ಕನ್ನಡ ವಾರ್ತೆಗಳು

ವೀರೇಂದ್ರ ಹೆಗ್ಗಡೆ ಧರ್ಮಸ್ಥಳದ 1,600 ಎಕರೆ ಭೂಮಿ ಬಡ ಭೂರಹಿತರಿಗೆ ಹಂಚಬೇಕು :

Pinterest LinkedIn Tumblr

nagarika_seva_pressmeet_1

ಮಂಗಳೂರು, ಡಿ.18  : ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಕಾನೂನಿಗೆ ಅತೀತರಲ್ಲ. ಅವರು ಅಕ್ರಮವಾಗಿ ಬಳಸಿಕೊಂಡಿರುವ ಸುಮಾರು 1,600 ಎಕರೆ ಸರಕಾರಿ ಭೂಮಿಯನ್ನು ಮರಳಿಸಬೇಕು ಮತ್ತು ಸರಕಾರ ಆ ಭೂಮಿಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ ಬಡ ಭೂ ರಹಿತರಿಗೆ ಹಂಚಬೇಕು ಎಂದು ಗುರುವಾಯಕೆರೆಯ ನಾಗರಿಕ ಸೇವಾ ಟ್ರಸ್ಟ್ ಆಗ್ರಹಿಸಿದೆ.  ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಟ್ರಸ್ಟ್‌ನ ಅಧ್ಯಕ್ಷ ಕೆ.ಸೋಮನಾಥ ನಾಯಕ್, ‘ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳಿಗಾಗಿ ‘ಹೂದೋಟ’ ಮತ್ತು ‘ಮೃಗಾಲಯ’ ಸ್ಥಾಪಿಸಲು ಶಾಂತಿವನ ಟ್ರಸ್ಟ್ ಮೂಲಕ 14.65 ಎಕರೆ ಸರಕಾರಿ ಜಮೀನಿಗೆ ಅರ್ಜಿ ಸಲ್ಲಿಸಿ ಬಳಿಕ ಮಂಜೂರಾತಿ ಹಂತದಲ್ಲಿ ಅದನ್ನು ‘ಪ್ರಕೃತಿ ಚಿಕಿತ್ಸಾಲಯ’ ಎಂದು ತಿದ್ದುಪಡಿ ಮಾಡಿಕೊಂಡಿರುವುದು ಕಾನೂನು ಬಾಹಿರವಾಗಿದೆ. ಈ ಬಗ್ಗೆ ಸಾಕ್ಷಾಧಾರ ಸಮೇತ ಮುಖ್ಯಮಂತ್ರಿಗೆ ದೂರು ನೀಡಿದ ಪರಿಣಾಮ ಅವರು ಇತ್ತೀಚೆಗೆ ಧರ್ಮಸ್ಥಳಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ಅನಾರೋಗ್ಯದ ನೆಪದಲ್ಲಿ ರದ್ದುಪಡಿಸಿದ್ದಾರೆ’ ಎಂದು ತಿಳಿಸಿದರು.

ಯಾವುದೇ ಅರ್ಜಿಯನ್ನು ಸಲ್ಲಿಸದೆ ಶ್ರೀಮಂತರಿಗಾಗಿರುವ ಲಾಭದಾಯಕ (ಬೆಡ್‌ಗೆ 400ರಿಂದ 4,000 ರೂ. ತನಕ) ಚಿಕಿತ್ಸಾಲಯಕ್ಕೆ ಅಕ್ರಮವಾಗಿ ಸ್ಥಳ ಮಂಜೂರಾತಿ ಆಗಿರುವುದು ಜಿಲ್ಲಾಧಿಕಾರಿ ಹಿಂದೆ ನಡೆಸಿದ ತನಿಖಾ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದ ಸೋಮನಾಥ ನಾಯಕ್, ಉಜಿರೆಯಲ್ಲಿ 24.32 ಮತ್ತು 14.16 ಎಕ್ರೆ ಕೃಷಿ ಭೂಮಿ ಯನ್ನು ಎಸ್‌ಡಿಎಂ ಎಜುಕೇಶನಲ್ ಟ್ರಸ್ಟ್‌ನಿಂದ ಎಸ್‌ಡಿಎಂ ಎಜುಕೇಶನಲ್  ಸೊಸೈಟಿಗೆ ‘ಮಾರಾಟ’ ಮಾಡಿರುವುದು ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಕಾಯ್ದೆಯ ಸ್ಪಷ್ಟಉಲ್ಲಂಘನೆಯಾಗಿದೆ. ಮೈಸೂರಿನಲ್ಲಿ ಕೃಷಿ ಭೂಮಿ ಖರೀದಿಸಲು 1993ರಲ್ಲಿ ಅಲ್ಲಿನ ಸಹಾಯಕ ಆಯುಕ್ತರಿಂದ 1 ವರ್ಷಕ್ಕೆ ಸೀಮಿತವಾದ ಅನುಮತಿಯನ್ನು ಕ್ರಯಪತ್ರ ದಲ್ಲಿ ಕಾಣಿಸಿ ಅದನ್ನೇ ಸರಕಾರ ನೀಡಿದ ಅನುಮತಿ ಎಂದು ಸುಳ್ಳು ಪ್ರಮಾಣ ಪತ್ರವನ್ನು ಬೆಳ್ತಂಗಡಿ ಸಬ್ ರಿಜಿಸ್ಟ್ರಾರ್‌ನಲ್ಲಿ ಸಲ್ಲಿಸಿ ವಂಚಿಸಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆಯ ಪ್ರ.ಕಾರ್ಯದರ್ಶಿಗಳು ತನಿಖೆಗೆ ಆದೇಶಿಸಿದ್ದಾರೆ ಎಂದು ಹೇಳಿದರು.

nagarika_seva_pressmeet_2

ಸರಕಾರವು ಹೆಗ್ಗಡೆಯವರ ವಿವಿಧ ಸಂಸ್ಥೆಗಳಲ್ಲದೆ ಕುಟುಂಬದ ಸದಸ್ಯರಿಗೆ ಈವರೆಗೆ ಜಿಲ್ಲೆಯಲ್ಲಿ ನೀಡಿದ ಒಟ್ಟು ಭೂಮಿ 176 ಎಕರೆ ದಾಟಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಪಡೆದ ಭೂಮಿಯ ವಿವರ ಸಂಗ್ರಹಿಸಲಾಗುತ್ತಿದೆ ಎಂದ ಸೋಮ ನಾಥ ನಾಯಕ್, ಅಧಿಕಾರಿಗಳು ತನಿಖೆ ಮಾಡಲು ಹಿಂದೇಟು ಹಾಕಿದಲ್ಲಿ ಅಥವಾ ಪ್ರಭಾವಕ್ಕೊಳಗಾದಲ್ಲಿ ಟ್ರಸ್ಟ್ ಹೈಕೋರ್ಟ್‌ನ ಮೆಟ್ಟಿಲೇರಲಿದೆ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ವಿದ್ಯಾ ನಾಯಕ್, ಸ್ಥಾಪಕ ಟ್ರಸ್ಟಿ ರಂಜನ್ ರಾವ್ ಯರ್ಡೂರ್, ಟ್ರಸ್ಟಿ ಕೆ.ಸೋಮ ಉಪಸ್ಥಿತರಿದ್ದರು.

Write A Comment