ಸುಬ್ರಹ್ಮಣ್ಯ, ಡಿ.28: ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ನಡೆಯುತ್ತಿದ್ದ ಎಂಜಲೆಲೆಯ ಮೇಲೆ ಉರುಳಾಡುವ ಮಡೆಸ್ನಾನ ಆಚರಣೆಗೆ ಶನಿವಾರ ಕೊನೆಗೂ ಮುಕ್ತಿ ದೊರೆತಿದೆ. ಕಿರು ಷಷ್ಠಿ ಹಿನ್ನೆಲೆಯಲ್ಲಿ ದೇವಳದ ಹೊರಾಂಗಣದಲ್ಲಿ ಇಂದು ಎಡೆಸ್ನಾನ ಮಾತ್ರ ನಡೆಯಿತು.
ಈ ಮೊದಲಿದ್ದಂತೆ ಈ ದಿನ ಬ್ರಾಹ್ಮಣರು ಉಂಡ ಎಂಜೆಲೆಲೆಯ ಮೇಲೆ ಮಡೆಸ್ನಾನ ನಡೆಯದೆ ದೇವ ಳದ ಹೊರಾಂಗಣದಲ್ಲಿ ಗೋವುಗಳು ಉಂಡ ಎಲೆಯ ಮೇಲೆ 62 ಮಂದಿ ಉರುಳಾಡಿ ಎಡೆಸ್ನಾನ ನಿರ್ವಹಿಸಿದರು.
ಧಾರ್ಮಿಕ ದತ್ತಿ ಆಯುಕ್ತರ ಅದೇಶ ದಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳ ದಲ್ಲಿಂದು ಮಧ್ಯಾಹ್ನ ಮಹಾಪೂಜೆ ಬಳಿಕ ಮಡೆಸ್ನಾನದ ಬದಲು ಎಡೆ ಸ್ನಾನ ನಡೆಯಿತು. ಶೈವಾಗಮ ಪಂಡಿತ ವೆ.ಮೂ. ಶಿವಕುಮಾರ ದೀಕ್ಷಿತ್ ಹಾಗೂ ಪಾಂಚರಾತ್ರ ಪಂಡಿತ ವೆ.ಮೂ. ವಿಜಯಕುಮಾರ್ ಕ್ಷೇತ್ರ ಕ್ಕಾಗಮಿಸಿ, ಎಡೆಸ್ನಾನದ ಕುರಿತು ಮಾರ್ಗದರ್ಶನ ನೀಡಿದರು.
ಅದರಂತೆ ಇಂದು ದೇವಳದ ಹೊರಾಂಗಣದಲ್ಲಿ ಸುತ್ತಲಾಗಿ ಒಟ್ಟು 432 ಬಾಳೆ ಎಲೆಗಳನ್ನು ಹಾಕಿ ಅದರಲ್ಲಿ ಎಲ್ಲಾ ಬಗೆಯ ಪದಾರ್ಥಗಳೊಂದಿಗೆ ಊಟ ಬಡಿಸಲಾಯಿತು. ಬಳಿಕ ದೇವಳದ ಏಳು ಗೋವುಗಳಿಂದ ಈ ಅನ್ನವನ್ನು ತಿನ್ನಿಸಲಾಯಿತು. ಬಳಿಕ ಅದರಲ್ಲಿ ಸುಮಾರು 62 ಮಂದಿ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಎಡೆಸ್ನಾನ ನಿರ್ವಹಿಸಿದರು. ಇದ ರೊಂದಿಗೆ ವಿವಾದಕ್ಕೆ ಕಾರಣವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ಮಡೆ ಸ್ನಾನ ಆಚರಣೆ ಎಡೆಸ್ನಾನವಾಗಿ ರೂಪಾಂತರಗೊಂಡಂತಾಯಿತು.
