ಕನ್ನಡ ವಾರ್ತೆಗಳು

ಪುರಭವನ ಕಾಮಗಾರಿ ಪುನಾರಾರಂಭಕ್ಕೆ ಪಾಲಿಕೆ ಸದಸ್ಯರಿಂದ ಪ್ರತಿಭಟನೆ : ಅರ್ಧದಲ್ಲೇ ಮೊಟಕುಗೊಂಡ ಮನಪಾ ಸಾಮಾನ್ಯ ಸಭೆ

Pinterest LinkedIn Tumblr

Mcc_Meet_Protest_1

ಮಂಗಳೂರು, : ಪುರಭವನದ ಕಾಮಗಾರಿ ಯಾವಾಗ ಆರಂಭವಾಗುತ್ತದೆ ಎಂಬ ಉತ್ತರ ಕೋರಿ ವಿಪಕ್ಷ ಪ್ರತಿಭಟನೆಗಿಳಿದ ಹಿನ್ನೆಲೆಯಲ್ಲಿ ಸಭೆ ನಡೆಸಲಾಗದೆ ಅರ್ಧದಲ್ಲೇ ಸಭೆ ಬರ್ಕಾಸ್ತುಗೊಳಿಸಿ ಮುಂದೂಡಿದ ಘಟನೆ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶನಿವಾರ ನಡೆಯಿತು.

ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭದಿಂದಲೇ ಅಧಿಕಾರಿಗಳ ಕಾರ್ಯವೈಖರಿ, ಆಡಳಿತ ದುರುಪಯೋಗದ ಬಗ್ಗೆ ಆಡಳಿತ ಪಕ್ಷದ ಸದಸ್ಯರಿಂದಲೇ ಆರೋಪ, ಆಕ್ಷೇಪಗಳು ವ್ಯಕ್ತವಾದರೆ, ವಿಪಕ್ಷದ ಸದಸ್ಯರೂ ಅದನ್ನು ಸಮರ್ಥಿಸಿ ಮಾತನಾಡಿದರು.

ಈ ನಡುವೆ ಪುರಭವನ ಕಾಮಗಾರಿ ಯಾವಾಗ ಆರಂಭವಾಗುತ್ತದೆ ಎಂಬ ಉತ್ತರ ನೀಡಬೇಕು. ಆರಂಭವಾಗುವವರೆಗೆ ನಾವು ಸದನದಲ್ಲಿ ಭಾಗವಹಿಸುವುದಿಲ್ಲ. ಇದೀಗ ಪ್ರತಿಭಟನೆ ನಡೆಸುವುದಾಗಿ ವಿಪಕ್ಷ ನಾಯಕ ಸುಧೀರ್ ಶೆಟ್ಟಿ ನೇತೃತ್ವದಲ್ಲಿ ಪರಿಷತ್‌ನ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು. ಈ ಸಂದರ್ಭ ಮೇಯರ್‌ ಕಾಮಗಾರಿ ಬಗ್ಗೆ ಉತ್ತರ ನೀಡುವಂತೆ ಆಯುಕ್ತರಿಗೆ ಸೂಚಿಸಿದರು.

Mcc_Meet_Protest_2 Mcc_Meet_Protest_3

ಆಯುಕ್ತರು ಪುರಭವನ ಕಾಮಗಾರಿ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಉತ್ತರ ನೀಡಲು ಮುಂದಾದಾಗ, ನಮಗೆ ಉತ್ತರ ಬೇಡ, ಕಾಮಗಾರಿ ಆರಂಭವಾಗಬೇಕು ಎಂದು ವಿಪಕ್ಷ ಸದಸ್ಯರು ಪಟ್ಟು ಹಿಡಿದು, ಆಡಳಿತ ವಿಫಲ ಆಗಿದೆ ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ವರ್ಷ ಮಾತ್ರವಲ್ಲ, ಕಳೆದ ವರ್ಷ ಕೂಡಾ ತಮ್ಮ ಕ್ಷೇತ್ರಕ್ಕೆ ಅನುದಾನ ಬಂದಿಲ್ಲ. ಆಡಳಿತ ವಿಫಲ ಆಗಿದೆ ಎಂದು ಆರೋಪಿಸಿ ಸಿಪಿಎಂನ ಏಕೈಕ ಸದಸ್ಯ ದಯಾನಂದ ಶೆಟ್ಟಿ ವಿಪಕ್ಷದ ಪ್ರತಿಭಟನೆಗೆ ಬೆಂಬಲಿಸಿ ಮೇಯರ್ ಪೀಠದೆದುರು ”ತೆರಳಿದರು.

