ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಬೆಂಗಳೂರಿನ ಗುಪ್ತಚರ ವಿಭಾಗಕ್ಕೆ ವರ್ಗಾವಣೆಗೊಂಡಿದ್ದು ಕಾರ್ಕಳ, ಕುಂದಾಪುರ, ಉಡುಪಿಯಲ್ಲಿ ಎಎಸ್ಪಿಯಾಗಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ಪದೋನ್ನತಿ ಹೊಂದಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.
ಅಣ್ಣಾಮಲೈ ಅವರು ಮೂಲತಃ ಕೊಯಮತ್ತೂರಿನವರು. ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಂಬಿಎ (ಹಣಕಾಸು) ಪದವೀಧರರಾದ ಇವರು 2011ರ ಐಪಿಎಸ್ ತಂಡದವರು.
ಶಿಸ್ತಿನ, ಪ್ರಾಮಾಣಿಕ ಅಧಿಕಾರಿ ಎಂದು ಹೆಸರು ಪಡೆದಿರುವ ಅಣ್ಣಾಮಲೈ ಅವರು ಕಾರ್ಕಳ ಉಪವಿಭಾಗದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದರು. ಪೊಲೀಸರು ಜನಸ್ನೇಹಿಯಾಗಿದ್ದಾಗ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ತೋರಿಸಿದ್ದರು. ಇದೇ ಅವಧಿಯಲ್ಲಿ ಇವರ ಮಾರ್ಗದರ್ಶನದಲ್ಲಿ ಕಾರ್ಕಳ, ಪಡುಬಿದ್ರಿ, ಕಾಪು ಪೊಲೀಸ್ ಠಾಣೆಗಳು ಮಾದರಿ ಠಾಣೆ ಎಂದು ಪರಿಗಣನೆ ಗಳಿಸಿದವು. ಇನ್ನು ರಾಜೇಂದ್ರಪ್ರಸಾದ್ ಉಡುಪಿಗೆ ಬಂದು ಕೇವಲ ನಾಲ್ಕೂವರೆ ತಿಂಗಳಲ್ಲಿಬೆಂಗಳೂರಿಗೆ ವರ್ಗವಾಗಿದ್ದಾರೆ.