ಕನ್ನಡ ವಾರ್ತೆಗಳು

ಅಸ್ಪಶ್ಯತಾ ನಿವಾರಣೆಗೆ ಮಾನಸಿಕ ಪರಿವರ್ತನೆಯೇ ಪ್ರಮುಖ ಕಾರಣ : ನಿಡುಮಾಮಿಡಿ ಶ್ರೀ

Pinterest LinkedIn Tumblr

nidu_mamade_photo_2

ಮಂಗಳೂರು, ಡಿ.15 ದೇಶದ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಲು ಹಿಂದುತ್ವದ ಸೀಮಿತ ಚೌಕಟ್ಟು ಬೇಡ. ಬಹು ಸಂಸ್ಕೃತಿಯನ್ನು ಒಳಗೊಂಡ ಭಾರತೀಯರು ಎಲ್ಲಾ ಒಂದೇ ಎನ್ನುವ ‘ಭಾರತೀಯತೆ’ಯೆಂಬ ಪ್ರಜ್ಞೆಯನ್ನು ಜನರಲ್ಲಿ ಜಾಗೃತಗೊಳಿಸಿದರೆ ಸಾಕು ಎಂದು ನಿಡುಮಾಮಿಡಿ ಮಹಾ ಸಂಸ್ಥಾನ ಮಠದ ವೀರಭದ್ರಚೆನ್ನಮಲ್ಲ ಮಹಾಸ್ವಾಮೀಜಿ ತಿಳಿಸಿದ್ದಾರೆ. ಅವರು  ನಂತೂರು ಶಾಂತಿಕಿರಣ ಸಭಾಂಗಣದಲ್ಲಿ ಅಭಿಮತ ಸಂಘಟನೆಯ ವತಿಯಿಂದ ಹಮ್ಮಿಕೊಂಡ ಜನನುಡಿ ಸಮಾವೇಶದ ಸಂದರ್ಭದಲ್ಲಿ ಹಮ್ಮಿಕೊಂಡ ಮಾಧ್ಯಮ ಸಂವಾದ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ದೇಶದಲ್ಲಿ ಭಯೋತ್ಪಾದನೆ, ಕೋಮುವಾದದ ಸೃಷ್ಟಿಯ ಹಿಂದೆ ರಾಜಕೀಯ ಹಾಗೂ ಸಣ್ಣ ಪ್ರಮಾಣದ ಆರ್ಥಿಕ ಕಾರಣಗಳೂ ಅಡಗಿವೆ. ಆದರೆ ಮಠ ಮಂದಿರಗಳನ್ನು ನಡೆಸುವ ಸ್ವಾಮೀಜಿಗಳು ಧಾರ್ಮಿಕ ಮುಖಂಡರು ಇದರಲ್ಲಿ ತೊಡಗಿಕೊಂಡಿರುವುದು ಅಪಾಯಕಾರಿ ಬೆಳವಣಿಗೆ. ಸಮಾಜವನ್ನು ಕಟ್ಟಬೇಕಾದವರು, ಜನರ ಮನಸ್ಸುಗಳ ನಡುವೆ ಸೇತುವೆಗಳನ್ನು ನಿರ್ಮಿಸಬೇಕಾದವರು ಸಮಾಜದಲ್ಲಿ ಒಡಕು ಉಂಟು ಮಾಡುತ್ತಿರುವುದು ವಿಪರ್ಯಾಸ. ಕೋಮುವಾದದಿಂದ, ಅಸ್ಪಶ್ಯತೆಯಿಂದ, ಆರ್ಥಿಕ ಅಸಮಾನತೆಯಿಂದ ಒಡೆದ ಕನ್ನಡಿಯಂತಾಗಿರುವ ಸಮಾಜವನ್ನು ಮತ್ತೆ ಒಂದುಗೂಡಿಸುವ ಸಾಮೂಹಿಕ ಕೆಲಸ ತಳಮಟ್ಟದಿಂದಲೇ ಆಗಬೇಕಾಗಿದೆ ಎಂದು ನಿಡುಮಾಮಿಡಿಶ್ರೀ ನುಡಿದರು.

nidu_mamade_photo_1

ಅಸ್ಪ್ಪಶ್ಯತಾ ನಿವಾರಣೆಗೆ ಕಾನೂನು ಜಾರಿ ಮಾಡಿದ್ದರೂ ಸರಕಾರದ ಬಿಸಿಯೂಟ ಯೋಜನೆಯಲ್ಲಿ, ದೇವಸ್ಥಾನಗಳಲ್ಲಿ, ಮಠಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟಿಗೆ ಊಟಮಾಡದೆ ಇರುವುದು, ಸಾಮಾಜಿಕ ಬಹಿಷ್ಕಾರ ಹಾಕುವುದು, ಮುಟ್ಟಿಸಿಕೊಳ್ಳದೆ ಒಂದು ಸಮುದಾಯವನ್ನು ದೂರ ಇಡುವುದು ನಡೆಯುತ್ತಾ ಬಂದಿದೆ. ಇಂದಿಗೂ ಜನಸಮುದಾಯದ ನಡುವೆ ಅಸ್ಪಶ್ಯತಾ ಆಚರಣೆ ಜೀವಂತವಾಗಿರುವುದಕ್ಕೆ ಸಾಕಷ್ಟು ಘಟನೆಗಳು ಸಾಕ್ಷಿಯಾಗಿವೆ. ಈ ಹಿನ್ನೆಲೆಯಲ್ಲಿ ಅಸ್ಪ್ಪಶ್ಯತೆಯ ನಿವಾರಣೆ ಮೊದಲು ಜನರ ಮನಸ್ಸಿನಲ್ಲಾಗಬೇಕು. ಆ ರೀತಿಯ ಮಾನಸಿಕ ಪರಿವರ್ತನೆಗೆ ಮಠ ಮಂದಿರಗಳು ಪ್ರಯತ್ನಿಸಬೇಕಾಗಿದೆ ಎಂದು ನಿಡುಮಾಮಿಡಿ ಶ್ರೀ ತಿಳಿಸಿದ್ದಾರೆ.

