ಕನ್ನಡ ವಾರ್ತೆಗಳು

ಜೂ. 1: ವಿಶ್ವ ಹಾಲು ದಿನಾಚರಣೆ – ದ.ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ರೋಗಿಗಳಿಗೆ ಹಾಲು ಹಣ್ಣು ವಿತರಣೆ | ಸಮ್ಮಾನ | ಹಬೆ ಯಂತ್ರ/ ಸಭಾ ಭವನ ಉದ್ಘಾಟನೆ

Pinterest LinkedIn Tumblr

kmf_Press_Meet_1

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ 15 ನೇ ‘ವಿಶ್ವ ಹಾಲು ದಿನಾಚರಣೆಯನ್ನು ಜೂ.1ರಂದು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ. ವಿಶ್ವ ಹಾಲು ದಿನಾಚರಣೆ ಅಂಗವಾಗಿ ಜೂ. 1ರಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಜಿಲ್ಲಾ ವೆನ್‌ಲಾಕ್‌ ಮತ್ತು ಲೇಡಿಗೋಷನ್‌ ಆಸ್ಪತ್ರೆಗಳ ರೋಗಿಗಳಿಗೆ ಹಾಲು, ಹಣ್ಣು ವಿತರಣೆ, ನಂದಿನಿ ಡೀಲರ್‌ಗಳಿಗೆ ಅಭಿನಂದನೆ, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ವಿತರಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಚಾಲಕ/ನಿರ್ವಾಹಕರಿಗೆ ಸಮ್ಮಾನ ಹಾಗೂ ಒಕ್ಕೂಟದ ಅತಿಥಿ ಗೃಹ, ಆಗ್ರೋ ವೇಸ್ಟ್‌ ಆಧಾರಿತ ಹಬೆ ಯಂತ್ರ/ಒಕ್ಕೂಟದ ಸಭಾ ಭವನ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರು, ಅಂತಾರಾಷ್ಟ್ರೀಯ ಆಹಾರ ಮತ್ತು ಕೃಷಿ ಸಂಸ್ಥೆ ಹಾಲು “ವಿಶ್ವ ಆಹಾರ’ ಎಂದು ಘೋಷಿಸಿದೆ. ಅದು ಪರಿಪೂರ್ಣ ಆಹಾರ ಎಂದು ವಿಶ್ವ ಮಾನ್ಯತೆ ಪಡೆದಿದೆ. ಹಾಗಾಗಿ ಹಾಲಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಹೈನುಗಾರಿಕೆ ವೃತ್ತಿಯಲ್ಲಿ ವರ್ಷ ಪೂರ್ತಿ ಸಕ್ರಿಯವಾಗಿ ಶ್ರಮಿಸಿದವರನ್ನು ಗುರುತಿಸಿ ಗೌರವಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.

kmf_Press_Meet_2 kmf_Press_Meet_3

ಜೂ. 1ರಂದು ಬೆಳಗ್ಗೆ 7.30ಕ್ಕೆ ಜೆಪ್ಪು ಶಿಶು ಮಂದಿರದ ಮಕ್ಕಳಿಗೆ ಹಾಲು, ಹಣ್ಣು ವಿತರಣೆ, 10 ಗಂಟೆಗೆ ವೆನ್‌ಲಾಕ್‌ ಮತ್ತು 11.30ಕ್ಕೆ ಲೇಡಿಗೋಷನ್‌ ಆಸ್ಪತ್ರೆಯ ರೋಗಿಗಳಿಗೆ ಹಾಲು ಮತ್ತು ಹಣ್ಣು ವಿತರಿಸಿ, ವಿಶ್ಬ ಹಾಲು ದಿನಾಚರಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುವುದು.

ಬಳಿಕ ವೆನ್ಲಾಕ್ ಆಸ್ಪತ್ರೆ ಮತ್ತು ಲೇಡಿಗೋಷನ್ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸಲಾಗುವುದು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಯು.ಟಿ ಖಾದರ್, ಶಾಸಕ ಲೋಬೋ, ವೆನ್ಲಾಕ್ ನ ಅಧೀಕ್ಷಕಿ ಡಾ. ಶಕುಂತಳಾ , ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿರುವರು ಎಂದು ಅವರು ಹೇಳಿದರು.

kmf_Press_Meet_4

kmf_Press_Meet_5

ಅಪರಾಹ್ನ 2.30ಕ್ಕೆ ಕುಲಶೇಖರದಲ್ಲಿರುವ ಒಕ್ಕೂಟದ ಡೈರಿ ಸಭಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಅತಿಥಿ ಗೃಹವನ್ನು ಸಚಿವ ರಮಾನಾಥ ರೈ ಉದ್ಘಾಟಿಸಲಿದ್ದು, ಆಗ್ರೋ ವೇಸ್ಟ್‌ ಆಧಾರಿತ ಹಬೆ ಯಂತ್ರವನ್ನು ಸಂಸದ ನಳಿನ್‌ ಕುಮಾರ್‌ ಕಟೀಲು ಉದ್ಘಾಟಿಸುವರು,ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಮ್ .ಎನ್ ರಾಜೇಂದ್ರ ಕುಮಾರ್ ಒಕ್ಕೂಟದ ಸಭಾಭವನ ಉದ್ಘಾಟಿಸಲಿರುವರು. ಸಮ್ಮಾನ ಕಾರ್ಯಕ್ರಮವನ್ನು ಶಾಸಕ ಜೆ.ಆರ್‌. ಲೋಬೊ ಉದ್ಘಾಟಿಸಲಿದ್ದು, ಮೇಯರ್ ಜೆಸಿಂತಾ ಅವರು ನಂದಿನಿ ಉತ್ಪನ್ನಗಳ ವಿತರಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಚಾಲಕ ನಿರ್ವಾಹಕರಿಗೆ ಸನ್ಮಾನ ನೆರವೇರಿಸುವರು. ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿರಲಿರುವರು ಎಂದು ಅವರು ಹೇಳಿದರು.

ಒಕ್ಕೂಟದ ನಿರ್ದೇಶಕ ಡಾ| ಕೆ.ಎಂ. ಕೃಷ್ಣ ಭಟ್‌, ಅಶೋಕ್‌ ಕುಮಾರ್‌ ಶೆಟ್ಟಿ, ಹದ್ದೂರು ರಾಜೀವ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ, ಮೆನೇಜರ್‌ಗಳಾದ ಬಿ.ಎನ್‌. ವಿಜಯ ಕುಮಾರ್‌, ಡಾ| ನಿತ್ಯಾನಂದ, ರಾಜಶೇಖರ ಮೂರ್ತಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment