ಫಲಪುಷ್ಪ ಬೀಜಗಳ ಪ್ರದರ್ಶನ- ಮಾರಾಟ, ಅರಣ್ಯ ಇಲಾಖೆಯಿಂದ ವಿವಿಧ ಮರಗಿಡ, ಸಸಿಗಳ ಪ್ರದರ್ಶನ- ಮಾರಾಟ, ಪಿಲಿಕುಳದ ಆಯ್ದ ಸ್ಥಳ ಗಳಲ್ಲಿ ಪಶ್ಚಿಮ ಘಟ್ಟದ ವಿವಿಧ ಪ್ರಭೇದಗಳ ಸಸ್ಯ ಸಂಕುಲಗಳನ್ನು ನೆಡುವ, ವಿವಿಧ ಕಲಾತಂಡಗಳಿಂದ ಮಳೆಗಾಲದ ಕಲಾ ವೈಭವ, ಮಳೆ ಕೊಯ್ಲು, ಜಲ ಸಂರಕ್ಷಣೆ ಪ್ರಾತ್ಯಕ್ಷಿಕೆಗಳು ಕಂಡು ಬಂತು.
ಪಿಲಿಕುಳದಲ್ಲಿ ನಿಸರ್ಗಧಾಮ ಸ್ಥಾಪಿಸಿ 20 ವರ್ಷಗಳಾದರೂ ಇನ್ನೂ ಜಿಲ್ಲೆಯ ಜನತೆ ಇದರತ್ತ ಸುಳಿಯುತ್ತಿಲ್ಲ. ಅದಕ್ಕೆ ಮಾಹಿತಿಯ ಕೊರತೆ ಕಾರಣವೋ ಅಥವಾ ನಿರ್ಲಕ್ಷವೋ ಎಂದು ಗೊತ್ತಾಗುತ್ತಿಲ್ಲ. ಅಂತೂ ಇದೀಗ ಜಿಲ್ಲಾಡಳಿತ ಇದನ್ನು ಪ್ರವಾಸೋದ್ಯಮ ಕೇಂದ್ರವಾಗಿಸಲು ಬಯಸಿದೆ. ಈಗಾಗಲೇ 3 ಹಬ್ಬಗಳನ್ನು ಇಲ್ಲಿ ಆಚರಿಸಲಾಗಿದೆ. ಜುಲೈಯಲ್ಲಿ ‘ಆಟಿಡೊಂಜಿ ದಿನ’ ಆಚರಿಸಲಾಗುವುದು. ಅಷ್ಟೇ ಅಲ್ಲ ತಿಂಗಳಿಗೊಂದು ಹಬ್ಬದಂತೆ ಇಲ್ಲಿ ವರ್ಷಪೂರ್ತಿ ವಿವಿಧ ಹಬ್ಬಗಳ ಆಚರಣೆಗೆ ಚಿಂತನೆ ನಡೆಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.














