ಕನ್ನಡ ವಾರ್ತೆಗಳು

ಪ್ರೆಸ್ ಕ್ಲಬ್ ಡೇ ಆಚರಣೆ : ಸಮಾಜದ ಏರುಪೇರುಗಳನ್ನು ಗುರುತಿಸುವ ಪತ್ರಕರ್ತರ ಕೆಲಸ ಅಭಿನಂದನೀಯ : ಸಂಸದ ನಳಿನ್ ಕುಮಾರ್ ಕಟೀಲ್

Pinterest LinkedIn Tumblr

Press_Club_Day_1

ಮಂಗಳೂರು, ಮೇ.31: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ `ಪ್ರೆಸ್‌ಕ್ಲಬ್ ಡೇ’ಯನ್ನು ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ಶನಿವಾರ ಸಂಜೆ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಅವರು ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರು ವೇಗದ ಜೀವನಕ್ಕೆ ಹೊಂದಿಕೊಂಡಿರುತ್ತಾರೆ. ಅವುಗಳ ನಡುವೆಯೂ ಸಮಯವನ್ನು ಹೊಂದಿಸಿಕೊಂಡು ವೃತ್ತಿ ಬಾಂಧವರು ಒಟ್ಟಾಗುವುದು ಶ್ಲಾಘನೀಯ ಎಂದರು.

ತನ್ನ ವೃತ್ತಿ ವಿಭಿನ್ನವಾಗಿದ್ದರೂ ಅದನ್ನು ಕುಟುಂಬದವರಿಗೆ ಪರಿಚಯಿಸುವ ಅವಕಾಶವನ್ನು ಇಂತಹ ಕಾರ್ಯಕ್ರಮಗಳು ಒದಗಿಸುತ್ತದೆ. ಸಮಾಜದಲ್ಲಿರುವ ಏರುಪೇರುಗಳನ್ನು ಗುರುತಿಸುವ ಪತ್ರಕರ್ತರ ಕೆಲಸ ಅಭಿನಂದನಾರ್ಹ. ಅದರಲ್ಲಿಯೂ ಮಂಗಳೂರಿನ ಪತ್ರಕರ್ತರ ವೃತ್ತಿಪರತೆಯನ್ನು ಇತ್ತೀಚಿಗೆ ನಗರಕ್ಕೆ ಬಂದಿದ್ದ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ಶ್ಲಾಘಿಸಿದ್ದರು. ಆದ್ದರಿಂದ ಇಲ್ಲಿನವರ ವೃತ್ತಿಪರತೆಗೆ ಅಭಿನಂದನೆ ಸಲ್ಲಿಸಲೇಬೇಕೆಂದರು.

ಉದ್ಘಾಟನೆ ನೆರವೇರಿಸಿದ ಮುಖ್ಯ ಅತಿಥಿ, ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್, ಕಲಾವಿದರು ಮತ್ತು ಪತ್ರಕರ್ತರ ನಡುವೆ ಸಾಮ್ಯತೆ ಇದೆ. ಎರಡೂ ಕ್ಷೇತ್ರದಲ್ಲಿರುವವರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ. ಪತ್ರಕರ್ತರೇ ಕಲಾವಿದರನ್ನು ಬೆಳೆಸುವವರು ಕೂಡ ಎಂದರು.

Press_Club_Day_2 Press_Club_Day_3

ಸಾಧಕ ಪತ್ರಕರ್ತರನ್ನು ಸನ್ಮಾನಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್. ರಾಜು, ಪತ್ರಕರ್ತರು ಇಂದು ಹತ್ತು ಹಲವು ಸಮಸ್ಯೆಗಳ ನಡುವೆ ಬದುಕುತ್ತಿದ್ದಾರೆ. ಉದ್ಯೋಗದ ಭದ್ರತೆಯೂ ಇಲ್ಲ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಪತ್ರಕರ್ತರ ಕುರಿತು ಗಟ್ಟಿ ಧ್ವನಿ ಮೊಳಗಬೇಕು. ಯಾರೇ ಜನಪ್ರತಿನಿಧಿಗಳು ಪತ್ರಕರ್ತರ ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿ ಎತ್ತುತ್ತಿಲ್ಲ ಎಂದು ವಿಷಾದಿಸಿದರು.

ಶಾಸಕ ಮೊಯ್ದಿನ್ ಬಾವ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಸಾಧಕ ಪತ್ರಕರ್ತರಾದ ಬಿ. ರವೀಂದ್ರ ಶೆಟ್ಟಿ, ಮೌನೇಶ್ ವಿಶ್ವಕರ್ಮ, ಅಫುಲ್ ಇರಾರವರನ್ನು ಸನ್ಮಾನಿಸಲಾಯಿತು.

ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೯೦ಕ್ಕೂ ಅಧಿಕ ಅಂಕ ಪಡೆದ ಸಿಂಧು ರೈ ಹಾಗೂ ಅಂಕಿತಾ ನಿರ್ಪಾಜೆಯವರನ್ನು ಗೌರವಿಸಲಾಯಿತು. ಪತ್ರಕರ್ತರ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪತ್ರಕರ್ತ ಮನೋಹರ ಪ್ರಸಾದ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಬಿ. ರವೀಂದ್ರ ಶೆಟ್ಟಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ, ಸಂಘದ ಮಾಜಿ ಅಧ್ಯಕ್ಷ ಪಿ. ಬಿ. ಹರೀಶ್ ರೈ ಉಪಸ್ಥಿತರಿದ್ದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಸ್ವಾಗತಿಸಿ, ಪ್ರೆಸ್ ಕ್ಲಬ್ ಉಪಾಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘದ ಕೋಶಾಧಿಕಾರಿ ಇಬ್ರಾಹಿಂ ಅಡ್ಕಸ್ಥಳ ಸನ್ಮಾನಿತರನ್ನು ಪರಿಚಯಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ರಾಮಕೃಷ್ಣ ಆರ್. ವಂದಿಸಿ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ, ಮನೋರಂಜನೆ ಹಾಗೂ ಸಂಗೀತ ರಸಸಂಜೆ ಕಾರ್ಯಕ್ರಮಗಳು ನಡೆಯಿತು.

Write A Comment