ಕನ್ನಡ ವಾರ್ತೆಗಳು

ಜೀವನದಲ್ಲಿ ಆದರ್ಶ ಗುರಿ ಬೇಕು – ಶ್ರೀ ರಂಭಾಪುರಿ ಜಗದ್ಗುರುಗಳು

Pinterest LinkedIn Tumblr

swamiji_news_photo

ಬೆಂಗಳೂರು,ಜ.03: ಮಾನವ ಜೀವನದಲ್ಲಿ ಆದರ್ಶ ಗುರಿಯಿರಬೇಕು. ಗುರಿಯಿಲ್ಲದ ಮತ್ತು ಗುರಿಸಾಧಿಸದ ಬದುಕು ವ್ಯರ್ಥ. ಧರ್ಮ, ಅರ್ಥ, ಕಾಮ ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಾಧಿಸಿದಾಗ ಜೀವನ ಸಾರ್ಥಕಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಅವರು ಬಸವನಗುಡಿ ಶ್ರೀ ನಿಜಗುಣ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಗುರುವಂದನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಯಾವುದೇ ಧರ್ಮವಿರಲಿ ಅದು ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಪ್ರಾಮುಖ್ಯತೆ ಕೊಟ್ಟಿದೆ. ಮಾತು ಮನ ಕೃತಿ ಬಾಳಿನಲ್ಲಿ ಅಳವಡಿಸಿಕೊಂಡು ನಡೆದರೆ ಜೀವನ ಸಾಫಲ್ಯಗೊಳ್ಳುತ್ತದೆ. ವ್ಯಕ್ತಿ ಶಕುನಿಯಾದರೆ ಸಮಾಜ ಕುರುಕ್ಷೇತ್ರವಾಗುತ್ತದೆ. ವ್ಯಕ್ತಿ ವೀರಭದ್ರನಾದರೆ ಸಮಾಜ ಸುಭದ್ರಗೊಳ್ಳುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವಬಂಧುತ್ವದ ಆದರ್ಶ ಮೌಲ್ಯಗಳನ್ನು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಪ್ರತಿಪಾದಿಸಿದ್ದಾರೆ. ಧರ್ಮ, ನೀತಿ, ದಕ್ಷತೆ, ಒಳ್ಳೆಯ ಮಾತು ಅನುಸರಿಸಿ ಬಾಳಿದರೆ ಯಶಸ್ಸು ಸುಲಭ ಸಾಧ್ಯವಾಗುತ್ತದೆ. ಈ ನಾಡಿನ ಧರ್ಮ ಪೀಠಗಳು ಮತ್ತು ಮಠಗಳು ಉತ್ಕೃಷ್ಠ ಭಾರತೀಯ ಸಂಸ್ಕೃತಿಯನ್ನು ಜನಮನಕ್ಕೆ ಮುಟ್ಟಿಸಿದ್ದಾರೆ. ಅಂಥ ಮಠಗಳ ಮೇಲೆ ನಿಯಂತ್ರಣ ಮಾಡಲು ಸರ್ಕಾರ ವಿಧೇಯಕ ಮಂಡಿಸಿದ್ದು ಒಳ್ಳೆಯ ಬೆಳವಣಿಗೆಯಲ್ಲ. ನಾಡಿನೆಲ್ಲೆಡೆ ಎಲ್ಲ ಮಠಾಧೀಶರು ತಮ್ಮ ಅಕ್ರೋಶ ವ್ಯಕ್ತಪಡಿಸಿದಾಗ ವಿಧೇಯಕ ವಾಪಸ್ ಪಡೆಯಲಾಗುವುದು ಎಂದ್ಹೇಳಿರುವುದನ್ನು ಸ್ವಾಗತಿಸುತ್ತೇವೆ. ಧಾರ್ಮಿಕ ರಂಗದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು ಎಂದರು.

ಮಾಜಿ ಕೇಂದ್ರ ಸಚಿವ ಅಪ್ಪಟ ಗಾಂಧೀವಾದಿ ಎಂ.ವಿ.ರಾಜಶೇಖರನ್ ಸಮಾರಂಭ ಉದ್ಘಾಟಿಸಿ ಮಾತನಾಡಿ ಈ ನಾಡಿನ ಮಣ್ಣಿನ ಕಣಕಣದಲ್ಲೂ ದೈವತ್ವ ಅಡಗಿದೆ. ಭಗವಂತನ ಕರುಣೆ ಗುರುಮಾರ್ಗದರ್ಶನ ಇಲ್ಲದೇ ಇದ್ದರೆ ಬಾಳು ವ್ಯರ್ಥ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಮತ್ತು ರಾಷ್ಟ್ರಭಕ್ತಿ ಮೈಗೂಡಿಸಿಕೊಂಡು ಬಾಳಬೇಕೆಂದರು.ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ ಕಂಬಾರ ಅವರಿಗೆ ರೇಣುಕ ಬಸವ ವೇದಿಕೆಯಿಂದ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಕಂಬಾರ ಅವರು ಸಾಹಿತ್ಯ ಸಂಸ್ಕೃತಿಯಿಂದ ಕಂಗೊಳಿಸುತ್ತಿರುವ ಈ ನಾಡಿನ ಗ್ರಾಮೀಣ ಜನತೆ ಬೆಳೆದು ಬಂದಿರುವ ಧಾರ್ಮಿಕ ಆಚರಣೆಗಳ ಜೊತೆಗೆ ಪಾರಂಪರಿಕವಾಗಿ ಬೆಳೆದು ಬಂದಿರುವ ಜಾನಪದ ಕಲೆ, ನಾಟಕ, ಯಕ್ಷಗಾನ, ಗೊಂಬೆಯಾಟದಂತಹ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ಗ್ರಾಮೀಣ ಕಲೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.

ಬಸವನಗುಡಿ ಶಾಸಕರು ಎಲ್.ಎ.ಸುಬ್ರಹ್ಮಣ್ಯ, ನ್ಯಾಯವಾದಿ ಪ್ರಮೀಳಾ ನೇಸರ್ಗಿ, ಬಿ.ಬಿ.ಎಂ.ಪಿ.ಸದಸ್ಯರು ಎನ್. ಗೋವಿಂದರಾಜ್, ಖೋ.ವಾ.ರೇವಣ್ಣ ಮುಖ್ಯ‌ಅತಿಥಿಗಳಾಗಿ ಭಾಗವಹಿಸಿದ್ದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಸಮಾರಂಭದಲ್ಲಿ ರಾಜಾಪುರ, ನಾಗಲಾಪುರ, ಕುಪ್ಪೂರು. ಜಂಗಮಮಠ ಶ್ರೀಗಳು ಪಾಲ್ಗೊಂಡಿದ್ದರು.
ರೇಣುಕ ಬಸವ ವೇದಿಕೆ ಅಧ್ಯಕ್ಷ ಬಿ.ಎಸ್. ನಾಗರಾಜ್ಜ ಬಿಜ್ಜಳ್ಳಿ ಸರ್ವರನ್ನೂ ಸ್ವಾಗತಿಸಿದರು. ಇದಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಅಲಂಕೃತ ಸಾರೋಟದಲ್ಲಿ ಕಳಸ ಕನ್ನಡಿ, ವೀರಗಾಸೆ, ಡೊಳ್ಳು, ಪೂರ್ಣ ಕುಂಭದೊಂದಿಗೆ ಮೆರವಣಿಗೆಯ ಮೂಲಕ ಸಮಾರಂಭಕ್ಕೆ ಬರಮಾಡಿಕೊಂಡರು. ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಆಶೀರ್ವಾದ ಪಡೆದರು.

Write A Comment