ಕನ್ನಡ ವಾರ್ತೆಗಳು

80ನೇ ಅಖಿಲ ಭಾರತ ಕನ್ನಡ ಸಮ್ಮೇಳನದ ಪ್ರಚಾರಕ್ಕೆ ಯುವಕನಿಂದ ಸೈಕಲ್ ಯಾತ್ರೆ

Pinterest LinkedIn Tumblr

cycal_savaari_photo_1

ಬಂಟ್ವಾಳ,ಡಿ.26 : ಸ್ವಾಮಿ ಈ ಬಾರಿಯ ಅಖಿಲಭಾರತ ಕನ್ನಡ ಸಮ್ಮೇಳನ ಹಾವೇರಿಯಲ್ಲಲ್ಲ.. ಹಾಸನದಲ್ಲಿ.. ಅದೂ ಶ್ರವಣ ಬೆಳಗೊಳದಲ್ಲಿ.. ಬರ್‍ತೀರಲ್ವಾ.. ಬನ್ನಿ ಬನ್ನಿ ಎನ್ನುತ್ತಾ ಸೈಕಲ್ ಏರಿ ಸಾಗುತ್ತಿದ್ದಾನೆ ಹಾವೇರಿಯ ಯುವಕ ಗೋಪಾಲ್..  ಕನ್ನಡದ ಧ್ವಜಬಣ್ಣದ ಸೈಕಲ್, ಅದರ ಹಿಂದೆ ಸೈಕಲ್ ರಿಮ್ ಮೇಲೆ 30  ಜಿಲ್ಲೆಗಳನ್ನು ಪ್ರತಿನಿಧಿಸುವ 30  ಕನ್ನಡ ಬಾವುಟ. ಸಣ್ಣದಾದ ನಗು ಮುಖ, ಉದ್ದನೆಯ ಕೂದಲು, ಕನ್ನಡ ಮಯದಂತೆ ಕಾಣುವ ಬಣ್ಣದ ಮಂಕಿ ಕ್ಯಾಪ್, ರುಮಾಲು, ಅಂಗಿ ಪ್ಯಾಂಟ್ ಧರಿಸಿರುವ ಈತನನ್ನು ನಡಿದಾಗಲೇ ಕನ್ನಡದ ಕಂಪು ಪಸರಿಸುವ ಕನ್ನಡಾಭಿಮಾನಿಯ ಸೈಕಲ್ ಎಂದು ಅರಿವಾಗುತ್ತದೆ. ಸೈಕಲ್ ಏರಿ ರಾಜ್ಯ ಸುತ್ತುತ್ತಿರುವ ಯುವಕನ ಹೆಸರು ಗೋಪಾಲ. ವಯಸ್ಸು 24 .

cycal_savaari_photo_2

ಯಾಕಾಗಿ ಈ ತಿರುಗಾಟ..?
ಕಳೆದ ಜ.12 ರಂದು ಹಾವೇರಿಯಿಂದ ಆರಂಭಗೊಂಡ ಈ ಯುವಕನ ಸೈಕಲ್ ಯಾತ್ರೆ 98  ದಿನಗಳಲ್ಲಿ 30  ಜಿಲ್ಲೆಗಳಲ್ಲಿ ಸಂಚರಿಸಿತ್ತು. ಆ ಸಂದರ್ಭದಲ್ಲಿ ಅಖಿಲಭಾರತ ಕನ್ನಡ ಸಮ್ಮೇಳನ ಹಾವೇರಿಯಲ್ಲಿ ಎಂದು ಘೋಷಣೆಯಾಗಿದ್ದ ಹಿನ್ನೆಲೆಯಲ್ಲಿ ಈತ ರಾಜ್ಯಾದ್ಯಂತ ಸೈಕಲ್ ಯಾತ್ರೆ ನಡೆಸಿ ಹಾವೇರಿಯ ಲ್ಲಿ ನಡೆಯುವ 80  ನೇ ಅಖಿಲ ಭಾರತ ಕನ್ನಡ ಸಮ್ಮೇಳನಕ್ಕೆ ಬನ್ನಿ ಎಂದು ಕರೆ ನೀಡಿದ್ದ. ಆದರೆ ವಿವಿಧ ಕಾರಣಗಳಿಂದಾಗಿ ಕನ್ನಡ ಸಮ್ಮೇಳನದ ಸ್ಥಳ ಬದಲಾವಣೆಯಾದ್ದರಿಂದ ಮತ್ತೊಮ್ಮೆ ರಾಜ್ಯ ಸುತ್ತುವ ಅನಿವಾರ್ಯತೆ ಗೋಪಾಲ್ ಗೆ ಬಂದಿದೆ. ಕನ್ನಡದ ಮೇಲಿನ ಪ್ರೀತಿ-ಜಾಗೃತಿಗಾಗಿ ತಾನುಸೈಕಲ್ ನಲ್ಲಿ ಪಯಣಿಸುತ್ತಿದ್ದೇನೆ, ಇದೇನು ನನಗೆ ಕಷ್ಟವಲ್ಲ ಎಂದು ಈತ ನಗುತ್ತಲೇ ಹೇಳುತ್ತಾನೆ.

