ಕನ್ನಡ ವಾರ್ತೆಗಳು

ಕರಾವಳಿಯಲ್ಲಿ ಧಾರಾಕಾರ ಮಳೆ : ಹಾಡುಹಗಲೇ ಸಿಡಿಲಿನ ಅರ್ಭಟಕ್ಕೆ ಜನತೆ ತತ್ತರ ; ಇಡೀ ಮಂಗಳೂರಿಗೆ ಕೈಕೊಟ್ಟ ವಿದ್ಯುತ್

Pinterest LinkedIn Tumblr

Rain_Problum_City_1

ಕಂಕನಾಡಿಯಲ್ಲಿ ಸಿಡಿಲು ಬಡಿದು ಕಾರ್ಮಿಕ ಮೃತ್ಯು / ಕರಿಂಜೆಯಲ್ಲಿ ಸಿಡಿಲಿನ ಆಘಾತದಿಂದ ನಾಲ್ವರಿಗೆ ಗಾಯ / ದುಗ್ಗಲಡ್ಕ ಪ್ರೌಢಶಾಲೆಗೆ ಸಿಡಿಲು ಬಡಿದು ಅಪಾರ ಹಾನಿ / ಬೆದ್ರಡ್ಕ-ಕಂಬಾರ್ ಸರಕಾರಿ ಶಾಲೆಗೂ ಸಿಡಿಲಾಘಾತ / ಸಿಡಿಲು ಬಡಿದು ಕಾರ್ಮಿಕ ಮೃತ್ಯು

ಮಂಗಳೂರು, ಜೂ.5: ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಡೆ ಗುರುವಾರ ಅಪರಾಹ್ನ ಮುಂಗಾರು ಪೂರ್ವ ಧಾರಾಕಾರ ಗುಡುಗು ಸಹಿತ ಮಳೆ ಸುರಿದಿದೆ.ಮಂಗಳೂರು, ಉಳ್ಳಾಲ, ತೊಕ್ಕೊಟ್ಟು, ಕೊಣಾಜೆ, ತಲಪಾಡಿ, ಸುರತ್ಕಲ್, ಮುಲ್ಕಿ, ಕಿನ್ನಿಗೋಳಿ, ಗುರುಪುರ, ಮೂಡುಬಿದಿರೆ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಸಹಿತ ಜಿಲ್ಲೆಯ ಹಲವು ಕಡೆ ಮಳೆಯಾಗಿದೆ.

ಪುತ್ತೂರು ತಾಲೂಕಿನಾದ್ಯಂತ ಬೆಳಗ್ಗಿನಿಂದಲೇ ಮಳೆ ಆರಂಭವಾಗಿದ್ದು, ಅಪರಾಹ್ನ ಧಾರಾಕಾರವಾಗಿ ಸುರಿದಿದೆ. ಉಪ್ಪಿನಂಗಡಿಯಲ್ಲಿಯೂ ಬಿರುಸಿನ ಮಳೆಯಾಗಿದೆ. ವಿಟ್ಲದಲ್ಲಿ ಗುಡುಗು, ಸಿಡಿಲು, ಗಾಳಿ ಸಹಿತ ವರ್ಷಧಾರೆಯಾಗಿದೆ. ಗುರುವಾರ ಅಪರಾಹ್ನ ಸುಮಾರು 12ರ ವೇಳೆಗೆ ಗುಡುಗು, ಮಿಂಚು ಸಹಿತ ಮಳೆ ಸುರಿಯಿತು. ದಟ್ಟ ಮೋಡವೂ ಆವರಿಸುವುದರೊಂದಿಗೆ ಅಕ್ಷರಶಃ ಮಳೆಗಾಲದ ವಾತಾವರಣ ನಿರ್ಮಿಸಿತು.

ಧಾರಾಕಾರ ಸುರಿದ ಮಳೆಯ ನೀರು ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗಲಾಗದೆ ರಸ್ತೆ ಯಲ್ಲೇ ಹರಿಯಿತು. ಇದರಿಂದ ಜನ ಸಾಮಾನ್ಯರ ಓಡಾಟಕ್ಕೆ ಮಾತ್ರವಲ್ಲ, ವಾಹನ ಸಂಚಾರಕ್ಕೂ ಭಾರೀ ತೊಡಕುಂಟಾಯಿತು. ಅಲ್ಲಲ್ಲಿ ವಿದ್ಯುತ್ ಕೈಕೊಟ್ಟಿತು.

ನಗರದ ಪ್ರಮುಖ ರಸ್ತೆಗಳಲ್ಲದೆ, ತೊಕ್ಕೊಟ್ಟು ಸಹಿತ ತಗ್ಗು ಪ್ರದೇಶದಿಂದ ಕೂಡಿದ ಪ್ರಮುಖ ಜಂಕ್ಷನ್‌ನಲ್ಲಿ ನೀರು ನಿಂತ ದೃಶ್ಯಗಳು ಕಂಡು ಬಂದವು. ನಗರ ಹೊರವಲಯದ ಮರಕಡದ ರಸ್ತೆಯಲ್ಲಿ ಕೃತಕ ನೆರೆ ಉಂಟಾಗಿದೆ. ನಗರದ ಬಂದರು ಮತ್ತಿತರ ಹಲವು ಕಡೆ ಅಂಗಡಿ, ಮನೆಯೊಳಗೆ ನೀರು ನುಗ್ಗಿದೆ.

Rain_Problum_City_2 Rain_Problum_City_3 Rain_Problum_City_4 Rain_Problum_City_5 Rain_Problum_City_6 Rain_Problum_City_7 Rain_Problum_City_8 Rain_Problum_City_9 Rain_Problum_City_10 Rain_Problum_City_11 Rain_Problum_City_12 Rain_Problum_City_13 Rain_Problum_City_14 Rain_Problum_City_15 Rain_Problum_City_16 Rain_Problum_City_17 Rain_Problum_City_19 Rain_Problum_City_20

ಕಾವೂರು ಬಿಜಿಎಸ್ ಶಿಕ್ಷಣ ಸಂಸ್ಥೆಯ ಬಳಿ ಕಾಂಕ್ರಿಟ್ ರಸ್ತೆಯ ಇಕ್ಕಡೆಗಳಲ್ಲಿ ಸಮರ್ಪಕ ಒಳಚರಂಡಿಯಿಲ್ಲದ ಕಾರಣ ಆವರಣ ಗೋಡೆಯೊಂದು ಕುಸಿದು ಬಿದ್ದು, ಹನೀಫ್ ಎಂಬವರ ಮನೆಗೆ ನೀರು ನುಗ್ಗಿದ್ದರೆ, ಕಾವೂರು ಸಮೀಪದ ಜ್ಯೋತಿನಗರದ ಮಂಗಳೂರು ವಿಮಾನ ನಿಲ್ದಾಣದ ತಗ್ಗು ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು.

ಕೊಂಚಾಡಿ ಸಮೀಪದ ಯೆಯ್ಯಡಿಯಲ್ಲಿ ಮರವೊಂದು ರಸ್ತೆಗೆ ಉರುಳಿದ ಪರಿಣಾಮ ಈ ಪ್ರದೇಶದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಮೂಡುಶೆಡ್ಡೆ ಬಳಿ ಧರೆ ಕುಸಿದು ಪರಿಸರದಲ್ಲಿ ಕೆಲಕಾಲ ಭೀತಿ ಸೃಷ್ಟಿಸಿತು.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕೊಡೆ ಹಾಗೂ ದ್ವಿಚಕ್ರ ಸವಾರರು ರೈನ್‌ಕೋಟ್ ಇಲ್ಲದೆ ಮರಗಳಡಿ-ಅಂಗಡಿ ಮುಂಗಟ್ಟುಗಳ ಆಶ್ರಯ ಪಡೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂತು. ರಸ್ತೆಯಲ್ಲಿ ಕೊಳಚೆ ನೀರು ಹರಿದ ಪರಿಣಾಮ ಜನಸಾಮಾನ್ಯರು ತತ್ತರಿಸಿದರು. ಸಂಜೆಯ ವೇಳೆಗೆ ಮಳೆ ಸ್ವಲ್ಪ ಬಿಡುವು ಪಡೆದುಕೊಂಡರೂ ಕೂಡ ಮೋಡ ಕವಿದ ವಾತಾವರಣವಿತ್ತು.

