ಕುಂದಾಪುರ: ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜು ಹಾಗೂ ಸೈಂಟ್ ಮೇರಿಸ್ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಸೋಮವಾರ ಸಂಜೆ ’ವಾಹನ ಜಾಗೃತಿ ಜಾಥಾ’ ಉದ್ಘಾಟನೆಯನ್ನು ಪೊಲೀಸ್ ಉಪವಿಭಾಗದ ಎಎಸ್ಪಿ ಅಣ್ಣಾಮಲೈ ಮಾತನಾಡಿದರು.
ಅಪರಾಧ ತಡೆಯುವ ಹಾಗೂ ಅಪರಾಧ ಘಟನೆಗಳು ನಡೆದಾಗ, ಅಪರಾಧಿಗಳ ವಿರುದ್ದ ಕಾನೂನು ಕ್ರಮವನ್ನು ಜರುಗಿಸುವಲ್ಲಿ, ಪೊಲೀಸ್ ಇಲಾಖೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.
ಪೊಲೀಸ್ ಇಲಾಖೆ ಅಪರಾಧ ತಡೆ ಮಾಸಾಚರಣೆಯನ್ನು ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಡಿ.೨೨ ರಿಂದ ಡಿ.೩೧ ರ ವರೆಗೆ ಕುಂದಾಪುರ ಪೊಲೀಸ್ ವಿಭಾಗದ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಅಪರಾಧ ತಡೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಮಾಹಿತಿ ಕಾರ್ಯಾಗಾರ, ಸಾರ್ವಜನಿಕರೊಂದಿಗೆ ಅಧಿಕಾರಿಗಳ ಸೌಹಾರ್ಧ, ಸಾಕ್ಷ್ಯ ಚಿತ್ರ ಪ್ರದರ್ಶನ ಹಾಗೂ ಕಾರ್ಟೂನ್ ಹಬ್ಬಗಳ ಮೂಲಕ ಜಾಗೃತಿ ಮಾಡಲಾಗುತ್ತಿದೆ.
ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ಕುಮಾರ ಶೆಟ್ಟಿ, ಸೈಂಟ್ ಮೇರಿಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಅಮೃತ್ ಮಾರ್ಟಿನ್ ಅತಿಥಿಗಳಾಗಿದ್ದರು.
ಕುಂದಾಪುರ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ, ಠಾಣಾಧಿಕಾರಿ ನಾಸೀರ್ ಹುಸೇನ್, ಮಹಿಳಾ ಠಾಣಾಧಿಕಾರಿ ಸುಜಾತ ಸಾಲಿಯಾನ್ ಇದ್ದರು.
ಉದ್ಘಾಟನೆಯ ಬಳಿಕ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಪೊಲೀಸರು ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.