ಮಡೆಸ್ನಾನ ಅನಿಷ್ಟ ಪದ್ಧತಿ ಇದನ್ನು ನಿಷೇಧಿಸಬೇಕು ಎಂದುನಿಡುಮಾಮಿಡಿ ಸ್ವಾಮೀಜಿ, ಪ್ರಗತಿಪರರು, ಬುದ್ಧಿಜೀವಿ ಗಳು ಕಳೆದ ಕೆಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಬಳಿಕ ವಿವಾದಗಳ ನಡುವೆಯೇ ಕಳೆದ ನ.19ರಂದು ಯಥಾಸ್ಥಿತಿಯಂತೆ ಮಡೆಸ್ನಾನ ಮುಂದುವರಿಸಲು ಆದೇಶಿಸಿತ್ತು. ಅದ ರಂತೆ ಚಂಪಾ ಷಷ್ಠಿಯಂದು ಸುಬ್ರಹ್ಮಣ್ಯ ದೇವಳದಲ್ಲಿ ಮಡೆಸ್ನಾನ ನಡೆದಿತ್ತು. ಆ ಬಳಿಕ ಮಡೆಸ್ನಾನ ಆಚರಣೆಗೆ ಸುಪ್ರೀಂ ಕೋರ್ಟ್ ಡಿ.12ರಂದು ತಡೆಯಾಜ್ಞೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಮಡೆಸ್ನಾನ ಎಡೆಸ್ನಾನವಾಗಿ ಹೊಸ ರೂಪದಲ್ಲಿ ಆಚರಿಸಲ್ಪಟ್ಟಿದೆ.
ಬಿಗಿಬಂದೋಬಸ್ತ್ :
ಎಡೆಸ್ನಾನ ನಡೆಸುವ ವೇಳೆ ಯಾವುದೇ ಅಹಿತಕರ ಘಟನೆ ನಡೆ ಯದಂತೆ ಮುಂಜಾಗೃತಾ ಕ್ರಮ ವಾಗಿ ಸುಳ್ಯದ ವೃತ್ತ ನಿರೀಕ್ಷಕ ಸತೀಶ್ರ ನೇತೃತ್ವದಲ್ಲಿ ನೂರಕ್ಕೂ ಅಧಿಕ ಪೊಲೀಸರು ಮತ್ತು ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ದೇವಳದ ಕಾರ್ಯ ನಿರ್ವಹಣಾ ಧಿಕಾರಿ ಎಂ.ನಾಗರಾಜ, ಆಡಳಿತ ಮಂಡಳಿಯವರು ಈ ಸಂದರ್ಭ ಹಾಜರಿದ್ದರು.
ನ್ಯಾಯಾಲಯದ ಆದೇಶ ಉಲ್ಲಂಘನೆ: ಬೆಂಡೋಡಿ
ಸುಬ್ರಹ್ಮಣ್ಯ ದೇವಳದಲ್ಲಿ ಮಡೆಸ್ನಾನಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ ಅದರ ಬದಲಿಗೆ ಎಡೆಸ್ನಾನವನ್ನು ನಡೆಸುವಂತೆ ಆದೇಶ ಹೊರಡಿಸಿಲ್ಲ, ಅಥವಾ ಸೂಚಿಸಿಲ್ಲ. ಸುಪ್ರೀಂಕೋರ್ಟ್ನಲ್ಲಿ ದಾವೆ ತಿರಸ್ಕರಿಸಲ್ಪಟ್ಟು, ಈ ಪ್ರಕರಣವು ರಾಜ್ಯ ಹೈಕೋರ್ಟ್ಗೆ ವರ್ಗಾಯಿಸಿದಾಗ ಅಲ್ಲೂ ಮಡೆಸ್ನಾನಕ್ಕೆ ತಡೆಯಾಜ್ಞೆ ನೀಡಲಾಗಿತ್ತೇ ವಿನಹ ಎಡೆಸ್ನಾನಕ್ಕೆ ನಿರ್ದೇಶನ ನೀಡಿಲ್ಲ. ಆದರೆ ಮಡೆಸ್ನಾನಕ್ಕೆ ಬದಲಾಗಿ ಶನಿವಾರ ಸುಬ್ರಹ್ಮಣ್ಯ ದೇವಳದಲ್ಲಿ ನಡೆದ ಎಡೆಸ್ನಾನ ಭಕ್ತರ ನಂಬಿಕೆಗೆ ವಿರುದ್ಧವಾಗಿದೆ ಹಾಗೂ ನ್ಯಾಯಾಲಯ ಆದೇಶದ ಉಲ್ಲಂಘನೆ ಯಾಗಿದೆ ಎಂದು ಆದಿವಾಸಿ ಬುಡಕಟ್ಟು ಜನಾಂಗದ ರಾಜ್ಯಾಧ್ಯಕ್ಷ ಭಾಸ್ಕರ ಬೆಂಡೋಡಿ ಪತ್ರಿಕೆಗೆ ತಿಳಿಸಿದ್ದಾರೆ.