ಕನ್ನಡ ವಾರ್ತೆಗಳು

ಜೂ.14: ಪಿಲಿಕುಳದಲ್ಲಿ ಮಳೆಹಬ್ಬ | ಅಂಬ್ರೆಲ್ಲಾ ಇಲ್ಯೂಶನ್ ಮ್ಯಾಜಿಕ್ ವಿಶೇಷ ಆಕರ್ಷಣೆ : ಜಿಲ್ಲಾಧಿಕಾರಿ

Pinterest LinkedIn Tumblr

Dc_Ibrahim_Pics

ಮಂಗಳೂರು, ಜೂ.12: ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಜೂ. 14ರಂದು ಹಮ್ಮಿಕೊಳ್ಳಲಾಗಿರುವ ಮಳೆಹಬ್ಬದ ವಿಶೇಷ ಆಕರ್ಷಣೆಯಾಗಿ ಅದ್ಭುತ ಜಾದೂ ‘ಛತ್ರಿ ಮಾಯಾ ಮ್ಯಾಜಿಕ್’ (ಅಂಬ್ರೆಲ್ಲಾ ಇಲ್ಯೂಶನ್ ಮ್ಯಾಜಿಕ್) ಪ್ರದರ್ಶನಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.

ಮಳೆಹಬ್ಬದ ಕುರಿತು ಗುರುವಾರ ತಮ್ಮ ಕಚೇರಿಯಲ್ಲಿ  ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಳಗ್ಗೆ 10.30ಕ್ಕೆ ಔಪಚಾರಿಕ ಉದ್ಘಾ ಟನೆಯ ಬಳಿಕ ಈ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು. ಪಾರಂಪರಿಕ ಕೊಡೆಗಳ ಮತ್ತು ಆಧುನಿಕ ಕೊಡೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊಡೆಗಳ ಮೇಲೆ ಜಾನಪದ ಕಲೆ ಬಿಡಿಸುವುದು, ಸ್ಥಳದಲ್ಲೇ ಕೊಡೆಗಳ ಮೇಲೆ ಪೇಂಟಿಂಗ್, ಪ್ರದರ್ಶನವಿದ್ದು, ಮಾರಾಟ ಮತ್ತು ಆಕರ್ಷಣೀಯ ಕೊಡೆಗಳಿಗೆ ಬಹುಮಾನ ನೀಡಲಾಗುವುದು.

ಆಸಕ್ತರು ಜೂ.13ರೊಳಗೆ ಜಗನ್ನಾಥ್ ಅವರ ದೂ.ಸಂ. 9841245137ಗೆ ಕರೆ ಮಾಡುವ ಮೂಲಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. 14ರಂದು 10 ಗಂಟೆಯೊಳಗೆ ಪ್ರದರ್ಶನಕಾರರು ಹಾಜರಿರಬೇಕು. ಪಿಲಿಕುಳ ಮೃಗಾಲಯದ ಎದುರು ನಡೆಯಲಿಯರುವ ಕಾರ್ಯಕ್ರಮದಲ್ಲಿ ಅಪರೂಪದ ಮಳೆಯ ಛಾಯಾಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಛಾಯಾಚಿತ್ರಗಳನ್ನು ಹಿಂದಿನ ದಿನ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪಿಸಬಹುದು ಎಂದರು.

