ಮಂಗಳೂರು, ಮಾರ್ಚ್.30 : ಸುಮಾರು 140 ವರ್ಷಗಳ ಇತಿಹಾಸವಿದೆ ಎನ್ನಲಾದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯ ಹಳೆಯ ಕಟ್ಟಡವನ್ನು ಪ್ರಾಚೀನ ವಾಸ್ತು ರೂಪದಲ್ಲಿ ಉಳಿಸ ಬೇಕು ಎಂದು ಆಗ್ರಹಿಸಿ ‘ಕರಾವಳಿ ಚಿತ್ರಕಲಾ ಚಾವಡಿ’ಯ ಸುಮಾರು 17 ಕಲಾವಿದರು ರವಿವಾರ ಜಿಲ್ಲಾಧಿ ಕಾರಿಗಳ ಕಚೇರಿ ಆವರಣದಲ್ಲಿ ವಿಶಿಷ್ಟ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಸದಾ ಬ್ರೋಕರ್ ಹಾವಳಿ ಹಾಗೂ ಸಾರ್ವಜನಿಕರ ಓಡಾಟದಿಂದ ಗಿಜಿ ಗುಡುತ್ತಿದ್ದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬೆಳಗ್ಗಿನಿಂದ ಅಪರಾಹ್ನದವರೆಗೆ ಶರತ್ ಹೊಳ್ಳ, ಗಣೇಶ್ ಸೋಮಯಾಜಿ, ಸಪ್ನಾ ನೊರೊನ್ಹ, ತಿಲಕ್ ರಾಜ್, ವೀಣಾ ಮಧುಸೂದನ್, ರಚನಾ ಸೂರಜ್, ಕೆ. ವಾಸುದೇವ ರಾವ್, ಗೌರಿ ಮಲ್ಯ, ಜೋನ್ ಚಂದ್ರನ್, ಸತೀಶ್ ರಾವ್, ನವೀನ್ ಬಂಗೇರ, ಪುನಿಕ್, ಸಂತೋಷ್ ಅಂದ್ರಾದೆ, ಜೀವನ್, ರಾಜೇಂದ್ರ ಕೇದಿಗೆ, ನವೀನ್ ಕೋಡಿಜಾಲ್, ಪದ್ಮನಾಭ ರಾವ್ ಹೀಗೆ ಪ್ರತಿಯೊಬ್ಬ ಕಲಾವಿದರೂ ಎಕ್ರಿಲಿಕ್, ಪೆನ್ಸಿಲ್ ಮತ್ತು ಪೆನ್ ಸ್ಕೆಚ್, ವಾಟರ್ ಕಲರ್ ಬಳಸಿ ಹಳೆಯ ಜಿಲ್ಲಾಧಿಕಾರಿಗಳ ಕಟ್ಟಡದ ಚಿತ್ರ ರಚಿಸಿದರು. ಒಬ್ಬೊಬ್ಬರೂ ವಿವಿಧ ಶೈಲಿಯಲ್ಲಿ ಚಿತ್ರ ರಚಿಸಿ ಗಮನ ಸೆಳೆದರು.