ಕಳೆದ ನವೆಂಬರ್ 25  ರಿಂದ ಹಾವೇರಿಯಿಂದ ಎರಡನೇ ಹಂತದ ಸೈಕಲ್ ಜಾಥಾ ಆರಂಭಿಸಿರುವ ಗೋಪಾಲ್ 24 ದಿನಗಳಲ್ಲಿ 20  ಜಿಲ್ಲೆಗಳಲ್ಲಿ ಪಯಣ ಬೆಳೆಸಿದ್ದಾರೆ. ಮಂಗಳೂರಿನಿಂದ ಕೊಡಗು ಜಿಲ್ಲೆಗೆ ತೆರಳುವ ದಾರಿ ಮಧ್ಯೆ ಕಲ್ಲಡ್ಕದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಗೋಪಾಲ್ ಕಳೆದ ಪ್ರವಾಸದಲ್ಲಿ ಹಾವೇರಿಯಲ್ಲಿ ಕನ್ನಡ ಸಮ್ಮೇಳನ ಎಂದಿದ್ದೆ, ಆದರೆ ಈಗ ಬದಲಾಗಿದೆ, ಅದಕ್ಕಾಗಿ ಮತ್ತೊಮ್ಮೆ ಪ್ರವಾಸ ಹೊರಟಿದ್ದೇನೆ , ಕಳೆದ ಬಾರಿ ಕಂಡವರೆಲ್ಲಾ ಈ ಬಾರಿ ಮತ್ತೆ ನನ್ನ ಬಳಿ ಬಂದು ಮಾತನಾಡುತ್ತಾರೆ, ಅವರೆಲ್ಲರಿಗೂ ಸಮ್ಮೇಳನಕ್ಕೆ ಆಹ್ವಾನ ನೀಡುತ್ತಾ ಸಾಗುತ್ತಿದ್ದೇನೆ ಎಂದು ವಿವರ ನೀಡಿದರು.

2013 ರಲ್ಲಿ ಪಿಯುಸಿ ವ್ಯಾಸಂಗ ಮುಗಿಸಿದ ಗೋಪಾಲ ಬಳಿಕ ಬೆಂಗಳೂರಿನಲ್ಲಿ ಸಿನಿಮಾ ಸಹನಿರ್ದೇಶನ ತರಬೇತಿಯಲ್ಲಿ ತೊಡಗಿಸಿಕೊಂಡವರು. ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರು. ಯುವಜನರೂ ಕನ್ನಡಕ್ಕೆ ಹತ್ತಿರವಾಗಿದ್ದಾರೆ ಎನ್ನುವುದಕ್ಕೆ ಗೋಪಾಲ್ ಉತ್ತಮ ನಿದರ್ಶನ ಇಲ್ಲವಾಗಿದ್ದರೆ, ಎರಡೆರಡು ಬಾರಿ ರಾಜ್ಯ ಸುತ್ತುವ ಕಾರ್ಯ ನಡೆಸುತ್ತಿರಲಿಲ್ಲ.  ಏನೇ ಇರಲಿ ಕನ್ನಡಕ್ಕಾಗಿ ಸೈಕಲ್ ಏರಿರುವ ಹಾವೇರಿಯ ಯುವಕ ಯುವಸಮುದಾಯಕ್ಕೆ ಮಾದರಿ ಎಂದರೆ ತಪ್ಪಲ್ಲ.

ಚಿತ್ರ; ಕಿಶೋರ್ ಪೆರಾಜೆ

Write A Comment