ಕನ್ನಡ ವಾರ್ತೆಗಳು

ಜೆಟ್ ಏರ್‌ವೇಸ್ ನಿರ್ಲಕ್ಷ : ಬಜ್ಪೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

Pinterest LinkedIn Tumblr

Jet_airways_abudabhi

ಮಂಗಳೂರು, ಜೂ.5: ಜೆಟ್ ಏರ್‌ವೇಸ್ ಕಂಪೆನಿಯ ತೀವ್ರ ನಿರ್ಲಕ್ಷದಿಂದ ಪ್ರಯಾಣಿಕರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಪರದಾಡಿದ ಘಟನೆ ಗುರುವಾರ ನಡೆದಿದೆ.ಮಂಗಳೂರಿನಿಂದ ಮುಂಬೈಗೆ 3:10ರ ವಿಮಾನವು ಮಳೆಯ ನೆಪವೊಡ್ಡಿ ಹಾರಾಟ ನಡೆಸಲಿಲ್ಲ ಎನ್ನಲಾಗಿದೆ. ಇದರಿಂದ ಈ ವಿಮಾನದ ಮೂಲಕ ಬೇರೆ ಬೇರೆ ಕಡೆ ತೆರಳಬೇಕಾದ ನೂರಾರು ಮಂದಿ ಪ್ರಯಾಣಿಕರು ಸೂಕ್ತ ಮಾಹಿತಿ ಇಲ್ಲದೆ ತತ್ತರಿಸಿದರು ಎಂದು ತಿಳಿದು ಬಂದಿದೆ.

ಅಪರಾಹ್ನ 3:10ಕ್ಕೆ ಹಾರಾಟ ಮಾಡಬೇಕಾಗಿದ್ದ ವಿಮಾನದಲ್ಲಿ ಪ್ರಯಾಣಿಸಲು ಸುಮಾರು 2:30ರ ವೇಳೆಗೆ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಪ್ರವೇಶಿಸಿದರು. ಆದರೆ, ಈ ವಿಮಾನವು ರಾತ್ರಿ ಸುಮಾರು 8:30ರ ವೇಳೆಗೆ ಹಾರಾಟ ನಡೆಸಿತು ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ ಜೆಟ್ ಏರ್‌ವೇಸ್ ಅಪರಾಹ್ನ 2:40ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. 3:10ಕ್ಕೆ ಮುಂಬೈಗೆ ಪ್ರಯಾಣಿಕರನ್ನು ಹೊತ್ತೊಯ್ಯಬೇಕಾಗಿದ್ದ ವಿಮಾನವು ಅಬುಧಾಬಿಗೆ ತೆರಳುವ ಪ್ರಯಾಣಿಕರನ್ನು ಕರೆದೊಯ್ದಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡದೆ ತಾಳ್ಮೆಯನ್ನು ಪರೀಕ್ಷಿಸಿದೆ.

ಈ ಮಧ್ಯೆ ಪ್ರಯಾಣಿಕರನ್ನು ಕೇಳುವವರೇ ಇಲ್ಲ ಎನ್ನಲಾಗಿದೆ. ಅಲ್ಲದೆ, ಪ್ರಯಾಣಿಕರಿಗೆ ಸೂಕ್ತ ಮಾಹಿತಿಯನ್ನೂ ನೀಡದೆ ಜೆಟ್ ಏರ್‌ವೇಸ್ ಸಂಸ್ಥೆ ಸತಾಯಿಸಿದೆ ಎಂಬ ಆರೋಪ ಕೇಳಿ ಬಂದಿದೆ.

‘ನಾವು ಮುಂಬೈಗೆ ತಲುಪಬೇಕಾಗಿತ್ತು. ಅದಕ್ಕಾಗಿ ಮಧ್ಯಾಹ್ನವೇ ಬಜ್ಪೆ ವಿಮಾನ ನಿಲ್ದಾಣಕ್ಕೆ ತಲುಪಿದ್ದೆವು. ಮುಸ್ಸಂಜೆಯವರೆಗೂ ವಿಮಾನ ಹಾರಾಟ ನಡೆಸಲಿಲ್ಲ. ಈ ಬಗ್ಗೆ ಸಂಬಂಧಪಟ್ಟವರಲ್ಲಿ ಕೇಳಿದರೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ’ ಎಂದು ಎ.ಕೆ.ಅಹ್ಮದ್ ಎಂಬವರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಲು ಜೆಟ್ ಏರ್‌ವೇಸ್ ಸಂಸ್ಥೆಯನ್ನು ಸಂಪರ್ಕಿಸಲು ‘ವಾರ್ತಾಭಾರತಿ’ ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.

ಇದೇ ಮೊದಲೇನಲ್ಲ ..

ಜೆಟ್ ಏರ್‌ವೇಸ್ ಸಂಸ್ಥೆಯು ಸಕಾಲಕ್ಕೆ ಪ್ರಯಾಣಿಕರಿಗೆ ಸೂಕ್ತ ಮಾಹಿತಿ ನೀಡದೆ ಸತಾಯಿಸುವುದು ಇದು ಮೊದಲೇನು ಅಲ್ಲ ಎಂದು ರಝಾಕ್ ಎಂಬವರು ಆರೋಪಿಸಿದ್ದಾರೆ. ಸಿಬ್ಬಂದಿಯ ಕೊರತೆಯಿಂದ ತತ್ತರಿಸಿರುವ ಈ ಸಂಸ್ಥೆಯು ಪ್ರಯಾಣಿಕರಿಗೆ ವಂಚಿಸುತ್ತಲೇ ಇದೆ. ಪ್ರಯಾಣಿಕರ ಲಗೇಜ್ ನೀಡಲು ಕನಿಷ್ಠ 2 ಗಂಟೆ ವಿಳಂಬಿಸುತ್ತಿದೆ. ಇದು ದಿನನಿತ್ಯದ ಗೋಳಾಗಿದ್ದು, ಪ್ರಯಾಣಿಕರು ಈ ಸಂಸ್ಥೆಯ ನಿರ್ಲಕ್ಷದ ಬಗ್ಗೆ ದೂರು ನೀಡಿದರೂ ಸ್ಪಂದಿಸುವುದಿಲ್ಲ. ಸಂಸ್ಥೆಯು ಗುರುವಾರ ಮಳೆಯ ನೆಪವೊಡ್ಡಿ ವಿಮಾನ ಹಾರಾಟ ನಡೆಸಲಿಲ್ಲ. ಮಳೆಯ ಮಧ್ಯೆಯೂ ಇತರ ಕಂಪೆನಿಯ ವಿಮಾನಗಳು ಹಾರಾಟ ನಡೆಸಿದ ಬಗ್ಗೆ ಪ್ರಶ್ನಿಸಿದರೆ ಉತ್ತರ ನೀಡಲು ನುಣುಚಿಕೊಳ್ಳುತ್ತಿದೆ ಎಂದು ರಝಾಕ್ ತಿಳಿಸಿದ್ದಾರೆ.

Write A Comment