ಮಂಗಳೂರು,ಡಿ.22 : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುರಕ್ಷತೆಗಾಗಿ ನಿರ್ಮಿಸಿರುವ ನೂತನ ಏರ್ ಟ್ರಾಫಿಕ್ ಕಂಟ್ರೋಲ್ ಟವರ್ ಹಾಗೂ ತಾಂತ್ರಿಕ ಬ್ಲಾಕ್ ಹೊಸ ವರ್ಷಕ್ಕೆ ಲೋಕಾಪರ್ಣೆಯಾಗುತ್ತಿದೆ. ಸುಮಾರು 18 ಕೋಟಿ ವೆಚ್ಚೆದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ನೂತನವಾಗಿ ನಿರ್ಮಾಣಗೊಂಡಿರುವ ಟವರ್ನ ಕಾರ್ಯಕ್ಷಮತೆ ಬಗ್ಗೆ ತಿಳಿಯಲು ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಟವರ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಸುಮಾರು 18 ಕೋಟಿ ರೂ.ಗಳ ವೆಚ್ಚದಲ್ಲಿ ವಿಮಾನ ನಿಲ್ದಾಣ ಆವರಣದಲ್ಲಿರುವ ಅಗ್ನಿ ಶಾಮಕ ಠಾಣೆ ಹಿಂಭಾಗದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಈ ತಾಂತ್ರಿಕ ಬ್ಲಾಕ್ನಿಂದ ಅತ್ಯಾಧುನಿಕ ಟ್ರಾಫಿಕ್ ಕಂಟ್ರೋಲ್ ಸೌಲಭ್ಯ ಲಭಿಸಲಿದೆ.ವಿಮಾನಗಳ ಆಗಮನ ಮತ್ತು ನಿರ್ಗಮನಕ್ಕೆ ಬೇಕಾದ ಸಂಪೂರ್ಣ ಸೂಚನೆಗಳನ್ನು ಈ ಬ್ಲಾಕ್ನಿಂದ ನೀಡಲಾಗುತ್ತದೆ. ಏರ್ ಟ್ರಾಫಿಕ್ ಕಂಟ್ರೋಲ್ ಟವರ್ನಿಂದ ವಿಮಾನ ಚಲಾಯಿಸುವ ಪೈಲೆಟ್ನ ಜತೆ ವಿಮಾನ ಆಗಮನ-ನಿರ್ಗಮನದ ಕುರಿತು ಮಾತುಕತೆ ನಡೆಸುವ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆ ಅಳವಡಿಸಲಾಗಿದೆ.
ವಿಮಾನಗಳು ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಸಂಪೂರ್ಣ ಚಿತ್ರಣವನ್ನು ಪೈಲೆಟ್ಗೆ ರವಾನಿಸುವ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಸ್ತುತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯವಾಗಿ ಪ್ರತಿ ದಿನ ಸರಾಸರಿ ಸುಮಾರು 40 ವಿಮಾನಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಶಾರ್ಜಾ, ದೋಹಾ, ಬೆಹರಿನ್, ಮಸ್ಕತ್, ಅಬುದಾಬಿಗಳಿಗೆ ವಿಮಾನ ಸೌಲಭ್ಯಗಳಿವೆ. ದೇಶೀಯವಾಗಿ ಬೆಂಗಳೂರು, ಮುಂಬೈ, ಹೈದರಾಬಾದ್, ಗೋವಾ, ಚೆನ್ನೈ, ಕಲ್ಲಿಕೋಟೆಗೆ ವಿಮಾನಯಾನ ಸೌಲಭ್ಯಗಳಿದ್ದು, ಜೆಟ್ ಏರ್ವೇಸ್, ಸ್ಪೈಸ್ಜೆಟ್, ಏರ್ ಇಂಡಿಯಾ ವಿಮಾನಗಳು ಇಲ್ಲಿಂದ ಸಂಚಾರ ನಡೆಸುತ್ತಿವೆ.