ಮಂಗಳೂರು ಬೆಳೆಯುತ್ತಿದೆ, ಬಹುಮಹಡಿ ಕಟ್ಟಡಗಳು ತಲೆ ಎತ್ತು ತ್ತಿವೆ. ಇವುಗಳ ಮಧ್ಯೆ ಪ್ರಾಚೀನ ಕಟ್ಟಡಗಳು ವಿನಾಶದ ಅಂಚಿನಲ್ಲಿವೆ. ಅವುಗಳನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ನಾವು ಇಂತಹ ವಿಶಿಷ್ಟ ಜನಜಾಗೃತಿ ಕಾರ್ಯಕ್ರಮ ಹಮ್ಮಿ ಕೊಂಡಿದ್ದೇವೆ. ಚಿತ್ರಕಲಾವಿದರು ಯಾವುದೋ ಭ್ರಮೆಯಲ್ಲಿರುವವರು ಎಂಬ ಭಾವನೆ ಒಂದೆಡೆಯಾದರೆ, ಅವರು ಸಮಾಜದ ಸಮಸ್ಯೆಗೆ ಸ್ಪಂದಿ ಸುತ್ತಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಅವುಗಳನ್ನು ಹೋಗಲಾಡಿಸಬೇಕು ಮತ್ತು ಯಾವ ಬೆಲೆ ತೆತ್ತಾದರೂ ಸರಿ ಈ ಕಟ್ಟಡವನ್ನು ಪ್ರಾಚೀನ ಕಟ್ಟಡವನ್ನಾಗಿ ಉಳಿಸಬೇಕು ಎಂಬ ನಿಟ್ಟಿನಲ್ಲಿ ನಾವು ಇಂದು ಇಲ್ಲೇ ಕುಳಿತು ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯನ್ನು ನಮ್ಮ ನಮ್ಮ ದೃಷ್ಟಿಕೋನದಲ್ಲಿ ಚಿತ್ರಿಸಿದ್ದೇವೆ. ಭವಿಷ್ಯದಲ್ಲಿ ಇದು ಆರ್ಟ್ ಗ್ಯಾಲರಿಯಾದರೆ ನಾವು ರಚಿಸಿದ ಈ ಎಲ್ಲಾ ಚಿತ್ರಗಳನ್ನು ಸರಕಾರಕ್ಕೆ ಅರ್ಪಿಸಲಿದ್ದೇವೆ ಎಂದು ಚಿತ್ರ ಕಲಾವಿದೆಯರಾದ ವೀಣಾ ಮಧುಸೂದನ್, ರಚನಾ ಸೂರಜ್, ಸಪ್ನಾ ನೊರೊನ್ಹ, ಗೌರಿ ಮಲ್ಯ ಹೇಳಿದರು.
ಮಂಗಳೂರಿನಲ್ಲೊಂದು ಸರಕಾರಿ ಆರ್ಟ್ ಗ್ಯಾಲರಿ ಮತ್ತು ಮ್ಯೂಸಿಯಂ ತೆರೆಯಬೇಕು ಎಂಬ ನಿಟ್ಟಿನಲ್ಲಿ ಕಳೆದ ಹಲವು ವರ್ಷ ಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಹಾಲಿ ಜಿಲ್ಲಾಧಿಕಾರಿ ಜಿಲ್ಲೆಗೆ ಆಗಮಿಸಿದೊಡನೆ ಮತ್ತೆ ಈ ಬಗ್ಗೆ ಬೇಡಿಕೆ ಸಲ್ಲಿಸಿದ್ದೆವು. ಅಲ್ಲದೆ ಈ ಕಟ್ಟಡವನ್ನು ಕೆಡವದೆ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಹಳೆಯ ಶೈಲಿಗೆ ಧಕ್ಕೆಯಾಗದಂತೆ ನವೀಕರಿಸಲು ಮನವಿ ಮಾಡಿದ್ದೆವು. ಅದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಮುಡಾ ಅಧಿಕಾರಿಗಳ ಸಮ್ಮುಖ ಕಲಾವಿದರ ಸಭೆ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ನಾವೆಲ್ಲ ಸೇರಿ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡವನ್ನು ಚಿತ್ರಿಸಿದ್ದೇವೆ. ಇದನ್ನು ಯಾವ ಕಾರಣಕ್ಕೂ ಕೆಡವಬಾರದು ಮತ್ತು ಸರಕಾರಿ ಆರ್ಟ್ ಗ್ಯಾಲರಿಯಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದೇವೆ. ಸಾಂಕೇತಿಕವಾಗಿ ನಾವಿಂದು ಮಾವಿನ ಎಲೆಯ ತೋರಣ ಕಟ್ಟುವ ಮೂಲಕ ಶೀಘ್ರ ಈ ಕಟ್ಟಡ ಸಾರ್ವಜನಿಕರ ಸೇವೆಗೆ ಲಭಿಸಲಿ ಎಂದು ಆಶಿಸುವ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ಗಣೇಶ ಸೋಮಯಾಜಿ.
ಚಿತ್ರಕಲಾ ಶಿಬಿರವನ್ನು ಚಿತ್ರ ರಚಿಸುವ ಮೂಲಕ ಉದ್ಘಾಟಿಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಪ್ರಾಚೀನ ಕಟ್ಟಡ ಉಳಿಸಬೇಕು ಎಂಬ ಬೇಡಿಕೆ ಕಲಾವಿದರದ್ದಾಗಿದೆ. ಸರಕಾರದ ಜೊತೆ ಚರ್ಚಿಸಿ ನಿಯಮಾನುಸಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದರು.