ಕನ್ನಡ ವಾರ್ತೆಗಳು

‘ಪಾಮ್ ಸಂಡೆ’ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭ

Pinterest LinkedIn Tumblr

palm_news_photo_1a

ಮಂಗಳೂರು, ಮಾರ್ಚ್.29: ‘ಪಾಮ್ ಸಂಡೆ’ ಎಂದೇ ಕರೆಯಲ್ಪಡುವ ‘ಗರಿಗಳ ರವಿವಾರ’ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಂಡಿದೆ.ಏಸುಕ್ರಿಸ್ತರು ಬೆಥಾನಿಯಾದಿಂದ ದೇವನಗರಿ ಎಂದು ಹೇಳಲಾದ ಜೆರುಸಲೇಂಗೆ ಪ್ರವೇಶ ಮಾಡುವಾಗ ಅಲ್ಲಿನ ಜನರು ‘ಆಲಿವ್’ ಮರದ ಗರಿಗಳನ್ನು ಹಿಡಿದು ಸ್ವಾಗತಿಸಿದ್ದರು ಎಂದು ಬೈಬಲ್‌ನಲ್ಲಿ ತಿಳಿಸಿದೆ. ಅದರ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ರವಿವಾರದ ಬಲಿ ಪೂಜೆಯಲ್ಲಿ ಪಾಲ್ಗೊಂಡರು.

ನಗರದ ಎಲ್ಲಾ ಚರ್ಚ್‌ಗಳಲ್ಲೂ ‘ಪಾಮ್ ಸಂಡೆ’ಯ ಆಚರಣೆ ನಡೆಯಿತು. ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜರ ನೇತೃತ್ವದಲ್ಲಿ ರೊಝಾರಿಯೊ ಚರ್ಚ್‌ನಲ್ಲಿ ಪಾಮ್‌ಸಂಡೆಯ ವಿಧಿವಿಧಾನ ನಡೆಯಿತು. ಏಸುಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದ ದಿನ ಅಥವಾ ಶುಭ ಶುಕ್ರವಾರದ ಮುಂಚಿನ ರವಿವಾರವನ್ನು ‘ಗರಿಗಳ ರವಿವಾರ’ವಾಗಿ ಆಚರಿಸಲಾಗುತ್ತದೆ. ಗುರುವಾರ ಏಸುಕ್ರಿಸ್ತರ ಕೊನೆಯ ಭೋಜನ, ಶುಕ್ರವಾರ ಶಿಲುಬೆಗೇರಿದ, ಶನಿವಾರ ರಾತ್ರಿ ಜಾಗರಣೆ ಮತ್ತು ರವಿವಾರ ಏಸುಕ್ರಿಸ್ತರ ಪುನರುತ್ಥಾನದ ಹಬ್ಬ ಆಚರಣೆಗಳು ಪವಿತ್ರ ಸಪ್ತಾಹ ಕಾರ್ಯಕ್ರಮ ವಿಶೇಷವಾಗಿದೆ.

palm_news_photo_4a palm_news_photo_2 palm_news_photo_3a

ರವಿವಾರ ಬಲಿ ಪೂಜೆಗೆ ಮೊದಲು ತೆಂಗಿನ ಗರಿಗಳನ್ನು ಚರ್ಚ್ ಆವರಣದಲ್ಲಿ ಆಶೀರ್ವದಿಸಿ ಬಳಿಕ ಅವುಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗುವ ಕ್ರೈಸ್ತರು ಏಸು ಕ್ರಿಸ್ತರಿಗೆ ಜೈಕಾರ ಕೂಗುತ್ತಾ ಚರ್ಚ್‌ನೊಳಗೆ ಪ್ರವೇಶಿಸಿದರು. ಬಳಿಕ ಏಸುಕ್ರಿಸ್ತರನ್ನು ಶಿಲುಬೆಗೇರಿಸುವ ಶಿಕ್ಷೆ ವಿಧಿಸುವಲ್ಲಿಂದ ಹಿಡಿದು ಶಿಲುಬೆಗೇರಿ ಅಲ್ಲಿ ಮರಣವನ್ನಪ್ಪಿ, ದೇಹವನ್ನು ಸಮಾಧಿ ಮಾಡುವವರೆಗಿನ ಸಂಗತಿಯನ್ನು ವಾಚಿಸಲಾಯಿತು. ತದನಂತರ ಧರ್ಮಗುರುಗಳಿಂದ ಪ್ರವಚನ ನಡೆಯಿತು.

Write A Comment