ಮಂಗಳೂರು, ಫೆ.19 : ಸಮಾ ಜೋತ್ಸವದ ಹೆಸರಿನಲ್ಲಿ ಯಾರೇ ಕಾನೂನು ಉಲ್ಲಂಘಿಸಿದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ. ನಗರದ ನೆಹರೂ ಮೈದಾನದಲ್ಲಿ ಮಾ.1ರಂದು ನಡೆಯುವ ಹಿಂದೂ ಸಮಾಜೋತ್ಸ ವದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವ ಬಳಿಕ ಉಪ್ಪಿನಂಗಡಿ ಸಮೀಪದ ಕರಾಯದಲ್ಲಿ ಅಹಿತಕರ ಘಟನೆ ನಡೆದಿತ್ತು. ಭವಿಷ್ಯದಲ್ಲಿ ಅಂತಹ ಯಾವ ದುರ್ಘಟನೆಯೂ ನಡೆಯಬಾರದು ಎಂಬ ನಿಟ್ಟಿನಲ್ಲಿ ಜಿಲ್ಲಾಡಳಿತ ನೀತಿಯೊಂದನ್ನು ರೂಪಿಸಲಿದೆ. ಅದಕ್ಕೆ ಪೂರಕ ಎಂಬಂತೆ ಮಾ.1ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವದ ಬಳಿಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತದ ಸಹಕಾರದೊಂದಿಗೆ ಪೊಲೀಸ್ ಇಲಾಖೆ ಸಾಕಷ್ಟು ಪೂರ್ವ ಸಿದ್ಧತೆ ನಡೆಸುತ್ತಿದೆ ಎಂದು ರಮಾನಾಥ ರೈ ತಿಳಿಸಿದರು.
‘ಹೊರ ಜಿಲ್ಲೆಯಿಂದ ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ಕರೆಸಲು,ಅಲ್ಲಲ್ಲಿ ನಾಕಾಬಂದಿ ಮಾಡಲು, ಸೂಕ್ಷ್ಮ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಮತ್ತು ಪೊಲೀಸರನ್ನು ನಿಯುಕ್ತಿಗೊಳಿಸಲು, ಸೆಕ್ಟರ್ ಮ್ಯಾಜಿಸ್ಟ್ರೇಟ್ ನೇಮಿಸಲು, ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಶಾಂತಿ ಸಭೆ ನಡೆಸಲು ಸೂಚನೆ ನೀಡಲಾಗಿದೆ. ಅಲ್ಲದೆ ಫೆ.27 ಅಥವಾ 28ರಂದು ಹಿಂದೂ ಮತ್ತು ಮುಸ್ಲಿಮ್ ಸಮಾಜದ ಪ್ರಮುಖರ ಸಭೆ ಕರೆಯಲು ನಿರ್ಧರಿಸಲಾಗಿದೆ. ಅದಕ್ಕೂ ಮೊದಲು ಬೆಂಗಳೂರಿನಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ’ ಎಂದ ಸಚಿವ ರೈ, ಈಗಾಗಲೇ ಸಮಾಜೋತ್ಸವದ ಸಂಘಟಕರಿಂದ ಪ್ರಮುಖ ಭಾಷಣಕಾರರ ಪಟ್ಟಿ ಪಡೆದುಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದು, ಮತೀಯ ಭಾವನೆಯನ್ನು ಕೆರಳಿಸುವಂತಹ ಮಾತಿಗೆ ಕಡಿವಾಣ ಹಾಕಲು, ಕೋಮು ಪ್ರಚೋದಿತ ಬ್ಯಾನರ್, ಫ್ಲೆಕ್ಸ್‌ಗಳನ್ನು ನಿಯಂತ್ರಿಸಲು, ನಿಗದಿತ ಸಮಯಕ್ಕೆ ಕಾರ್ಯಕ್ರಮ ಆರಂಭಿಸಿ ಸಂಜೆ 5 ಗಂಟೆಗೆ ಮುಗಿಸಲು ಸಂಘಟಕರಿಗೆ ತಿಳಿಸಲಾಗಿದೆ ಎಂದರು.ಜಿಲ್ಲೆಯ ಜನತೆ ಶಾಂತಿ ಬಯ ಸುತ್ತಿದ್ದಾರೆ. ಅದನ್ನು ಮುರಿಯಲು ಅವಕಾಶ ನೀಡುವುದಿಲ್ಲ. ಕಾನೂನನ್ನು ಯಾರೇ ಉಲ್ಲಂಘಿಸಿ ದರೂ ಕಠಿಣ ಕ್ರಮ ಜರಗಿಸಲಾ ಗುವುದು ಎಂದು ಸಚಿವ ರೈ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಪಶ್ಚಿಮ ವಲಯ ಐಜಿಪಿ ಅಮೃತಪಾಲ್, ಪೊಲೀಸ್ ಕಮಿಷನರ್ ಎಸ್.ಮುರುಗನ್, ಜಿಲ್ಲಾ ಎಸ್ಪಿ ಡಾ.ಎಸ್.ಡಿ.ಶರಣಪ್ಪ ಉಪಸ್ಥಿತರಿದ್ದರು.