ಕನ್ನಡ ವಾರ್ತೆಗಳು

ವರಾಹಿ ಅವಾಂತರ; ಕಲ್ಲು ಬಂಡೆ ಸ್ಪೋಟದ ವೇಳೆ; ಕಲ್ಲು ಸಿಡಿದು ಮನೆಯಲ್ಲಿದ್ದ ಮಹಿಳೆಗೆ ಗಂಭೀರ ಗಾಯ

Pinterest LinkedIn Tumblr

Stone_Blast

(ಸಾಂದರ್ಭಿಕ ಚಿತ್ರ)

ಕುಂದಾಪುರ: ವರಾಹಿ ಕಾಮಗಾರಿಗಾಗಿ ನಡೆಸಲಾದ ಕಲ್ಲು ಬಂಡೆಯ ಸ್ಪೋಟದ ವೇಳೆಯಲ್ಲಿ ಸ್ಪೋಟಕ ಸ್ಥಳದಿಂದ ಸಮೀಪದಲ್ಲಿ ಇದ್ದ ಮನೆಯ ಮುಂಭಾಗದಲ್ಲಿ ಕೆಲಸ ಮಾಡಿಕೊಂಡ ಮಹಿಳೆಯೋರ್ವರಿಗೆ ಸ್ಪೋಟದಿಂದ ಸಿಡಿದ ಕಲ್ಲು ಬಂಡೆಯ ಚೂರುಗಳು ತಗುಲಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಶುಕ್ರವಾರ ಸಂಜೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಐರ್‌ಬೈಲಿನ ಕಿರ್ಲಾಡಿ ಎಂಬಲ್ಲಿ ನಡೆದಿದೆ.

ಘಟನೆಯ ವಿವರ: ಸ್ಪೋಟದಿಂದ ಸಿಡಿದ ಕಲ್ಲು ಬಂಡೆಗಳು ತಗಲಿ ಗಾಯವಾಗಿ ಕುಂದಾಪುರದ ಆಸ್ಪತ್ರೆ ಸೇರಿದ ಮಹಿಳೆಯನ್ನು ಕಿರ್ಲಾಡಿಯ ಕೃಷ್ಣಯ್ಯ ಶೆಟ್ಟಿ ಎನ್ನುವವರ ಪತ್ನಿ ವನಜಾ ಶೆಟ್ಟಿ (38) ವರ್ಷ ಎಂದು ಗುರುತಿಸಲಾಗಿದೆ.

ಐರ್‌ಬೈಲು ಗ್ರಾಮದ ಕಿರ್ಲಾಡಿ ಎಂಬಲ್ಲಿ ವರಾಹಿ ಯೋಜನೆಗೆ ಸಂಬಂಧಿಸಿಂದೆ ಕಿ.ಮೀ ೧೧ ರಲ್ಲಿ ಕಾಲುವೆ ಕಾಮಗಾರಿಗಳು ನಡೆಯುತ್ತಿದ್ದವು. ಕಳೆದ ಕೆಲವು ದಿನಗಳಿಂದ ಕಾಮಗಾರಿಗಾಗಿ ಸ್ಥಳದಲ್ಲಿದ್ದ ಕಲ್ಲು ಬಂಡೆಗಳನ್ನು ಸ್ಫೋಟಕ ಬಳಸಿ ಚೂರು ಮಾಡಲಾಗುತ್ತಿತ್ತು ಎಂದು ಗಾಯಾಳುವಿನ ಸಹೋದರ ಪ್ರತಾಪ್ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಸುಮಾರು 5 ಗಂಟೆಯ ವೇಳೆಯಲ್ಲಿ ಕಲ್ಲು ಬಂಡೆಗಳನ್ನು ಸ್ಪೋಟಿಸುವ ಕೆಲಸ ನಡೆಯುತ್ತಿದ್ದಾಗ. ಆ ಸ್ಥಳದಿಂದ ಸ್ವಲ್ಪ ದೂರದಲ್ಲಿ ಇದ್ದ ಮನೆಯ ಎದುರು ಗೇರು ಬೀಜದ ಸಿಪ್ಪೆ ಸುಲಿಯುವ ಕೆಲಸವನ್ನು ಮಾಡಿಕೊಂಡಿದ್ದ ವನಜಾ ಅವರಿಗೆ ಸಿಡಿದ ಕಲ್ಲುಗಳು ಬಂದು ವೇಗವಾಗಿ ತಗುಲಿದ್ದರಿಂದಾಗಿ ಅವರ ಕಣ್ಣಿನ ಮೇಲ್ಬಾಗ, ಕೈ ಹಾಗೂ ಸೊಂಟಗಳಿಗೆ ಪೆಟ್ಟು ಬಿದ್ದಿದೆ.

ಘಟನೆಯ ಕುರಿತಂತೆ ಪ್ರತಿಕ್ರಿಯಿಸಿರುವ ಅವರ ಸಂಬಂಧಿಕರು ಕಳೆದ ಕೆಲವು ದಿನಗಳಿಂದ ಬಂಡೆಗಳನ್ನು ಸ್ಪೋಟಿಸುವ ಕೆಲಸ ನಡೆಯುತ್ತಿದ್ದರೂ, ಯಾವುದೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಗುರುವಾರವೂ ಸ್ಪೋಟಕದಿಂದಾಗಿ ಸ್ಥಳೀಯ ಬಾಬಿ ದೇವಾಡಿಗ ಎನ್ನುವವರ ಮನೆಯ ಸಾಮಾಗ್ರಿಗಳಿಗೆ ಹಾನಿಯುಂಟಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ಪೋಟಕಗಳನ್ನು ನಡೆಸಲಾಗುತ್ತಿದ್ದರೂ, ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಇಂಜಿನಿಯರ್ ಸ್ಥಳಕ್ಕೆ ಬಂದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ವೈದ್ಯರ ಅಸಹಾಕಾರ: ಗಾಯಾಳುವನ್ನು ಚಿಕಿತ್ಸೆಗಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ತಂದಾಗ ಇಲ್ಲಿನ ವೈದ್ಯಾಧಿಕಾರಿಗಳು, ಗಾಯಾಳುವಿನ ಸಂಬಂಧಿಕರಲ್ಲಿ ನೀವು ಪರಿಹಾರದ ದುಡ್ಡಿಗಾಗಿ ಈಕೆಯನ್ನು ಆಸ್ಪತ್ರೆಗೆ ಸೇರಿಸುತ್ತಿದ್ದೀರಾ ಎಂದು ಕೇಳಿದ್ದರು ಎಂದು ಆಕ್ರೋಶ ವ್ಯಕ್ತ ಪಡಿಸಿದ ಆಕೆಯ ಸಂಬಂಧಿಕರು, ಈ ಕುರಿತು ಸ್ವಷ್ಟನೆ ನೀಡುವಂತೆ ವೈದ್ಯಾಧಿಕಾರಿಗಳನ್ನು ಒತ್ತಾಯಿಸಿದ ಘಟನೆಯೂ ಶುಕ್ರವಾರ ರಾತ್ರಿ ವರದಿಯಾಗಿದೆ.

Write A Comment