ಕನ್ನಡ ವಾರ್ತೆಗಳು

ಅಕ್ರಮ ಗೋ ಸಾಗಾಟ :ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Pinterest LinkedIn Tumblr

Cattle_Mohammd_salem

ಮೂಡುಬಿದ್ರೆ,ಡಿ.27 : ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.ಕಾರುಗಳನ್ನು ಕದ್ದು ಅದರಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಉಳ್ಳಾಲ ಮಿಲ್ಲತ್ ನಗರದ ಮಹಮ್ಮದ್ ಸಲೀಂ ಯಾನೆ ಸಿರಿ ಸಲೀಂ ಎಂದು ಗುರುತಿಸಲಾಗಿದೆ.

ಈತನ ವಿರುದ್ಧ ಉಳ್ಳಾಲ, ಮಂಗಳೂರು ಉತ್ತರ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದನ ಕಳ್ಳ ಸಾಗಾಟ ಇನ್ನಿತರ ಅಪರಾಧ ಪ್ರಕರಣಗಳು ದಾಖಲಾಗಿವೆ. ಡಿ. 1ರಂದು ಪ್ರಾಂತ್ಯ ಗ್ರಾಮದ ಪೇಪರ್‍ಮಿಲ್ ಬಳಿ ಬಂಟ್ವಾಳ ಕಡೆಯಿಂದ ಮೂಡುಬಿದ್ರೆಯತ್ತ ಬರುತ್ತಿದ್ದ ಬೆಂಗಳೂರು ನೋಂದಾಣಿ ಸಂಖ್ಯೆಯ ಆಲ್ಟೋ ಕಾರು ಪೇಪರ್‍ಮಿಲ್ ಸಮೀಪ ಅತಿ ವೇಗದಲ್ಲಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿತ್ತು. ಇದನ್ನು ಕಂಡು ಸ್ಥಳೀಯರು ಕಾರಿನೆಡೆಗೆ ಬಂದಾಗ ಕಾರಿನಲ್ಲಿದ್ದ ಮೂವರು ಆರೋಪಿಗಳು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು.

ಕಾರಿನ ಚಾಲಕನ ಹಿಂಬದಿ ಸೀಟಿನ ಮಧ್ಯೆ ದನವೊಂದನ್ನು ಅಮಾನವೀಯ ರೀತಿಯಲ್ಲಿ ತುಂಬಿಸಲಾಗಿರುವುದು ಸಾರ್ವಜನಿಕರಿಗೆ ಕಂಡುಬಂದಿದೆ. ಕಾರಿನೊಳಗೆ ಮಾರಕಾಯುಧಗಳು ಕೂಡ ಪತ್ತೆಯಾಗಿತ್ತು. ತಲೆಮರೆಸಿಕೊಂಡಿದ್ದ ಫಾರೂಕ್, ತಮೀಮ್‍ನಿಗೆ ಪೊಲೀಸರು ಶೋಧ ನಿರತರಾಗಿದ್ದಾರೆ. ಆರೋಪಿಗಳು ಗೋವಾದಿಂದ ಕದ್ದ ಆಲ್ಟೊ ಕಾರಿಗೆ ಕರ್ನಾಟಕದ ನಕಲಿ ನೋಂದಣಿ ಸಂಖ್ಯೆ ಹಾಕಿ ದನ ಕಳ್ಳ ಸಾಗಾಟಕ್ಕೆ ಬಳಸಿಕೊಂಡಿದ್ದರೆನ್ನುವುದು ತನಿಖೆಯಿಂದ ತಿಳಿದುಬಂದಿದೆ.

Write A Comment