ಮಠ ಮಂದಿರಗಳ ರಾಷ್ಟ್ರೀಕರಣಕ್ಕೆ ನನ್ನ ವಿರೋಧವಿಲ್ಲ: ಸಾಕಷ್ಟು ಸಾರ್ವಜನಿಕ ಹಣ ಸಂಗ್ರಹವಾಗುವ ಮಠ ಮಂದಿರಗಳು ರಾಷ್ಟ್ರೀಕರಣವಾಗಬೇಕೆ? ಈ ಬಗ್ಗೆ ನಿಮ್ಮ ನಿಲುವೇನು? ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಉತ್ತರಿಸಿದ ಸ್ವಾಮೀಜಿ, ಮಠ ಮಂದಿರಗಳು ರಾಷ್ಟ್ರೀಕರಣವಾಗಬೇಕು ಎನ್ನುವ ಪ್ರಸ್ತಾಪ ಬಂದರೆ ನಾವೇ ಮೊದಲು ಸ್ವಾಗತಿಸುತ್ತೇವೆ. ಆದರೆ ಮಠ ಮಂದಿರಗಳನ್ನು ರಾಷ್ಟ್ರೀಕರಣ ಮಾಡುವ ಬಗ್ಗೆ ಜನರಿಗೂ ಆಸಕ್ತಿ ಇದ್ದಂತೆ ತೋರುತ್ತಿಲ್ಲ. ಆದರೆ ಸಾರ್ವಜನಿಕ ಹಣ ಸಂಗ್ರಹವಾಗುವ ಕೇಂದ್ರಗಳಿಗೆ ಸರಕಾರ ರಾಷ್ಟ್ರೀಯ ನೀತಿ ರೂಪಿಸುವುದು ಸೂಕ್ತ ’ಎಂದು ಸ್ವಾಮೀಜಿ ತಿಳಿಸಿದರು.

ನಿಡುಮಾಮಿಡಿ ಮಠದಲ್ಲಿ ದಲಿತ ಅರ್ಚಕರನ್ನು ನೇಮಿಸಲಾಗಿದೆ. ಮಹಿಳೆಯರನ್ನು ದಲಿತರನ್ನು ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಿಸಿ ಮುಟ್ಟಿಬರುವ ಅವಕಾಶ ಕಲ್ಪಿಸಲಾಗಿದೆ, ದಲಿತರೊಂದಿಗೆ ಸೇರಿ ಸಹಭೋಜನ ಮಾಡಲಾಯಿತು. ಈ ಕೆಲಸಗಳ ಮೂಲಕ ಇತರರೂ ಸಾಮಾಜಿಕ ಅಸ್ಪಶ್ಯತೆಯನ್ನು ದೂರಮಾಡಲಿ ಎನ್ನುವ ಆಶಯ ನಮ್ಮದು. ಈ ಬಗ್ಗೆ ಹಲವು ಮಠಾಧಿಪತಿಗಳ ಜೊತೆ ಸಂವಾದ ನಡೆಸಿದಾಗ ಕೆಲವರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಕರಾವಳಿಯಲ್ಲಿನ ಎಲ್ಲಾ ಮಠ ಮಂದಿರಗಳ ಸ್ವಾಮೀಜಿಗಳನ್ನು ಕರೆದರೂ ಯಾರೂ ಭಾಗವಹಿಸದೆ ಉತ್ತಮ ಪ್ರತಿಕ್ರಿಯೆ ದೊರೆತಿಲ್ಲ ಎಂದು ನಿಡುಮಾಮಿಡಿ ಶ್ರೀ ತಿಳಿಸಿದರು.

ಹಿಂದಿನ ಕಾಲದಲ್ಲಿ ಮಠ ಮಂದಿರದ ಹಂಗಿಲ್ಲದೆ ಜನ ಸಾಮಾನ್ಯರ ನಡುವೆ ಸೌಹಾರ್ದದ ಕೊಂಡಿಯಾಗಿದ್ದ ಸಾಧು ಸಂತರ ಪರಂಪರೆಯನ್ನು ಮತ್ತೆ ನೆನಪಿಸಿಕೊಳ್ಳಬೇಕಾಗಿದೆ ಎಂದು ನಿಡುಮಾಮಿಡಿಶ್ರೀ ತಿಳಿಸಿದರು.

Write A Comment