ಈ ಸಂದರ್ಭ ಜೆಡಿಎಸ್‌ನ ಅಬ್ದುಲ್ ಅಝೀಝ್ ಕುದ್ರೋಳಿ ಹಾಗೂ ಎಸ್‌ಡಿಪಿಐನ ಅಯಾಝ್ ಕೂಡಾ ವಿಪಕ್ಷ ಪ್ರತಿಭಟನೆಯನ್ನು ಬೆಂಬಲಿಸಿದರು. ಆಯುಕ್ತರು ಪುರಭವನದ ಆರಂಭದ ಬಗ್ಗೆ ಉತ್ತರ ನೀಡುತ್ತಾರೆಂದರೂ ವಿಪಕ್ಷ ಸದಸ್ಯರು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಸಭೆ ನಡೆಸಲು ಸಾಧ್ಯವಾಗದ ಕಾರಣ ಸಭೆ ಯನ್ನು ಬರ್ಕಾಸ್ತುಗೊಳಿಸಿ ಮುಂದೂಡುವಂತೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ ಸೂಚಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಯಿತು.

Mcc_Meet_Protest_4 Mcc_Meet_Protest_5

ಅವ್ಯವಸ್ಥೆಯ ಅಗರವಾಗಿರುವ ಸುರತ್ಕಲ್‌ಗೆ ಯಾರೂ ಭೇಟಿ ನೀಡುತ್ತಿಲ್ಲ : ಆರೋಪ

ಸುರತ್ಕಲ್ ವಾರ್ಡ್‌ಗಳಲ್ಲಿ ಒಳಚರಂಡಿ ಹಾಗೂ ಮಾರುಕಟ್ಟೆ ಅವ್ಯವಸ್ಥೆ, ನೀರಿನ ಸಮಸ್ಯೆ, ಸೇತುವೆ ಸಮಸ್ಯೆಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳಾಗಲಿ, ಆಯುಕ್ತರಾಗಲಿ ಭೇಟಿ ನೀಡಿಲ್ಲ. ಸುರತ್ಕಲ್‌ನಲ್ಲಿರುವ ಸಾರ್ವಜನಿಕ ಮಹಿಳೆಯರ ಶೌಚಾಲಯಕ್ಕೆ ಬಾಗಿಲೇ ಇಲ್ಲ. ಮಾರ್ಕೆಟ್‌ನಲ್ಲಿ ಸೆಕ್ಯುರಿಟಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಮೀನುಗಳು ಕಳವಾಗುತ್ತಿವೆ ಎಂದು ಸದಸ್ಯೆ ಪ್ರತಿಭಾ ಕುಳಾಯಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುರತ್ಕಲ್ ವಾರ್ಡ್‌ಗಳಿಗೆ ಭೇಟಿ ನೀಡಲು ಸಾಧ್ಯವಾಗದ ಅಧಿಕಾರಿಗಳಿಗೆ ಅನುಕೂಲವಾಗುವಂತೆ ನಾನು ಸಿಡಿ ರೆಡಿ ಮಾಡಿ ತಂದಿದ್ದೇನೆ. ಅದನ್ನು ನೋಡಿಯಾದರೂ ಅಲ್ಲಿ ತುರ್ತು ಕಾಮಗಾರಿಗಳನ್ನು ನಿರ್ವಹಿಸಲಿ ಎಂದು ಪ್ರತಿಭಾರವರು ಮೇಯರ್‌ಗೆ ಸಿಡಿ ನೀಡಿದರು. ಮುಂದಿನ ಸಭೆಯೊಳಗೆ ಸಮಸ್ಯೆ ಗಳು ಇತ್ಯರ್ಥವಾಗದಿದ್ದರೆ ಮುಂದಿನ ಸಾಮಾನ್ಯ ಸಭೆಗೆ ತಾನು ಹಾಜರಾಗುವುದಿಲ್ಲ ಎಂದವರು ನುಡಿದರು.

ಸಭೆಯಲ್ಲಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಹರಿನಾಥ್, ಪ್ರಕಾಶ್ ಬಿ.ಸಾಲ್ಯಾನ್, ದೀಪಕ್ ಕೆ.ಪೂಜಾರಿ, ಕೇಶವ ಉಪಸ್ಥಿತರಿದ್ದರು.

Mcc_Meet_Protest_6 Mcc_Meet_Protest_7

ಪರಿಷತ್‌ನ ನಿರ್ಣಯ ನಿರ್ಲಕ್ಷ ಆರೋಪ: ಅಧಿಕಾರಿಗಳ ವಿರುದ್ಧ ಸರಕಾರಕ್ಕೆ ಪತ್ರ

ಸಭೆಯಲ್ಲಿ ಬಹುತೇಕವಾಗಿ ಅಧಿಕಾರಿಗಳ ವಿರುದ್ಧ ಸದಸ್ಯರಿಂದಲೇ ಆರೋಪಗಳು ಕೇಳಿಬಂದವು. 2014-15ನೆ ಸಾಲಿನ ಮಹಾಪೌರರ ಹಾಗೂ ಉಪ ಮಹಾಪೌರರ ನಿಧಿ ಬಿಡುಗಡೆಯಾಗದಿರುವ ಬಗ್ಗೆ ಕಳೆದ ಪರಿಷತ್ ಸಭೆಯಲ್ಲಿ ಪ್ರಶ್ನಿಸಿದ್ದೆ. ಅದಕ್ಕೆ ಉತ್ತರವಾಗಿ ಮನಪಾ ಲೆಕ್ಕಪತ್ರ ವಿಭಾಗದಲ್ಲಿ ಜಮಾ ಖರ್ಚುಗಳಿಗೆ ಸಂಬಂಧಿಸಿದಂತೆ ನಿಗ ದಿತ ಲೆಕ್ಕ ಶೀರ್ಷಿಕೆಗಳಲ್ಲಿ ಮಾತ್ರ ಆರ್ಥಿಕ ವ್ಯವಹಾರ ನಡೆಯುತ್ತಿದೆ ಎಂಬ ಹಾರಿಕೆಯ ಉತ್ತರ ನೀಡುವ ಮೂಲಕ ಮನಪಾ ಸದಸ್ಯರನ್ನು ಅವ ಮಾನಿಸಲಾಗಿದೆ ಎಂದು ಮಾಜಿ ಮೇಯರ್ ಮಹಾಬಲ ಮಾರ್ಲ ಗಂಭೀರ ಆರೋಪ ಮಾಡಿದರು. ಕಳೆದ 3 ತಿಂಗಳುಗಳಲ್ಲಿ ಎಷ್ಟು ಅಭಿವೃದ್ಧಿ ಕಾಮಗಾರಿಗಳ ಕಡತ ವಿಲೇ ಆಗಿದೆ ಎಂದು ಅಪ್ಪಿಲತಾ ಪ್ರಶ್ನಿಸಿದರು.

