ಕನ್ನಡ ವಾರ್ತೆಗಳು

ಗಂಗೊಳ್ಳಿ: ಅಂಗಡಿಗೆ ಬೆಂಕಿ ಹಾಗೂ ಗಲಭೆ ಪ್ರಕರಣ; ಮುಂದುವರಿದ 144 ಸೆಕ್ಷನ್; 30 ಜನರ ಬಂಧನ, ಹಲವರ ವಿಚಾರಣೆ

Pinterest LinkedIn Tumblr

Gangolli_Communal_Issue_2015 (11)

ಕುಂದಾಪುರ: ಗಂಗೊಳ್ಳಿಯಲ್ಲಿ ಮಂಗಳವಾರ ತಡರಾತ್ರಿ (ಬುಧವಾರ ಮುಂಜಾನೆ) 2.30 ಗಂಟೆಗೆ ವೆಂಕಟೇಶ ಶೈಣೈ ಎನ್ನುವರ ಅಂಗಡಿ, ಗೋದಾಮು ಹಾಗೂ ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿಯಿಟ್ಟ ಘಟನೆ ಹಾಗೂ ಬುಧವಾರ ಬೆಳಿಗ್ಗೆ ನಡೆದ ಬಂದ್ ಬಳಿಕ ನಡೆದ ಗುಂಪು ಘರ್ಷಣೆಯ ತರುವಾಯ ಹೇರಲಾಗಿದ್ದ 144 ಸೆಕ್ಷನ್ ಅನ್ವಯ ನಿಷೇದಾಜ್ಞೆ ಶುಕ್ರವಾರವೂ ಮುಂದುವರಿದಿದೆ.

ಬುಧವಾರ ಮಧ್ಯಾಹ್ನದ ಬಳಿಕ ಕುಂದಾಪುರ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್ ಆದೇಶದಂತೆ ಗಂಗೊಳ್ಳಿ, ತ್ರಾಸಿ ಹಾಗೂ ಗುಜ್ಜಾಡಿ ಪ್ರದೇಶದಲ್ಲಿ ೨ನೇ ದಿನವಾದ ಗುರುವಾರವೂ ಸಂಪೂರ್ಣವಾಗಿ ನಿಷೇದಾಜ್ಞೆ ಜಾರಿಯಲ್ಲಿದ್ದು ಗಂಗೊಳ್ಳಿ ಶಾಂತ ಸ್ಥಿತಿಗೆ ತಲುಪಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜ.21 ರಿಂದ ಜ.25 ಮಧ್ಯರಾತ್ರಿಯವರೆಗೂ ಈ ನಿಷೇದಾಜ್ಞೆ ಜಾರಿಯಲ್ಲಿರುತ್ತದೆ.

Gangolli_Communal_Issue_2015 (27) Gangolli_Communal_Issue_2015 (28) Gangolli_Communal_Issue_2015 (25)

3೦ ಜನರ ಬಂಧನ, ಹಲವರ ವಿಚಾರಣೆ: ಗಂಗೊಳ್ಳಿಯಲ್ಲಿ ಬುಧವಾರ ಬೆಳಿಗ್ಗೆ ನಡೆದ ಗುಂಪುಘರ್ಷಣೆಗೆ ಸಂಬಂಧಿಸಿದಂತೆ ಹಲವು ಕಾಯ್ದೆಯನ್ವಯ 30 ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇವರುಗಳಿಗೆ ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. 30 ಮಂದಿ ಆರೋಪಿಗಳ ಪೈಕಿ 29 ಮಂದಿ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಹಾಗೂ ಓರ್ವನನ್ನು ಹಿರಿಯಡಕ ಸಬ್‌ಜೈಲಿಗೆ ಕಳಿಸಲಾಗಿದೆ. ಇನ್ನು ಹಲವರನ್ನು ಠಾಣೆಗೆ ಕರೆಸಿ ವಿಚಾರಣೆಯನ್ನು ನಡೆಸಲಾಗಿದ್ದು ತನಿಖೆ ತೀವೃಗೊಂಡಿದೆ ಎನ್ನಲಾಗಿದೆ. ಇನ್ನು ಘಟನೆ ಬಗ್ಗೆ ಕೂಲಂಕುಷ ತನಿಖೆ ನಡೆಸುವಂತೆ ಹಾಗೂ ನಿರಪರಾಧಿಗಳಿಗೆ ಶಿಕ್ಷೆಯಾಗಬಾರದೆಂದು ಎರಡು ಕೋಮಿನ ಮುಖಂಡರು ಉಡುಪಿ ಎಸ್ಪಿ ಅವರಿಗೆ ಮನವಿ ನೀಡಿದ್ದಾರೆ ಎನ್ನಲಾಗಿದೆ.