ಗುಡುಗು ಸಿಡಿಲಿನಿಂದ 220 ಕೆವಿ ಕೆಎಂ1 ಮತ್ತು ಕೆಎಂ2 ಕಾವೂರು-ಕೇಮಾರ್ ಅಧಿಕ ಒತ್ತಡ ಲೈನ್‌ನಲ್ಲಿ ಗುರುಪುರ ಹೊಳೆಯ ಸಮೀಪ ದೋಷ ಕಂಡು ಬಂದಿದೆ. ಅಲ್ಲದೆ, ನಗರದಲ್ಲಿ ಕನಿಷ್ಠ 5 ಗಂಟೆ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. (ಕಾವೂರು – ಕೇಮಾರ್ ಫೀಡರ್ ನಲ್ಲಿ ವಿದ್ಯುತ್ ವ್ಯತಯ ಉಂಟಾಗಿ ಮಧ್ಯಾಹ್ನದಿಂದ ರಾತ್ರಿಯವರೆಗೆ ಇಡೀ ಮಂಗಳೂರಿಗೆ ವಿದ್ಯುತ್ ಕೈಕೊಟ್ಟಿತ್ತು). ಇದೇ ವೇಳೆ ನೆಟ್ಲಮುಡ್ನೂರು 220 ಕೆವಿ ವಿದ್ಯುತ್ ಉಪಕೇಂದ್ರದಿಂದ 110 ಕೆವಿ ಸಾಲೆತ್ತೂರು ಕೊಣಾಜೆ ಮಾರ್ಗವಾಗಿ ಮಂಗಳೂರಿಗೆ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಯಿತು. ರಾತ್ರಿ ಸುಮಾರು 7:30ರ ವೇಳೆಗೆ ವಿದ್ಯುತ್ ಸಮಸ್ಯೆಗೆ ಪರಿಹಾರ ಕಲ್ಪಿಸಲಾಯಿತು ಎಂದು ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.

ವಾಯುವ್ಯದಿಂದ ಪಶ್ಚಿಮ ದಿಕ್ಕಿಗೆ ಮುಂದಿನ 24 ಗಂಟೆಯೊಳಗೆ ಗಂಟೆಗೆ 45ರಿಂದ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಎಚ್ಚರ ವಹಿಸಬೇಕು ಎಂದು ಹವಾಮಾನ ಇಲಾಖೆ ಪ್ರಕಟನೆ ತಿಳಿಸಿದೆ.

ಧರ್ಮಸ್ಥಳದಲ್ಲಿ 52.4 ಮಿ.ಮೀ., ಮೂಡುಬಿದಿರೆಯಲ್ಲಿ 9.2 ಮಿ.ಮೀ., ಪುತ್ತೂರಿನಲ್ಲಿ 3.8 ಮಿ.ಮೀ., ಶಿರಾಡಿಯಲ್ಲಿ 50.8 ಮಿ.ಮೀ., ಸುಳ್ಯದಲ್ಲಿ 3.4 ಮಿ.ಮೀ., ಮಾಣಿಯಲ್ಲಿ 4.6 ಮಿ.ಮೀ.ಮಳೆಯಾಗಿದೆ.

ಸಿಡಿಲು ಬಡಿದು ಕಾರ್ಮಿಕ ಮೃತ್ಯು

ನಗರದ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಿಟೋರಿಯಂ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಸಿಡಿಲು ಬಡಿದು ಸಾವಿಗೀಡಾದ ಘಟನೆ ಗುರುವಾರ ಅಪರಾಹ್ನ ನಡೆದಿದೆ.

ಮೃತ ಕಾರ್ಮಿಕನನ್ನು ಬೆಳಗಾವಿಯ ಬೈಲಹೊಂಗಲ ಸಮೀಪದ ಬಾಬು (55) ಎಂದು ಗುರುತಿಸಲಾಗಿದೆ. ಇವರು ಆಸ್ಪತ್ರೆಯ ಆಡಿಟೋರಿಯಂನ ಹೊರಗಡೆ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿಯಿತು. ತೀವ್ರ ಆಘಾತಗೊಂಡ ಬಾಬುರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಕೊನೆಯುಸಿರೆಳೆದ ಬಗ್ಗೆ ವೈದ್ಯರು ದೃಢೀಕರಿಸಿದರು. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಉಳ್ಳಾಲದಲ್ಲಿ ಧಾರಾಕಾರ ಮಳೆ

ಗುರುವಾರ ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನಲ್ಲಿ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿದಿದೆ. ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ವಲ್ಪ ಕಾಲ ಸಂಚಾರ ಆಸ್ತವ್ಯಸ್ತಗೊಂಡಿತು. ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ತೊಕ್ಕೊಟ್ಟು ಮತ್ತು ಕೋಟೆಕಾರ್‌ನಲ್ಲಿ ಹೆದ್ದಾರಿಯಲ್ಲಿ ಮಳೆ ನೀರು ನಿಂತಿದ್ದರಿಂದ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದ್ದು, ಬಳಿಕ ಜೆಸಿಬಿ ಮೂಲಕ ನೀರನ್ನು ತೆರವು ಮಾಡಲಾಯಿತು.

Write A Comment