ಕಳೆದ ಸಭೆಯಲ್ಲಿ ತಾನು ಪ್ರಸ್ತಾಪಿಸಿದ ಸ್ವಯಂ ಘೋಷಿತ ಆಸ್ತಿ ತೆರಿಗೆ ಕುರಿತು ಉತ್ತರವಿನ್ನೂ ಬಂದಿಲ್ಲ ಎಂದು ವಿಪಕ್ಷ ನಾಯಕ ಸುಧೀರ್ ಶೆಟ್ಟಿ ಆಕ್ಷೇಪಿಸಿದರು. ಇದಕ್ಕುತ್ತರಿಸಿದ ಆಯುಕ್ತೆ ಹೆಫ್ಸಿಬಾ ರಾಣಿ, ಕಳೆದ ಎಪ್ರಿಲ್‌ನಲ್ಲಿ ಬಜೆಟ್‌ನಲ್ಲಿ ಮಂಜೂರು ಆಗಿರುವ ಕಾಮಗಾರಿಗಳಿಗೆ ಯಾವುದೇ ರೀತಿಯಲ್ಲಿ ಆಕ್ಷೇಪ ಇರುವು ದಿಲ್ಲ ಎಂದಾಗ ಮತ್ತೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತವಾಯಿತು.

Mcc_Meet_Protest_8 Mcc_Meet_Protest_9

ಸಭೆಯಲ್ಲಿ ಮಂಜೂರಾದ ನಿಧಿಯನ್ನು ತಡೆ ಹಿಡಿಯುವ ಅಧಿಕಾರ ಅಧಿಕಾರಿಗಳಿಗೆ ಇಲ್ಲ ಎಂದ ಮಾರ್ಲ, ಸಭೆಯಲ್ಲಿ ಕೈಗೊಂಡ ನಿರ್ಣಯ ತಪ್ಪಾಗಿದ್ದರೆ ಸರಕಾರಕ್ಕೆ ವರದಿ ಮಾಡಬಹುದು. ಒಂದು ವೇಳೆ ನಿಧಿ ವಿಚಾರದಲ್ಲಿ ಸರಕಾರಕ್ಕೆ ಪತ್ರ ಬರೆಯಲಾಗಿದ್ದರೆ ಪ್ರತಿಯನ್ನು ನೀಡಿ ಎಂದು ಆಗ್ರಹಿಸಿದರು. ಈ ಸಂದರ್ಭ ಮೇಯರ್ ಪ್ರತಿಕ್ರಿಯಿಸಿ, ಪರಿಷ ತ್‌ನ ನಿರ್ಣಯಗಳನ್ನು ಪಾಲಿಸದೆ ಇರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರಕಾರಕ್ಕೆ ಕೋರಲಾಗುವುದು ಎಂದು ನಿರ್ಣಯ ಪ್ರಕಟಿಸಿದರು.

ಹಣ ದುರುಪಯೋಗ ಆರೋಪ: ತನಿಖೆಗೆ ಪತ್ರ

ಸ್ಮಾರ್ಟ್ ಸಿಟಿ ಬಗ್ಗೆ ಚರ್ಚಿಸಲು ಅಮೆರಿಕದ ತಂಡವೊಂದಕ್ಕೆ ಮನಪಾದಿಂದ ರೆಡ್ ಕಾರ್ಪೆಟ್ ಸ್ವಾಗತ ನೀಡಿರುವ ಕುರಿತಂತೆ ತಾನು ಹಿಂದಿನ ಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡುವ ಮೂಲಕ ಸದನವನ್ನು ತಪ್ಪು ದಾರಿಗೆ ಎಳೆಯಲಾಗಿದೆ ಎಂದು ಸದಸ್ಯ ಅಬ್ದುರ್ರವೂಫ್ ಸಭೆಯಲ್ಲಿ ದೂರಿದರು.