ಮಹತ್ವದ ಸುಳಿವು?: ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿಯ ಭಾಗದಲ್ಲಿ ವೆಲ್ಡಿಂಗ್ ವೃತ್ತಿ ಮಾಡಿಕೊಂಡಿರುವ ವ್ಯಕ್ತಿಯೋರ್ವನ ಬಗ್ಗೆ ಮಹತ್ವದ ಸುಳಿವು ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿದು ಬಂದಿದ್ದು ಆತ ಕಣ್ಮರೆಯಾಗಿದ್ದಾನೆನ್ನಲಾಗಿದೆ. ಆದರೇ ಆತ ಕೃತ್ಯಕ್ಕೆ ಬಳಸಿದ್ದನೆನ್ನಲಾದ ಮಾರುತಿ ಕಾರೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಹಾಗೂ ಈ ವ್ಯಕ್ತಿಗೆ ಸಹಕಾರ ನೀಡಿದ ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯಿದೆ.

ಮುಂದುವರಿದ ಪೊಲೀಸ್ ಬಂದೋಬಸ್ತ್: ಉಡುಪಿ ಎಸ್ಪಿ ಅಣ್ಣಾಮಲೈ, ಹೆಚ್ಚುವರಿ ಎಸ್ಪಿ ಸಂತೋಷಕುಮಾರ್, ಕುಂದಾಪುರ ಡಿವೈ‌ಎಸ್ಪಿ ಮಂಜುನಾಥ ಶೆಟ್ಟಿ, ಭಟ್ಕಳ ಡಿವೈ‌ಎಸ್ಪಿ ಅಯ್ಯಪ್ಪ, ಕುಂದಾಪುರ ವೃತ್ತನಿರೀಕ್ಷಕ ದಿವಾಕರ್ ಪಿ.ಎಂ, ಬೈಂದೂರು ವೃತ್ತನಿರೀಕ್ಷಕ ಸುದರ್ಶನ್, ಡಿಸಿ‌ಐಬಿ ಇನ್ಸ್‌ಪೆಕ್ಟರ್ ಜೈಶಂಕರ್, ಗಂಗೊಳ್ಳಿ ಠಾಣೆಯ ಉಪನಿರೀಕ್ಷಕ ಸುಬ್ಬಣ್ಣ ಸೇರಿದಂತೆ ವಿವಿಧ ಠಾಣೆಯ ಉಪನಿರೀಕ್ಷಕರು ಸ್ಥಳದಲ್ಲಿ ಮೊಕ್ಕಾಂ ಹೂಡಿ ತನಿಖೆ ನಡೆಸುತಿದ್ದಾರೆ. ಅಹಿತಕರ ಘಟನೆಗಳು ನಡೆಯದಂತ ಮುಂಜಾಗೃತಾ ಕ್ರಮವಾಗಿ ಸ್ಥಳದಲ್ಲಿ ನೂರೈವತ್ತಕ್ಕೂ ಅಧಿಕ ಪೊಲೀಸರನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಕೆ‌ಎಸ್‌ಆರ್‌ಪಿ ತುಕಡಿಗಳು ಹಾಗೂ ಡಿ.ಎ.ಆರ್. ವಾಹನಗಳು ಸ್ಥಳದಲ್ಲಿ ಬೀಡುಬಿಟ್ಟಿದೆ.

ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಘಟನೆಗಳು ಸಂಭವಿಸುವ ಮೊದಲು ಹಾಗೂ ಸಂಭವಿಸಿದ ಬಳಿಕ ನಿಷೇದಾಜ್ಞೆ ಜಾರಿಗೊಳಿಸಿ, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ದ ಕಠಿಣ ಕ್ರಮ ಕೈಗೆಳ್ಳುತ್ತೇವೆ. ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಯಾವುದೇ ರಾಜಕೀಯಕ್ಕೂ ಆಸ್ಪದ ನೀಡುವುದಿಲ್ಲ.
– ಕೆ. ಅಣ್ಣಾಮಲೈ (ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ)

Write A Comment