ಸಾಂಪ್ರದಾಯಿಕ ಹಾಡುಗಳು, ಓಬೇಲೆ, ವರ್ಷ ಋತುಗಾನ ಸಂಭ್ರಮ, ಜಾನಪದ ನೃತ್ಯ, ಮದರಂಗಿ, ಪಾರಂಪರಿಕ ಆಟಗಳು, ತೆಂಗಿನ ಮಡಲು ಹೆಣೆಯುವುದು, ಲಗೋರಿ, ಕುಟ್ಟಿದೊಣ್ಣೆ, ಜುಬಿಲಿ ಆಟ, ಮಳೆಗಾಲದ ಹಲಸಿನ ಹಪ್ಪಳ, ಸಾಂತಣಿ, ಹಲಸಿನ ಬೇಯಿಸಿದ ಬೀಜ, ಸ್ಥಳದಲ್ಲೇ ತಯಾರಿಸುವ ರುಚಿಕರ ಖಾದ್ಯಗಳು, ಪತ್ರೊಡೆ, ತಜಂಕ್ ವಡೆ, ಹಲಸಿನ ದೋಸೆ, ಕೊಟ್ಟಿಗೆ, ರಸಾಯನ, ಹಲಸಿನ ಪಾಯಸ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ತಾಜಾ ಮೀನುಗಳು, ಸ್ಥಳೀಯ ಮಾಂಸಾಹಾರ ಖಾದ್ಯಗಳು, ಐಸ್‌ಕ್ರೀಂ, ಮಳೆಯ ಕುತೂಹಲಕಾರಿ ಅಂಕಿ ಅಂಶಗಳು,

ಮಳೆ ಕೊಯ್ಲು, ಜಲ ಸಂಗ್ರಹಣಾ ಮಾದರಿಗಳು, ಆಸಿಡ್ ರೈನ್, ಕ್ಲೌಡ್‌ಬರ್ಸ್ಟ್ ಮಿಂಚು ಪ್ರತಿಬಂಧಕ ಇತ್ಯಾದಿಗಳ ಬಗ್ಗೆ ಸಚಿತ್ರ ಮಾಹಿತಿ, ಅರಣ್ಯ, ಕೃಷಿ, ತೋಟಗಾರಿಕಾ ಇಲಾಖೆಗಳಿಂದ ವಿವಿಧ ಸಸಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ತಾರಸಿ ತೋಟದ ಬಗ್ಗೆ ಮಾಹಿತಿ, ಹಾಪ್‌ಕಾಮ್ಸ್‌ನಿಂದ ವಿವಿಧ ಹಣ್ಣುಗಳ ಪ್ರದರ್ಶನ, ಮಾರಾಟ, ಸಾವಯವ ಸಂತೆ, ಸ್ವಾವಲಂಬಿ ಮತ್ತು ಸಿರಿ ಉತ್ಪಾದನೆಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಬಗ್ಗೆ ಪಿಲಿಕುಳ ನಿಸರ್ಗಧಾಮದ ಯೋಜನಾ ನಿರ್ದೇಶಕ ಎಸ್.ಎ. ಪ್ರಭಾಕರ ಶರ್ಮಾ ವಿವರ ನೀಡಿದರು.

ಪಾರ್ಕಿಂಗ್ ವ್ಯವಸ್ಥೆ :

ಪಿಲಿಕುಳದ ಅರ್ಬನ್ ಹಾಥ್‌ನ ವಿಶಾಲವಾದ ಮೈದಾನದಲ್ಲಿ ಮಳೆಹಬ್ಬಕ್ಕೆ ಆಗಮಿಸುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸಮೀಪದಲ್ಲಿಯೇ ಪಿಲಿಕುಳ ಮಳೆಹಬ್ಬ ನಡೆಯಲಿದೆ ಎಂದು ಎಸ್.ಎ. ಪ್ರಭಾಕರ ಶರ್ಮಾ ತಿಳಿಸಿದರು.

ಗೋಷ್ಠಿಯಲ್ಲಿ ಪಿಲಿಕುಲ ನಿಸರ್ಗಧಾಮದ ವಿಜ್ಞಾನ ಕೇಂದ್ರದ ಡಾ. ಕೆ.ವಿ. ರಾವ್, ಎನ್.ಜಿ. ಮೋಹನ್, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಕೆ.ವಿ.ರಾವ್, ಪಣಂಬೂರು ಬೀಚ್ ಅಭಿವೃದ್ಧಿಯ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.

Write A Comment