ಮಾರ್ಚ್ 24ರಂದು ಅಮೆರಿಕದ ಬ್ಲೂಂಬರ್ಗ್ ಫಿಲಾಂತ್ರಫೀಸ್‌ನಿಂದ ಬಂದ ತಂಡಕ್ಕೆ ಸಾರ್ವಜನಿಕ ಹಣವನ್ನು ಪೋಲು ಮಾಡಲಾಗಿದೆ. ಬಂದಿದ್ದ ಮೂವರಲ್ಲಿ ಓರ್ವ ಓಶಿಯನ್ ಪರ್ಲ್‌ನಲ್ಲೇ ಉಳಿದುಕೊಂಡಿದ್ದರೆ, ಮತ್ತಿಬ್ಬರಿಗೆ ಮನಪಾದಲ್ಲಿ ಸಿಎಂಗೆ ಮಾತ್ರ ನೀಡುವ ರೆಡ್ ಕಾರ್ಪೆಟ್ ಸ್ವಾಗತ ನೀಡಲಾಗಿದೆ. ಅಲ್ಲದೆ, ಹಿರಿಯ ಅಧಿಕಾರಿಗಳನ್ನು ಅವರ ಸ್ವಾಗತಕ್ಕಾಗಿ ನಿಯೋಜಿಸುವ ಮೂಲಕ ಅಧಿಕಾರ ದುರುಪಯೋಗವಾಗಿದೆ. ಸ್ಮಾರ್ಟ್ ಸಿಟಿ ಬಗ್ಗೆ ಅಧ್ಯಯನ ಮಾಡಲು ಬಂದವರಿಗೆ ಸ್ಮಾರ್ಟ್ ಸಿಟಿ ಬಗ್ಗೆ ಏನೂ ಅರಿವಿರಲಿಲ್ಲ. ಎಲ್ಲದಕ್ಕೂ ಕಾನೂನು ಮಾತನಾಡುವ ಅಧಿಕಾರಿಗಳಿಗೆ ಇಲ್ಲಿ ಕಾನೂನು ಪಾಲಿಸ ಬೇಕೆಂದು ತಿಳಿದಿರಲಿಲ್ಲವೇ ಎಂದು ಆಯುಕ್ತರನ್ನೇ ಗುರಿ ಯಾಗಿಸಿಕೊಂಡು ಅಬ್ದುರ್ರವೂಫ್ ಆರೋಪಿಸಿದರು.

ಈ ಬಗ್ಗೆ ತನಿಖೆಗೆ ಸರಕಾರಕ್ಕೆ ಪತ್ರ ಬರೆಯಲು ಹಾಗೂ ಸಂಬಂಧಿಸಿದ ಅಧಿಕಾರಿಗಳಿಂದ ಖರ್ಚು ಮಾಡಲಾದ ಹಣವನ್ನು ಭರಿಸಲು ಮೇಯರ್ ಜೆಸಿಂತಾ ಆಲ್ಫ್ರೆಡ್ ನಿರ್ಣಯ ಪ್ರಕಟಿಸಿದರು.

ದುರುದ್ದೇಶಪೂರಿತ ಆರೋಪ: ಆಯುಕ್ತೆ  ಹೆಫ್ಸಿಬಾ ರಾಣಿ

”ನಗರಾಭಿವೃದ್ಧಿ ಕಾರ್ಯದರ್ಶಿಯಿಂದ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಈಗಾಗಲೇ ಉತ್ತರ ನೀಡಿದ್ದೆ. ಅದಕ್ಕೆ ಈಗಾಗಲೇ ಒಪ್ಪಿಗೆ ನೀಡಿದವರು ಇದೀಗ ದುರುದ್ದೇಶಪೂರಿತ ಆರೋಪ ಮಾಡುತ್ತಿದ್ದಾರೆ. ಅವರು ದೇಶದ ಆರು ನಗರಗಳಿಗೆ ಭೇಟಿ ನೀಡಿದ್ದು, ಅದರಲ್ಲಿ ಮಂಗಳೂರು ಒಂದು ಎಂಬ ಬಗ್ಗೆ ನಾವು ಹೆಮ್ಮೆ ಪಡಬೇಕು. ಅವರ ಜತೆ ಸಿ ಅಥವಾ ಡಿ ದರ್ಜೆ ನೌಕರರನ್ನು ಕಳುಹಿಸಲು ಸಾಧ್ಯವಿಲ್ಲ. ಹಾಗಾಗಿ ಹಿರಿಯ ಅಧಿಕಾರಿಗಳನ್ನು ಕಳುಹಿಸಲಾಗಿತ್ತು” ಎಂದು ಮೇಲಿನ ಆರೋಪಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಆಯುಕ್ತೆ ಹೆಫ್ಸಿಬಾ ರಾಣಿ ಪ್ರತಿಕ್ರಿಯಿಸಿದ್ದಾರೆ.

Write A Comment